ಸಾಹಿತ್ಯ ಸಮ್ಮೇಳನಕ್ಕೆ ಮುಸ್ಲಿಮರನ್ನು ಬೇಡವೆನ್ನುವುದು ಆಧುನಿಕ ಅಸ್ಪೃಶ್ಯತೆ: ಹಿರಿಯ ಸಾಹಿತಿ ಡಾ.ಜಿ.ರಾಮಕೃಷ್ಣ
ಬೆಂಗಳೂರು, ಜ.8: ‘ನಮ್ಮ ಸಾಹಿತ್ಯ ಸಮ್ಮೇಳನಕ್ಕೆ ಮುಸ್ಲಿಮರು ಬೇಡ ಅನ್ನೊದು ಅಧುನಿಕ ಅಸ್ಪøಶ್ಯತೆ. ಶಿಶುನಾಳ ಶರೀಫರು, ಕರೀಂಖಾನ್, ನಿಸಾರ್ ಅಹ್ಮದ್ ಅವರನ್ನು ಅವತ್ತೆನೊ ಸ್ವಲ್ಪ ಉದಾರವಾಗಿ ಬಿಟ್ಟುಬಿಟ್ಟಿದ್ದೆವು. ಇನ್ನು ಮೇಲೆ ಮುಗಿತು. ನೀವು ಪದ್ಯ ಬರೆಯಬೇಡಿ, ಯಾರು ಹೇಳಿದ್ದು ನಿಮಗೆ ಬರೆಯಲು’ ಇಂತಹ ಧೋರಣೆಯನ್ನು ಇಟ್ಟುಕೊಳ್ಳುವ ಸಂಸ್ಕøತಿ ನಮ್ಮ ರಾಜ್ಯ, ದೇಶದಲ್ಲಿ ಬಂದಿರುವುದು ಆಪತ್ತಿನ ಸೂಚನೆ ಎಂದು ಹಿರಿಯ ಸಾಹಿತಿ ಡಾ.ಜಿ.ರಾಮಕೃಷ್ಣ ಹೇಳಿದರು.
ರವಿವಾರ ನಗರದ ಕೆ.ಆರ್.ಸರ್ಕಲ್‍ನಲ್ಲಿರುವ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜನ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಸಂಸ್ಕøತ, ಮಾನವ ವಿರೋಧಿ, ಹೀನಾಯ ಕೃತ್ಯಕ್ಕೆ ನಾವು ಇವತ್ತು ಸಾಕ್ಷಿಯಾಗಿದ್ದೇವೆ. ಇದಕ್ಕೆ ಯಾವ ರೀತಿ ಮಧ್ಯಪ್ರವೇಶಿಸಿ, ಮುಲಾಮು ಹಚ್ಚಬೇಕು ಎಂದು ಚಿಂತಿಸಬೇಕು. ಸಾಮಾಜಿಕ ಅಸ್ಪøಶ್ಯತೆ ಅಮಾನವೀಯ ಎಂದು ಗೊತ್ತಿದ್ದರೂ ಅದನ್ನು ಉಳಿಸಿಕೊಂಡು ಬಂದಿದ್ದೇವೆ. ಈಗ ರಾಜಕೀಯ ಅಸ್ಪøಶ್ಯತೆಯೂ ಬಂದಿದೆ. ಸಾಹಿತ್ಯದ ಕ್ಷೇತ್ರದಲ್ಲಿಯೂ ಈ ಪ್ಲೇಗ್ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಇದು ಅಕ್ಷಮ್ಯ ಎಂದು ಶಪಥ ಮಾಡಬೇಕು. ಯಾವ ರೀತಿಯ ಆಂದಲೋನ ರೂಪಿಸಬೇಕು ಎಂದು ಮುಂದಿನ ದಿನಗಳಲ್ಲಿ ಚರ್ಚೆ ಮಾಡಬೇಕು. ಸಂಸ್ಥೆಗಳನ್ನು ಕಬ್ಜಾ ಮಾಡುವುದೆ ಈಗ ನೀತಿಯಾಗಿದೆ. ಯಾವ ಕಾಲದಲ್ಲಿ ಸಮುದಾಯ ಎಚ್ಚೆತ್ತು ಮಧ್ಯಪ್ರವೇಶ ಮಾಡಬೇಕಿತ್ತು. ಆಗ ಮಾಡದೆ ಇದ್ದ ಪರಿಣಾಮ ಇವತ್ತು ಸಂಸ್ಥೆಗಳೆ ಅವರ ಕೈಗೆ ಹೋಗಿವೆ. ಸಾರ್ವಜನಿಕರು ಸಾರ್ವಜನಿಕ ಸಂಸ್ಥೆಗಳ ಬಗ್ಗೆ ಆಸಕ್ತಿ ವಹಿಸದೆ ಇರುವಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ರಾಮಕೃಷ್ಣ ಹೇಳಿದರು.
