ಕಾಟಾಚಾರಕ್ಕೆ ಸಮ್ಮೇಳನ ಮಾಡಿದಾಗ ಅದನ್ನು ಬಹಿಷ್ಕರಿಸಲೇಬೇಕಾಗುತ್ತದೆ: ಡಾ. ಪುರುಷೋತ್ತಮ ಬಿಳಿಮಲೆ
''ಬಾಬ್ರಿ ಮಸೀದಿ ಧ್ವಂಸದ ನಂತರ ಭಾರತ ಆಳವಾಗಿ ಗಾಯಗೊಂಡಿದೆ''
ಬೆಂಗಳೂರು, ಜ.8: ಕರ್ನಾಟಕದ ಎದುರಲ್ಲಿರುವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧದ ಬಿಕ್ಕಟ್ಟುಗಳ ಚರ್ಚೆಗೆ ಸೂಕ್ತ ವೇದಿಕೆಗಳೇ ಇಲ್ಲವಾಗಿದೆ. ಇರುವ ವೇದಿಕೆಗಳು ಆ ಕೆಲಸ ಮಾಡುತ್ತಿಲ್ಲ. ಅಂಥ ಕೆಲಸ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಕಾಟಾಚಾರದ ಸಮ್ಮೇಳನ ಮಾಡಿದಾಗ ಅದನ್ನು ಬಹಿಷ್ಕರಿಸಲೇಬೇಕಾಗುತ್ತದೆ ಎಂದು ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಜನಸಾಹಿತ್ಯ ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದ ಅವರು, ಅಕಾಡೆಮಿಗಳು, ವಿಶ್ವವಿದ್ಯಾಲಯಗಳು ಏನನ್ನೂ ಮಾಡದೆ ಕುಳಿತಿವೆ. ಏಕೀಕರಣದಂಥ ಸಂದರ್ಭದಲ್ಲಿ ಬಹುದೊಡ್ಡ ಕೊಡುಗೆ ಕೊಟ್ಟಿದ್ದ ಸಾಹಿತ್ಯ ಪರಿಷತ್ತು ಏನನ್ನೇ ಆದರೂ ಸಾಧಿಸಬಹುದು ಎಂಬುದನ್ನು ತೋರಿಸಿತ್ತು. ಆದರೆ ಅದಿಂದು ಏನಾಗಿದೆ ಎಂಬುದನ್ನು ನೋಡುತ್ತಿದ್ದೇವೆ ಎಂದರು.
ಸನ್ನಿವೇಶ ಹೀಗಿರುವಾಗ ಇಂಥ ಸಮಾವೇಶಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮಾಡಿ, ಕರ್ನಾಟಕಕ್ಕೆ ಅಗತ್ಯವಾದ ಭಾಷಾನೀತಿ ರೂಪಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಭಾರತದ ತಾಯ್ನುಡಿಗಳ ಸಂಖ್ಯೆ 19,569 ಇದೆ. ಅವುಗಳಲ್ಲಿ 22ನ್ನು ಮಾತ್ರ ಸಂವಿಧಾನ ಅಂಗೀಕರಿಸಿದೆ. ಅವುಗಳಲ್ಲಿ ಉತ್ತರ ಭಾರತದ್ದೇ 18 ಭಾಷೆಗಳಿದ್ದು, ದಕ್ಷಿಣ ಭಾರತದ್ದು 4 ಮಾತ್ರ. ಕರ್ನಾಟಕದಲ್ಲಿಯೇ 72 ಭಾಷೆಗಳಿವೆ. ಕೊರಗ ಭಾಷಿಕರ ಸಂಖ್ಯೆ 11 ಸಾವಿರದಿಂದ 3 ಸಾವಿರಕ್ಕೆ ಕುಸಿದಿದೆ. ಕೊಡವ ಮಾತನ್ನಾಡುವವರ ಸಂಖ್ಯೆ ಕಳೆದ 10 ವರ್ಷಗಳಲ್ಲಿ 30 ಸಾವಿರದಷ್ಟು ಇಳಿದಿದೆ. ನಮ್ಮದೇ ಭಾಷೆಗಳು ಹೀಗೆ ಪತನಗೊಳ್ಳುತ್ತಿರುವಾಗ ಅವನ್ನು ಉಳಿಸಿಕೊಳ್ಳಬೇಕಾದದ್ದು ಸ್ವಾಯತ್ತ ಸಂಸ್ಥೆಗಳು ಮಾಡಬೇಕಿರುವ ಕೆಲಸ. ಆದರೆ ಇವರಿಗೆ ಮಂತ್ರಿ ಸಮಾನವಾದ ಹುದ್ದೆ ಬೇಕಾಗಿದೆ. ಕರ್ನಾಟಕದ ಸಾಹಿತಿ, ಕಲಾವಿದರು ನಾಚಿಕೆಪಡಬೇಕಾದ ವಿಚಾರ ಇದು ಎಂದರು.
