ಬಿಜೆಪಿ ಅಜೆಂಡಾ ಅನುಷ್ಠಾನಗೊಳಿಸುತ್ತಿರುವ ಕಸಾಪ: ದಿನೇಶ್ ಅಮೀನ್‍ಮಟ್ಟು ಟೀಕೆ

Update: 2023-01-08 16:37 GMT

ಬೆಂಗಳೂರು, ಜ.8: ಭಾರತೀಯ ಜನತಾ ಪಕ್ಷ(ಬಿಜೆಪಿ)ವು ತನಗೆ ಮುಸ್ಲಿಮರ ಮತಗಳು ಬೇಡ ಎಂದು ಬಹಿರಂಗವಾಗಿಯೆ ಹೇಳಿದೆ. ಅದರಿಂದಾಗಿ, ಇಡೀ ದೇಶದಲ್ಲಿ ಬಿಜೆಪಿ ಪಕ್ಷದ ಒಬ್ಬ ಶಾಸಕ, ಸಂಸದ, ಸಚಿವ ಇಲ್ಲ. ಒಂದು ರಾಜಕೀಯ ಪಕ್ಷದ ಅಜೆಂಡಾವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕೃತಿಕ ರಂಗದಲ್ಲಿ ಅನುಷ್ಠಾನಗೊಳಿಸಲು ಹೊರಟಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಟೀಕಿಸಿದ್ದಾರೆ.

ರವಿವಾರ ನಗರದ ಕೆ.ಆರ್.ಸರ್ಕಲ್‍ನಲ್ಲಿರುವ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ‘ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟ’ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜನ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣವನ್ನು ಅವರು ಮಾಡಿದರು.

ಮುಸ್ಲಿಮರಿಗೆ ಇವತ್ತು ಕೇವಲ ಸರಕಾರ, ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಹೊರಗಿಟ್ಟಿಲ್ಲ. ಹಲವಾರು ಮಾಧ್ಯಮ ಸಂಸ್ಥೆಗಳಲ್ಲೂ ಅವರಿಗೆ ಪ್ರಾತಿನಿಧ್ಯ ಇಲ್ಲ. ಮುಸ್ಲಿಮರು ಇಷ್ಟೊಂದು ಪ್ರಮಾಣದಲ್ಲಿ ಯಾಕೆ ಬರೆಯಲು ಪ್ರಾರಂಭಿಸಿದ್ದಾರೆ ಎಂದರೆ ಅವರಿಗೆ ಸಾರ್ವಜನಿಕವಾಗಿ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಇರುವ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ ಎಂದು ಅವರು ಹೇಳಿದರು. 

ಮುಸ್ಲಿಮರಲ್ಲಿ ಬಹಳಷ್ಟು ಜನ ಅಂತಮುರ್ಖಿಗಳಾಗುತ್ತಿದ್ದಾರೆ. ಅವರು ಬೇರೆ ದಾರಿಯಿಲ್ಲದೆ ಕಥೆ, ಕವನದ ಮೂಲಕ ತಮ್ಮ ಭಾವನೆಗಳನ್ನು ಹೇಳುತ್ತಿದ್ದಾರೆ. ಅದಕ್ಕೆ ನಾವು ಕಿವಿಗೊಡಬೇಕಾಗುತ್ತದೆ. ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಆ ರೀತಿಯ ಕಿಡಿ ಹಾರಿಸದೆ ಇದ್ದಿದ್ದರೆ, ಈ ಕಾರ್ಯಕ್ರಮ ಆಗುತ್ತಿರಲಿಲ್ಲ. ನಾವು ಈ ವಿಚಾರವನ್ನು ಧನಾತ್ಮಕವಾಗಿ ತೆಗೆದುಕೊಳ್ಳೋಣ ಎಂದು ದಿನೇಶ್ ಅಮೀನ್‍ಮಟ್ಟು ಹೇಳಿದರು.