ಈ ಜನ ಸಾಹಿತ್ಯ ಸಮ್ಮೇಳನಕ್ಕೆ ಎಷ್ಟು ಜನ ಸೇರುತ್ತಾರೋ ನೋಡೋಣ ಎಂದು ಕಸಾಪ ಅಧ್ಯಕ್ಷರು ಹೇಳಿದ್ದಾರೆ. ಇಲ್ಲಿ ಎಷ್ಟು ಜನ ಬಂದಿದ್ದಾರೆ ಅನ್ನೋದು ಮುಖ್ಯ ಅಲ್ಲ, ಯಾವ ಭಾವನೆಗಳನ್ನು ಇಷ್ಟುಕೊಂಡು ಬಂದಿದ್ದಾರೆ ಅನ್ನೋದು ಮುಖ್ಯ ಎಂದು ರಾಮಕೃಷ್ಣ ತಿರುಗೇಟು ನೀಡಿದರು.
ನಮ್ಮ ದೇಶದಲ್ಲಿ ಒಬ್ಬ ನಾಯಕ, ಒಂದು ಭಾಷೆ, ಒಂದು ತೆರಿಗೆ, ಒಂದು ಮೂರ್ಖತನ. ಎಲ್ಲರನ್ನೂ ಮೂರ್ಖರನ್ನಾಗಿ ಮಾಡಿದರೆ ಯಾವ ವಿರೋಧ ಬರುತ್ತದೆ. ಎಲ್ಲರದ್ದು ಬಹುತ್ವದ ತಿರಸ್ಕಾರ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡರ ಟೀಕೆ ಕೇವಲ ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡಕ್ಕೆ ಅನುದಾನ ಒದಗಿಸಿ ಕೊಡಿ ಎಂದು ಕೇಳಲು ಸೀಮಿತವಾಗಿತ್ತು. ಆದರೆ, ಹೊಸ ಶೀಕ್ಷಣ ನೀತಿಯಿಂದ ಏನೆಲ್ಲ ಅನಾಹುತಗಳಾಗುತ್ತದೆ ಎಂದು ಒಂದು ಅಕ್ಷರವು ಹೇಳಿಲ್ಲ ಎಂದು ಅವರು ಟೀಕಿಸಿದರು.
ಕರ್ನಾಟಕ ಯಾವತ್ತು ಹಿಂದಿ ವಿರೋಧ ಮಾಡಿಲ್ಲ. ನಮ್ಮ ರಾಜ್ಯದಲ್ಲಿ ಇರುವಷ್ಟು ಹಿಂದಿ ಪ್ರಚಾರ ಸಮಿತಿಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ಯಾವ ಕಾರಣಕ್ಕಾಗಿ ತುತ್ತೂರಿ ಮಾಡಿದ್ದೀರಾ? ಹಿಂದಿಯನ್ನು ಸತ್ಕರಿಸಲು ನಿಮ್ಮನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕಿತ್ತೇನೋ? ಎಂದು ರಾಮಕೃಷ್ಣ ಕಿಡಿಗಾರಿದರು.
