×
Ad

ಸಿಎಂ ಬೊಮ್ಮಾಯಿ ಉದ್ಘಾಟಿಸಿದ ಒಂದೇ ತಿಂಗಳಲ್ಲಿ ಬಿರುಕು ಬಿಟ್ಟ ರ‍್ಯಾಪಿಡ್‌ ರಸ್ತೆ

ಬಿಬಿಎಂಪಿಯನ್ನು ಸರಿದಾರಿಗೆ ತರಲು ಯಾರಿಂದಲೂ ಸಾಧ್ಯವಿಲ್ಲ ಎಂದ ನೆಟ್ಟಿಗರು

Update: 2023-01-09 12:43 IST

ಬೆಂಗಳೂರು, ಜ.9: ‘ರ‍್ಯಾಪಿಡ್‌ ರೋಡ್ ವರ್ಕ್’ ತಂತ್ರಜ್ಞಾನ ಬಳಸಿ ನಿರ್ಮಿಸಿರುವ 375 ಮೀಟರ್ ಉದ್ದದ ರಸ್ತೆಯನ್ನು ಒಂದು ತಿಂಗಳ ಹಿಂದೆ ಇಂದಿರಾನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿದ್ದು, ಇದೀಗ ರಸ್ತೆ ನಿರ್ಮಾಣಗೊಂಡ ಒಂದೇ ತಿಂಗಳಲ್ಲಿ ಬಿರುಕು ಬಿಟ್ಟಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತ್ತೀಚೆಗೆ ಹಳೆ ಮದ್ರಾಸ್ ರಸ್ತೆಯಲ್ಲಿ ರ‍್ಯಾಪಿಡ್‌ ರೋಡ್ ಟೆಕ್ನಾಲಜಿ ಬಳಸಿಕೊಂಡು ರಸ್ತೆ ನಿರ್ಮಾಣವನ್ನು ಕೈಗೆತ್ತಿಕೊಂಡಿತ್ತು. 40 ವರ್ಷ ಬಾಳಿಕೆ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 30 ದಿನಗಳಿಗಿಂತ ಕಡಿಮೆ ಅವಧಿಯಲ್ಲೇ ರಸ್ತೆ ಬಿರುಕು ಬಿಟ್ಟಿದೆ. 

ಡಿಸೆಂಬರ್ 8ರಂದು ರ‍್ಯಾಪಿಡ್‌ ರಸ್ತೆಗಳ ಗುಣಮಟ್ಟ ಹಾಗೂ ದರಗಳನ್ನು ಪರಿಶೀಲಿಸಿದ ನಂತರ ''ಈ ತಂತ್ರಜ್ಞಾನವನ್ನು ಇತರೆಡೆ ಬಳಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು." ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ತಿಳಿಸಿದ್ದರು. 

ಬಿಬಿಎಂಪಿ ವಿರುದ್ಧ ಆಕ್ರೋಶ : ಬಿಬಿಎಂಪಿ ಕಾರ್ಮಿಕರೊಬ್ಬರು ಕಾಂಕ್ರೀಟ್ ಬ್ಲಾಕ್‌ಗಳ ನಡುವಿನ ಬಿರುಕನ್ನು ಟಾರ್‌ನಿಂದ ತುಂಬುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್ ಆಗಿದ್ದು, ಐದಾರು ಕಾಂಕ್ರೀಟ್ ಬ್ಲಾಕ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಲ ವಾಹನ ಸವಾರರು  ರಸ್ತೆಯ ಕಳಪೆ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಹೊಸ ತಂತ್ರಜ್ಞಾನ ಅಳವಡಿಸುವ ಮುನ್ನ ಬಿಬಿಎಂಪಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಬಿಬಿಎಂಪಿಯನ್ನು ಸರಿದಾರಿಗೆ ತರಲು ಯಾರಿಂದಲೂ ಸಾಧ್ಯವಿಲ್ಲ ಎನಿಸುತ್ತದೆ. ಈ ಸಂಸ್ಥೆಯ ಕಾರ್ಯವೈಖರಿಯನ್ನು ನೋಡಿದರೆ ದಿಗಿಲಾಗುತ್ತದೆ. ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಅಂಬ್ಯುಲೆನ್ಸ್ ಯಾವಾಗಲೂ ಇರಬೇಕಾಗಿದೆ'. ಎಂದು ಟ್ವಿಟರ್ ಲಕ್ಷ್ಮೀಶ ಎಂಬವರು ಪ್ರತಿಕ್ರಿಯಿಸಿದ್ದಾರೆ.

'ಇದು ರಾಜ್ಯಲ್ಲಿರುವ ಶೇ.40 ಸರ್ಕಾರದ ಲಕ್ಷಣ' ಎಂದು ನೆಟ್ಟಿಗರೊಬ್ಬರು ಟ್ವಟರ್ ನಲ್ಲಿ ಬರೆದುಕೊಂಡಿದ್ದಾರೆ. 

\

Similar News