ನಮ್ಮದಲ್ಲದ ಸಂಸ್ಕೃತ ಇವರಿಗೆ ಬೇಕು. ಆದರೆ ನಮ್ಮದೇ ಸಂಸ್ಕೃತಿಯ ಭಾಗವಾಗಿರುವ ದಖನಿ, ಉರ್ದು ಯಾಕೆ ಬೇಡ ಎಂದು ಪ್ರಶ್ನಿಸಿದ ಬಿಳಿಮಲೆ, ಅಪ ವ್ಯಾಖ್ಯಾನಗಳನ್ನೇ ಮುಂದೆ ಮಾಡಿ, ನಿಜವಾದ ವ್ಯಾಖ್ಯಾನಗಳನ್ನು ಹಿನ್ನೆಲೆಗೆ ಸರಿಸಲಾಗುತ್ತಿದೆ ಎಂದು ಟೀಕಿಸಿದರು.
ಬಾಬ್ರಿ ಮಸೀದಿ ಧ್ವಂಸದ ನಂತರ ಭಾರತ ಆಳವಾಗಿ ಗಾಯಗೊಂಡಿದೆ. ಅದು ಇನ್ನಷ್ಟಾಗಿ, ಕೀವು ತುಂಬಿದೆ. ಇಂಥ ಸಂದರ್ಭದಲ್ಲಿ ಲೇಖಕನ ಜವಾಬ್ದಾರಿ ಏನು ಎಂಬ ಚಿಂತನೆ ಅಗತ್ಯ ಎಂದು ಬಿಳಿಮಲೆ ಹೇಳಿದರು. ಕಲಬುರ್ಗಿ ಹತ್ಯೆ ಬಗ್ಗೆ ಬೇರಾವುದೋ ಭಾಷೆಯ ಲೇಖಕಕರು ಕಾದಂಬರಿ ಬರೆಯುತ್ತಾರೆ. ಆದರೆ ಅದು ಕನ್ನಡ ಲೇಖಕರನ್ನು ಯಾಕೆ ಕಾಡುವುದಿಲ್ಲ ಎಂದು ಅವರು ಪ್ರಶ್ನಿಸಿದರು.
ನಮ್ಮ ಸಂಸ್ಕೃತಿಯನ್ನು ಕಟ್ಟುವಲ್ಲಿ ಬೌದ್ದರ ಪಾತ್ರ ಬಹುದೊಡ್ಡದು. ಅನಂತರ ಜೈನಸಾಹಿತ್ಯ ವೆಂದರೆ ಕನ್ನಡ ಸಾಹಿತ್ಯವೆನ್ನುವಷ್ಟು ಅದು ಗಾಢವಾಗಿದೆ. ಕ್ರೈಸ್ತ ಮಿಷನರಿಗಳು ಕೊಟ್ಟ ಕೊಡುಗೆ ಎಷ್ಟು ದೊಡ್ಡದು ಎಂಬುದನ್ನು ನಿರ್ಲಕ್ಷಿಸುವ ಹಾಗಿಲ್ಲ. ಕ್ರೈಸ್ತ ಮಿಷನರಿಗಳು ಶಾಲೆ ಆರಂಭಿಸದಿದ್ದರೆ ಇಂದು ನಾನಿಲ್ಲಿ ನಿಂತು ಮಾತನಾಡುವುದು ಸಾಧ್ಯವಾಗುತ್ತಿರಲಿಲ್ಲ. ಮುಸ್ಲಿಂರು 300 ವರ್ಷ ಕಾಲ ಆಳಿದರು. ಮಹತ್ತರವಾದ ಕೊಡುಗೆಯನ್ನು ನಮ್ಮ ಸಂಸ್ಕೃತಿಗೆ ಕೊಟ್ಟರು. ನಂತರ ವಚನ ಚಳವಳಿ ಬಂತು. ಪರಂಪರೆಯ ಬಗ್ಗೆ ಒಳ್ಳೆಯದನ್ನು ನಾವು ಗ್ರಹಿಸಿ ಹೇಳಬೇಕಾಗಿದೆ ಎಂದರು.
ನಮ್ಮದೇ ಆದ 72 ಭಾಷೆಗಳನ್ನು ಉಳಿಸಿಕೊಳ್ಳಲಾಗದಿದ್ದರೆ ನಮ್ಮ ಪರಂಪರೆಗೆ ನಾವೇ ಅನ್ಯಾಯ ಮಾಡಿದಂತೆ ಎಂದು ಅವರು ಎಚ್ಚರಿಸಿದರು.