ಗೃಹ ಮಂತ್ರಿಗಳೇ ಸ್ಯಾಂಟ್ರೋ ರವಿ ಜೊತೆ ನಿಮ್ಮ ಸಂಬಂಧವೇನು?: ದಿನೇಶ್ ಗುಂಡೂರಾವ್
ಬೆಂಗಳೂರು: ‘ಸ್ಯಾಂಟ್ರೋ ರವಿ' ಎಂಬ ಪಿಂಪ್, ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾನೆ. ಈ ಸರಕಾರದಲ್ಲಿ ‘ತಲೆಹಿಡುಕ'ನೊಬ್ಬ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವಷ್ಟು ಪ್ರಭಾವಿಯೇ? ಗೃಹಮಂತ್ರಿ ಜ್ಞಾನೇಂದ್ರರವರೆ ತಲೆಹಿಡುಕ ಸ್ಯಾಂಟ್ರೋ ರವಿ ಜೊತೆ ನಿಮ್ಮ ಸಂಬಂಧವೇನು? ನಿಮ್ಮ ಗಮನಕ್ಕೆ ಬಾರದೆ ವರ್ಗಾವಣೆ ನಡೆಸಲು ಸಾಧ್ಯವೇ?’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ತಲೆಹಿಡುಕ ಸ್ಯಾಂಟ್ರೋ ರವಿ ವರ್ಗಾವಣೆ ಸಂಬಂಧ ಹಲವು ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿರೋ ಆಡಿಯೋ ರಿಲೀಸ್ ಆಗಿದೆ. ಆ ಆಡಿಯೋದಲ್ಲಿ ಬೊಮ್ಮಾಯಿಯವರೆ ನನಗೆ ಸರ್ ಎನ್ನುತ್ತಾರೆ. ನೀವು ನನಗೆ ಸರ್ ಎನ್ನಬೇಕೆಂದು ಡಿವೈಎಸ್ಪಿಯೊಬ್ಬರಿಗೆ ಧಮಕಿ ಹಾಕಿದ್ದಾನೆ. ಈ ಸರಕಾರದ ಪ್ರಭಾವಿಗಳ ರಕ್ಷಣೆಯಿಲ್ಲದೆ ಅಧಿಕಾರಿಗೆ ಧಮಕಿ ಹಾಕಲು ಸ್ಯಾಂಟ್ರೋ ರವಿಗೆ ಸಾಧ್ಯವೇ?’ ಎಂದು ಕಿಡಿಕಾರಿದ್ದಾರೆ.
‘ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟ್ರೋ ರವಿ ಜೊತೆ ಬಿಜೆಪಿಯ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯವರು ವಿಶೇಷವಾಗಿ ತಲೆಹಿಡುಕರ ಸಂಗ ಯಾಕೆ ಬೆಳೆಸುತ್ತಾರೋ ಅರ್ಥವಾಗುತ್ತಿಲ್ಲ? ಬಿಜೆಪಿಯವರು ತಲೆಹಿಡುಕರ ಸಂಗ ಬೆಳೆಸುವ ಹಿಂದಿನ ಮರ್ಮವೇನು? ಉತ್ತರಿಸುವಿರಾ ಬೊಮ್ಮಾಯಿಯವರೇ?’ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.