ಹಿಂದಿನ ಕಸಾಪ ಅಧ್ಯಕ್ಷರು ಚಿರಕಾಲ ತಾವೆ ಅಧ್ಯಕ್ಷರಾಗಿರಬೇಕು ಎಂದು ಸಾಲಿಗ್ರಾಮದಲ್ಲಿ ವಿಶೇಷವಾಗಿ ಸರ್ವ ಸದಸ್ಯರ ಸಭೆ ಮಾಡಿದರು. ಈಗಿನ ಅಧ್ಯಕ್ಷರ ಆಯ್ಕೆಗಾಗಿ ಕಾಗಿನೆಲೆಯಲ್ಲಿ ಸಭೆ ಮಾಡಿದರು. ಕಸಾಪದ ಸಂವಿಧಾನದ ಮೂಲಭೂತವಾದ ಅಂಶಗಳನ್ನು ಬದಲಾಯಿಸಲು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಒಬ್ಬರು ಇವರಿಗೆ ಸಲಹೆಗಾರರು. ಸಾರ್ವಜನಿಕ ಸಂಸ್ಥೆಗಳನ್ನು ರಕ್ಷಣೆ ಮಾಡಬೇಕಾದವರು, ಭಕ್ಷಣೆ ಮಾಡಲು ಸಲಹೆಗಳನ್ನು ನೀಡಿದ್ದಾರೆ ಎಂದು ಅವರು ಟೀಕಿಸಿದರು.
ಯಾರೋ ಒಬ್ಬ ಸುಸಂಸ್ಕøತ ಆರೆಸೆಸ್ಸ್ ನಾಯಕ ಕತ್ತಿಗಳನ್ನೆಲ್ಲ ಹರಿತವಾಗಿ ಇಟ್ಟುಕೊಳ್ಳಿ ನಾಳೆಯಿಂದ ಪ್ರಯೋಜನಕ್ಕೆ ಬರುತ್ತದೆ ಎಂದು ಸಾರ್ವಜನಿಕವಾಗಿ ಹೇಳಿದನು. ಒಂದು ವೇಳೆ ನಾನು ಅದನ್ನು ಹೇಳಿದ್ದರೆ ನನ್ನನ್ನು ಬಂಧಿಸುತ್ತಿದ್ದರು. ಆದರೆ, ಆತ ಹೇಳಿರುವುದರಿಂದ ನಿನಗೆ ಇನ್ನೊಂದು ವೇದಿಕೆ ರಚನೆ ಮಾಡಿ ಕೊಡುತ್ತೇವೆ. ಇನ್ನೂ ದೊಡ್ಡದಾಗಿ ಹೇಳು ಎನ್ನುವಷ್ಟರ ಮಟ್ಟಿಗೆ ನಮ್ಮ ದೇಶದ ಸಂಸ್ಕೃತಿಯ ಅಧಃಪತನ ಆಗುತ್ತಿದೆ ಎಂದು ರಾಮಕೃಷ್ಣ ಹೇಳಿದರು.
ವೇದಿಕೆ ಮೇಲೆ ಪ್ರಮುಖರಾದ ಸಿ.ಬಸವಲಿಂಗಯ್ಯ, ರಹಮತ್ ತರೀಕೆರೆ, ದು ಸರಸ್ವತಿ, ವಸಂತರಾಜ್ ಉಪಸ್ಥಿತರಿದ್ದರು. ಬಸವರಾಜ್ ಪೂಜಾರ್ ನಿರೂಪಿಸಿದರೆ, ಪುರುಷೋತ್ತಮ್ ಒಡೆಯರ್ ವಂದನಾರ್ಪಣೆ ಮಾಡಿದರು.