ತುರ್ತುಪರಿಸ್ಥಿತಿಯ ವಿರುದ್ಧದ ಚಳವಳಿ ಅಹಮದಾಬಾದ್‍ನ ಹಾಸ್ಟೆಲ್‍ವೊಂದರಲ್ಲಿ ಕ್ಯಾಂಟೀನ್‍ನ ಬೆಲೆ ಹೆಚ್ಚಾಗಿದೆ ಎಂದು ವಿದ್ಯಾರ್ಥಿಗಳಿಂದ ಆರಂಭವಾದದ್ದು, ಆನಂತರ ನವ ನಿರ್ಮಾಣ ಚಳವಳಿ ಎಂದು ಜೆ.ಪಿ. ಅದಕ್ಕೆ ಸೇರಿಕೊಂಡ ಬಳಿಕ ಇಂದಿರಾಗಾಂಧಿ ನೇತೃತ್ವದ ಪ್ರಭುತ್ವವನ್ನೆ ಅದು ಬುಡಮೇಲು ಮಾಡಿತು. ಕಾಗೋಡು ಸತ್ಯಾಗ್ರಹ ಚಳವಳಿಯೂ ಒಂದು ಸಣ್ಣ ಕೊಳಗದಲ್ಲಿ ಅಳತೆ ಮಾಡುವ ವಿಚಾರದಲ್ಲಿ ಹುಟ್ಟಿಕೊಂಡಿದ್ದು ಎಂದು ಅವರು ತಿಳಿಸಿದರು.

ಮದುವರಸಯ್ಯ ಮಗಳು ಹಾಗೂ ಹರಳಯ್ಯನ ಮಗನ ಅಂತರ್‍ಜಾತಿಯ ಸಣ್ಣ ಮದುವೆಯಲ್ಲಿ ಕ್ರಾಂತಿ ಆಯಿತು. ಚೌಡರಕೆರಿಯ ಕೆರೆಯ ನೀರನ್ನು ಅಂಬೇಡ್ಕರ್ ಮುಟ್ಟಲು ಹೋದಾಗ ಅದು ಒಂದು ರೀತಿಯ ಚಳವಳಿ ಆಯಿತು. ನಾರಾಯಣಗುರು ಕಲ್ಲಿನ ತುಂಡು ತಂದು ಶಿವಲಿಂಗ ಎಂದು ಸ್ಥಾಪನೆ ಮಾಡಿದ್ದು, ನಾರಾಯಣಗುರು ಚಳವಳಿ ಆಯಿತು. ಇಂತಹ ಸಣ್ಣ ಘಟನೆಗಳ ಕಿಡಿ ಒಮ್ಮೊಮ್ಮೆ ಹೊತ್ತಿಕೊಳ್ಳುತ್ತದೆ ಎಂದು ದಿನೇಶ್ ಅಮೀನ್‍ಮಟ್ಟು ತಿಳಿಸಿದರು.

1979ರಲ್ಲಿ ದಲಿತಗೋಷ್ಠಿಗಳನ್ನು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ನಿರಾಕರಿಸಿತು. ನಂತರ ಅದು ಮುಂದೆ ದೊಡ್ಡ ದಲಿತ ಸಾಹಿತ್ಯ ಚಳವಳಿಗೆ ಕಾರಣವಾಯಿತು. ಮೊದಲು ದಲಿತರನ್ನು ಹೊರಗಿಡಲು ಪ್ರಯತ್ನಿಸಿದರು, ಅದು ಸಾಧ್ಯವಾಗಲಿಲ್ಲ. ಮತ್ತೆ ಅವರನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿದರು. ಇವತ್ತು ಅವರಿಗೆ ಮುಸ್ಲಿಮರು ಸಿಕ್ಕಿದ್ದಾರೆ. ನಮ್ಮ ತೆರಿಗೆ ಹಣದಿಂದ ನಡೆಯುವ ಒಂದು ಸಂಸ್ಥೆ ರಾಜಕೀಯ ಪಕ್ಷದ ಅಜೆಂಡಾವನ್ನು ಅನುಷ್ಠಾನಗೊಳಿಸಲು ನಡೆಸುತ್ತಿರುವ ಪ್ರಯತ್ನದ ವಿರುದ್ಧ ನಾವಿರಬೇಕು ಎಂದು ಅವರು ಹೇಳಿದರು.

