ಉಳ್ಳಾಲ: ಶೋಭಾಯಾತ್ರೆಗೆ ಮುಸ್ಲಿಮರ ಪಾನೀಯ

Update: 2023-01-07 18:05 GMT

ಉಳ್ಳಾಲ: ಕಲ್ಲಾಪು, ಬುರ್ದುಗೋಳಿಯ ಶ್ರೀ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದಲ್ಲಿ ನಿರ್ಮಾಣಗೊಂಡ ನೂತನ ಭಂಡಾರದ ಮನೆಗೆ ಭಕ್ತಾದಿಗಳು ನೀಡಿದ ಬಂಗಾರದ ಮುಟ್ಟಾಲೆಯನ್ನು  ಶೋಭಾಯಾತ್ರೆಯಲ್ಲಿ ಸಮರ್ಪಿಸಲಾಯಿತು. 

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಿಂದ ಶೋಭಾಯಾತ್ರೆ ಹೊರಟು ಕಲ್ಲಾಪು, ಕೆರೆಬೈಲು ಬಳಿಯ ಶ್ರೀನಾಗದೇವರ ಕಟ್ಟೆಯಿಂದ ಪೂರ್ಣಕುಂಭ ಕಲಶ, ವಾದ್ಯ, ಚೆಂಡೆಗಳ ಘೋಷದೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಬುರ್ದುಗೋಳಿಯ ಕಾಯಂಗಳ ಬಳಿ ನೂತನವಾಗಿ ನಿರ್ಮಿಸಿರುವ ಭಂಡಾರಮನೆಗೆ ಬಂಗಾರದ ಮುಟ್ಟಾಲೆ ಸಮರ್ಪಣೆಗೆ ಬಂದ ಭಕ್ತಾದಿಗಳಿಗೆ ಕಲ್ಲಾಪು, ಪಟ್ಲ ಮಸೀದಿ ಬಳಿ ನೆರೆದಿದ್ದ ಮುಸ್ಲಿಮರು ತಂಪು ಪಾನೀಯ ನೀಡಿ ಉಪಚರಿಸಿದರು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ, ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ಬೆವರು ಮತ್ತು‌ ಕಣ್ಣೀರ ಹನಿಗಿರುವ ಶಕ್ತಿ ಬೇರೆ ಯಾವುದಕ್ಕೂ ಸಿಗದು, ಅದು ಈ ಮಣ್ಣಿನ‌ ಗುಣ. ಶ್ರಮ ಜೀವಿಗಳಿಗೂ ಸಾಕಷ್ಟು ಗೌರವ ಸಿಕ್ಕಿದ್ದು, ಅವಮಾನಕ್ಕೆ ತುತ್ತಾಗಿ ಕಣ್ಣೀರ ಹನಿ ಸುರಿಸಿದವರಿಗೂ ಶಾಶ್ವತವಾದ ಸ್ಥಾನ ಸಿಕ್ಕಿರುವುದಕ್ಕೆ ಕೊರಗ ತನಿಯನಿಗೆ ಕಲ್ಲಾಪು ಬುರ್ದುಗೋಳಿಯ ಈ ಮಣ್ಣಿನಲ್ಲಿ ಬಂಗಾರದ ಮುಟ್ಟಾಲೆ ಸಮರ್ಪಣೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭ ದೈವ ನರ್ತಕರಾದ ಮಾಯಿಲ, ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು, ಗೌರವಾಧ್ಯಕ್ಷ ಸಂಜೀವ ಭಂಡಾರಿ ತೋಡ್ದಲ, ಸ್ವರ್ಣಶಿಲ್ಪಿ ಸತೀಶ್ ಆಚಾರ್ಯ ಕುಪ್ಪೆಪದವು ಹಾಗೂ ಕ್ಷೇತ್ರದ ಸೇವಕ ರಾಘವ ಕುಲಾಲ್ ತೋಡ್ದಲ ಇವರನ್ನು ಸನ್ಮಾನಿಸಲಾಯಿತು. 

ಶ್ರೀ ಕ್ಷೇತ್ರದ ಭಂಡಾರಮನೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಚಂದ್ರಹಾಸ ಪಂಡಿತ್ ಹೌಸ್, ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಗಂಗಾಧರ್ ಉಳ್ಳಾಲ್, ಸಮಿತಿ ಉಪಾಧ್ಯಕ್ಷ ಹಾಗೂ ಮಧ್ಯಸ್ಥ ದೇವದಾಸ್ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಗಟ್ಟಿ ಕಾಯಂಗಳ, ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ನಾಯಕ್ ಕಲ್ಲಾಪು, ಪ್ರವೀಣ್ ಕುಂಪಲ, ಪುರುಷೋತ್ತಮ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.

Similar News