''ಕಸಾಪ ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ದಲಿತ, ಮಹಿಳೆಯರು, ಅಲ್ಪಸಂಖ್ಯಾತರು ಸಹಿತ ಎಲ್ಲರಿಗೂ ಪ್ರಾತಿನಿಧ್ಯ ನೀಡಬೇಕು''

'ಜನಸಾಹಿತ್ಯ ಸಮ್ಮೇಳನ'ದಲ್ಲಿ ನಿರ್ಣಯ

Update: 2023-01-08 15:36 GMT

ಬೆಂಗಳೂರು, ಜ.8: ‘ಜನ ಸಾಹಿತ್ಯ ಸಮ್ಮೇಳನ’ದಲ್ಲಿ ಕಸಾಪ ಕಾರ್ಯಕ್ರಮಗಳಲ್ಲಿ ದಲಿತ, ಮಹಿಳೆಯರು, ಅಲ್ಪಸಂಖ್ಯಾತರು ಸಹಿತ ಎಲ್ಲರಿಗೂ ಪ್ರಾತಿನಿಧ್ಯ ನೀಡಬೇಕು,  ಕರ್ನಾಟಕದಲ್ಲಿರುವ ಎಲ್ಲ ಭಾಷೆಗಳನ್ನು ಸಂರಕ್ಷಿಸಲು ಅಗತ್ಯವಾದ ಸಮಗ್ರ ಭಾಷಾ ನೀತಿಯನ್ನು ರೂಪಿಸುವುದು ಸೇರಿದಂತೆ ಎಂಟು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. 

1. ಸಾಹಿತ್ಯ ಸಮ್ಮೇಳನಗಳು ಒಳಗೊಂಡಂತೆ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯಗಳು ಒಳಗೊಳ್ಳಬೇಕು. ಅದರಲ್ಲಿಯೂ ಮಹಿಳೆಯರು, ದಲಿತರು, ಆದಿವಾಸಿಗಳು, ದಮನಿತರು, ಅಲ್ಪಸಂಖ್ಯಾತ ಸಮುದಾಯದ ಸಾಹಿತಿ, ಕಲಾವಿದರನ್ನು ಒಳಗೊಳ್ಳಲೇಬೇಕು.

2. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸ್ಥೆಗಳ ಸ್ವಾಯತ್ತತೆಯನ್ನು ಸರಕಾರ ಕಾಪಾಡಿಕೊಳ್ಳಬೇಕು.

3. ಈ ಸಂಸ್ಥೆಗಳಿಗೆ ನೇಮಕ ಮಾಡುವಾಗ ಸರಕಾರ ವಿಶೇಷ ಎಚ್ಚರಿಕೆ ವಹಿಸಿ, ಅರ್ಹರನ್ನು ನೇಮಿಸಬೇಕು. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರ ನೇಮಕಾತಿ, ರಂಗಾಯಣದ ನಿರ್ದೇಶಕರ ನೇಮಕಾತಿ ವಿಷಯದಲ್ಲಿ ಸರಕಾರ ತಳೆದ ನಿಲುವು ಖಂಡನೀಯ.

4. ಸರಕಾರದ ಕೋಮುವಾದಿ ನಡೆಗಳನ್ನು ತೀವ್ರವಾಗಿ ಖಂಡಿಸಿದ ಸಮ್ಮೇಳನವು, ನಮ್ಮ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿಯೆ ಇರಬೇಕು ಎಂದು ಆಗ್ರಹಿಸಿದೆ.

5. ಕರ್ನಾಟಕದಲ್ಲಿರುವ ಎಲ್ಲ ಭಾಷೆಗಳನ್ನು ಸಂರಕ್ಷಿಸಲು ಅಗತ್ಯವಾದ ಸಮಗ್ರ ಭಾಷಾ ನೀತಿಯನ್ನು ರೂಪಿಸಲು ಸರಕಾರ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ.

6 ಕನ್ನಡದ ನೆಲದ ಮೇಲೆ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲು ಆಗ್ರಹ.

7 ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಹಾಗೂ ಗಡಿನಾಡ ಕನ್ನಡಿಗರ ರಕ್ಷಣೆ ಮಾಡಬೇಕು ಎಂದು ಒತ್ತಾಯ.

8. ವಿವಿಧ ಬ್ಯಾಂಕುಗಳು ಮತ್ತು ನಂದಿನಿಸೇರಿದಂತೆ ಕರ್ನಾಟಕದ ಜೀವನಾಡಿ ಸಂಸ್ಥೆಗಳನ್ನು ಉತ್ತರ ಭಾರತದ ಸಂಸ್ಥೆಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಸಮ್ಮೇಳನ ವಿರೋಧಿಸಿದೆ.

Similar News