ಬೆಂಗಳೂರು: ಚಿತ್ರಸಂತೆಯಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಭಾಗಿ
Update: 2023-01-08 23:33 IST
ಬೆಂಗಳೂರು, ಜ. 8: ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ಆಯೋಜಿಸಿದ್ದ 20ನೆ ಚಿತ್ರಸಂತೆಯಲ್ಲಿ ಸುಮಾರು 4ಲಕ್ಷಕ್ಕೂ ಅಧಿಕ ಜನರು ಸೇರಿದ್ದು, 3 ಕೋಟಿ ರೂ.ಗಿಂತ ಅಧಿಕ ವಹಿವಾಟು ನಡೆದಿದೆ.
ಚಿತ್ರಸಂತೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ದೆಹಲಿ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗೋವಾ ಸೇರಿದಂತೆ ಹೊರ ರಾಜ್ಯಗಳಿಂದ ಬಂದಿದ್ದ 1,600ಕ್ಕೂ ಹೆಚ್ಚಿನ ಕಲಾವಿದರು ಭಾಗವಹಿಸಿದ್ದರು. ಕುಮಾರ ಕೃಪಾ ರಸ್ತೆಯುದ್ದಕ್ಕೂ ಸುಮಾರು 1,200ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.
ಮಳಿಗೆಗಳಲ್ಲಿ 100 ರೂ.ನಿಂದ 5 ಲಕ್ಷ ರೂ.ವರೆಗೆ ಬೆಲೆ ಬಾಳುವ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಚಿತ್ರಸಂತೆಗೆ ಆಗಮಿಸುವವರ ಭದ್ರತೆಯ ದೃಷ್ಟಿಯಿಂದ 130ರಷ್ಟು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಅಂಧರ ಕ್ರಿಕೆಟ್ ಟಿ20 ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರರು ಗೆದ್ದಿದ್ದ ವಿಶ್ವಕಪ್ ಟ್ರೋಫಿಯನ್ನು ಚಿತ್ರಸಂತೆಯಲ್ಲಿ ಪ್ರದರ್ಶಿಸಲಾಗಿತ್ತು.