‘ಕೆಪಿಎಸ್ಸಿ ಕನ್ನಡ ದ್ರೋಹಿ ಸಂಸ್ಥೆಯಾಗಿದೆ. ಇತ್ತೀಚೆಗೆ 106 ಕೆಎಎಸ್ ಹುದ್ದೆಗಳಿಗೆ ನಡೆದಂತಹ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಶೇ.10ರಷ್ಟು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಕೆಎಎಸ್ ಪರೀಕ್ಷೆಯಲ್ಲಿದ್ದ ಕನ್ನಡ ಐಚ್ಛಿಕ ವಿಷಯವನ್ನು ಕೆಪಿಎಸ್ಸಿ ತೆಗೆದು ಹಾಕಿದೆ. ಇದರಿಂದಾಗಿ ಕನ್ನಡದ ಮಕ್ಕಳು ಅಧಿಕಾರಿಗಳು ಆಗದಂತೆ ತಡೆಯಲಾಗುತ್ತಿದೆ. ಕನ್ನಡವನ್ನು ಸಾಹಿತ್ಯಕ್ಕಷ್ಟೇ ಸೀಮಿತವಾಗಿಸಿದರೆ ಆಗಲ್ಲ, ಕನ್ನಡದ ಮಕ್ಕಳು ನಿರ್ಭಿತಿಯಿಂದ ಬಾಳುವಂತಹ ವಾತಾವರಣ ನಿರ್ಮಾಣವಾಗಬೇಕು’

-ಯು.ಟಿ.ಫರ್ಝಾನಾ ಚಿಂತಕಿ

-----------------------

‘86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಗಿರುವ ಅಸಮಾನತೆ ಬಗ್ಗೆ ನಾವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಪ್ರಶ್ನಿಸಿದರೆ ಬಿಜೆಪಿ ಹಾಗೂ ಆರೆಸೆಸ್ಸ್‍ನ ಮುಖಂಡರು ಯಾಕೆ ಉತ್ತರ ನೀಡುತ್ತಿದ್ದಾರೆ. ಬಿಜೆಪಿ ಒಂದು ರಾಜಕೀಯ ಪಕ್ಷ, ಆರೆಸೆಸ್ಸ್ ಒಂದು ಸಂಘಟನೆ. ಸಂಸ್ಕೃತದ ವಾರಸುದಾರರು ಯಾಕೆ ಕನ್ನಡದ ಬಗ್ಗೆ ಮಾತನಾಡುತ್ತಿದ್ದಾರೆ. ಇವತ್ತು ಎಲ್ಲ ಅಸಮಾನತೆಗಳು ಭಾಷೆ, ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿವೆ. ಈ ಬಗ್ಗೆ ಎಚ್ಚರಿಕೆ ಇಂದ ಇರಬೇಕು’

-ರವಿಕುಮಾರ್ ಟೆಲೆಕ್ಸ್ ಪತ್ರಕರ್ತ

--------------------------------------

‘ದೇಶದ ಬಹುತ್ವದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಡಾ.ಜಿ.ರಾಮಕೃಷ್ಣ 70ರ ದಶಕದಲ್ಲಿ ಆರೆಸೆಸ್ಸ್ ವಿಷ ವೃಕ್ಷ ಎಂಬ ಪುಸ್ತಕ ಬರೆದಿದ್ದರು. ಇವತ್ತು ಆರೆಸೆಸ್ಸ್ ವಿಷ ವನವಾಗಿ ಬೆಳೆದಿದೆ. ಆರೆಸೆಸ್ಸ್ ದೇಶದ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಅತಿಕ್ರಮಿಸಿಕೊಂಡು ಬರುತ್ತಿದೆ. ಇವತ್ತು ಕ್ರೌರ್ಯವನ್ನು ಶೌರ್ಯವಾಗಿ ಪ್ರದರ್ಶಿಸಲಾಗುತ್ತಿದೆ. ಬಲ್ಕೀಸ್ ಬಾನು ಪ್ರಕರಣದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದಾಗ ಅವರನ್ನು ಯೋಧರಂತೆ ಸತ್ಕರಿಸಿದ್ದು ಇದಕ್ಕೆ ಉದಾಹರಣೆ. ನೂತನ ಶಿಕ್ಷಣ ನೀತಿಯಿಂದಾಗಿ ನಮ್ಮ ಶಿಕ್ಷಕರು ಹಾಗೂ ಮಕ್ಕಳನ್ನು ಬಹುತ್ವದಿಂದ ವಿಮುಖಗೊಳಿಸಲಾಗುತ್ತಿದೆ’

ಡಾ.ಸಿದ್ದನಗೌಡ ಪಾಟೀಲ್ ಸಿಪಿಐ ಮುಖಂಡ 

Similar News