ಕವಿ ಕಾಲಕ್ಕೆ ಕೊರಳಾಗಬೇಕು: ಡಾ.ಬಂಜಗೆರೆ ಜಯಪ್ರಕಾಶ್

ಜನಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ

Update: 2023-01-08 16:39 GMT

ಬೆಂಗಳೂರು, ಜ. 8: ಯಾವುದೇ ಒಬ್ಬ ಬರಹಗಾರ ಹಾಗೂ ಕವಿ ಕಾಲಕ್ಕೆ ಕೊರಳಾಗಬೇಕು ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ರವಿವಾರ ಇಲ್ಲಿನ ಕೆಆರ್ ವೃತ್ತದಲ್ಲಿನ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜನಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾರಾಜರ ಆಸ್ಥಾನಗಳಲ್ಲಿ ಹೊಗಳು ಭಟ್ಟರಾಗಿದ್ದ ಬಹಳಷ್ಟು ಮಂದಿ ಕವಿಗಳು ಅಳಿದು ಹೋಗಿದ್ದಾರೆ. ಆದರೆ, ಸಾಮಾನ್ಯರ ನಡುವೆ ಸಾಮಾನ್ಯರಂತೆ ಇದ್ದ ಹಲವು ಮಂದಿ ಕವಿಗಳು ಇಂದಿಗೂ ಉಳಿದಿದ್ದಾರೆಂದು ಬಸವಣ್ಣ, ಕನಕದಾಸರನ್ನು ಉಲ್ಲೇಖಿಸಿದರು.

‘ಕವಿ, ಬರಹಗಾರ ತಮ್ಮ ಮನಸ್ಸಿನ ಭಾವನೆಗಳು, ತನ್ನೊಳಗಿನ ಆಕ್ರೋಶಕ್ಕೆ ಕಾವ್ಯದ ರೂಪ ಕೊಡಬೇಕು. ಬದುಕಿನ ವಾಸ್ತವತೆ, ಭೀಕರತೆಯ ಅನುಭವಗಳನ್ನು ಕಟ್ಟಿಕೊಡಬೇಕು. ಅದೊಂದು ರೀತಿಯಲ್ಲಿ ಕವಿಯ ಒಳಗಿನ ಹೋರಾಟವೂ ಹೌದು’ ಎಂದ ಬಂಜಗೆರೆ ಜಯಪ್ರಕಾಶ್, ‘ಈ ಸಮ್ಮೇಳನದಲ್ಲಿ ಕವಿತೆ ಓದಿದ ಹಲವು ಕವಿಗಳು ಒಳ್ಳೆಯ ಕವಿತೆಗಳನ್ನು ಓದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಬಂಜಗೆರೆ ಅವರು, 1992ರಲ್ಲಿ ಬಾಬಾರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಬರೆದ ಕವಿತೆಯನ್ನು ವಾಚನ ಮಾಡಿದರು.

ಯುವ ಕವಿ ವಿಕಾಸ್ ಮೌರ್ಯ, ‘ಧರ್ಮ-ಅಂತರ’ ಶೀರ್ಷಿಕೆಯ ‘ನೀವು ಇಲ್ಲಿಯೆ ಇರಬೇಕು, ಅಲ್ಲೆಲ್ಲಿಗೂ ಹೋಗಕೂಡದು, ಇಲ್ಲಿಯೇ ಬಿದ್ದಿರಬೇಕು ಅಷ್ಟೆ! ಬಿದ್ದು ಸಾಯಬೇಕು. ಅತ್ತ ಬದುಕಬಾರದು, ಇತ್ತ ಸಾಯಲೂಬಾರದು, ನರಳಬೇಕು.. ನರಳಿ ನರಳಿ ನರಕದಲ್ಲಿಯೇ ಇರಬೇಕು, ಧರ್ಮರೇಖೆ ದಾಟುವ ಕನಸುನ್ನೂ ಅಳಿಸಬೇಕು’ ಎಂಬ ಕವಿತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕವಿಗೋಷ್ಟಿಯಲ್ಲಿ ಪ್ರವೀಣ್ ಬಿ.ಎಂ., ಧನಂಜಯ ದೇವರಹಳ್ಳಿ ಸೇರಿದಂತೆ ಇನ್ನಿತರರ ತಮ್ಮ ಕವನ ವಾಚನ ಮಾಡಿದರು.

Similar News