ದೇಶದಲ್ಲಿ ಸನಾತನ ಅಸಮಾನತೆ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ: ಡಾ.ಟಿ.ಆರ್.ಚಂದ್ರಶೇಖರ್

ಮಂಗಳೂರು: ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

Update: 2023-01-09 09:26 GMT

ಮಂಗಳೂರು, ಜ.9: ದೇಶದಲ್ಲಿ ಆರ್ಥಿಕ ಅಸಮಾನತೆಯ ಜೊತೆಗೆ ಸನಾತನ ಅಸಮಾನತೆಯೂ ಹೆಚ್ಚುತ್ತಿದೆ. ಇದು ದೇಶದ ಅಭಿವೃದ್ಧಿಗೆ ಮಾತ್ರವಲ್ಲ ವ್ಯಕ್ತಿಯ ಘನತೆಯ ಬದುಕಿಗೂ ಅಡ್ಡಿಯಾಗಿದೆ. ಇಂತಹ ಪ್ರಕ್ರಿಯೆಯು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯ, ಆರ್ಥಿಕ ತಜ್ಞ ಡಾ. ಟಿ.ಆರ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ‘ಕರಾವಳಿ ಕರ್ನಾಟಕ: ಕೃಷಿ, ಕೈಗಾರಿಕೆ,

ಉದ್ಯೋಗ, ಜನಪರ ಪರ್ಯಾಯ ನೀತಿಗಳು’ ಎಂಬ ವಿಷಯದಲ್ಲಿ ಸೋಮವಾರ ನಗರದ ಪುರಭವನದಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರವು ಕಾರ್ಮಿಕರ, ಅಲ್ಪಸಂಖ್ಯಾತರ, ದಲಿತರ ಹಿತವನ್ನು ಕಡೆಗಣಿಸಿವೆ. ಆ ಸಮುದಾಯಗಳ ಒಳಿತನ್ನು ಮೂಳೆಗೆ ತಳ್ಳಿವೆ. ಕೋಮುವಾದ, ಬಂಡವಾಳಶಾಹಿಗೆ ಮಣೆ ಹಾಕಿವೆ. ಅಭಿವೃದ್ಧಿಗೆ ವರಮಾನವೇ ಮಾಪನವಲ್ಲ. ಜನರು ಸಮೃದ್ಧಿಯಿಂದ, ನೆಮ್ಮದಿಯಿಂದ ಬದುಕುವುದು ಕೂಡ ಅಭಿವೃದ್ಧಿಯ ಸಂಕೇತವಾಗಿದೆ. ಬಿಜೆಪಿ ಸರಕಾರ ಬಂದ ಬಳಿಕ ಜನರ ಗೌರವಕ್ಕೆ ಧಕ್ಕೆಯಾಗಿದೆ. ಇಂತಹ ಸರಕಾರಗಳನ್ನು ಕಿತ್ತೊಗೆಯಬೇಕಿದೆ ಎಂದು ಡಾ.ಟಿ.ಆರ್.ಚಂದ್ರಶೇಖರ್ ಕರೆ ನೀಡಿದರು.

ಜನರ ಬದುಕಿಗೆ ಕಂಠಕವಾಗಿರುವ ಕೋಮುವಾದವನ್ನು ಕಿತ್ತೆಸೆದಾಗಲೇ ನಿಜವಾದ ಅಭಿವೃದ್ಧಿ ಸಾಧ್ಯವಿದೆ. ಪ್ರಜಾಪ್ರಭುತ್ವದಲ್ಲಿ ಜನರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಜನರನ್ನು ವಿಂಗಡಿಸುತ್ತದೆ. ಹಲಾಲ್, ಮತಾಂತರ, ಗೋಹತ್ಯೆ ನಿಷೇಧ, ವ್ಯಾಪಾರ ನಿರ್ಬಂಧದಂತಹ ಸೂಕ್ಷ್ಮ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತಿವೆ. ದೇಶದ 50 ಕೋಟಿ ಕಾರ್ಮಿಕರ ಆದಾಯ ಕುಸಿಯುತ್ತಿವೆ. ಬೆರಳೆಣಿಕೆಯ ಬಂಡವಾಳಶಾಹಿಗಳ ವರಮಾನ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅದರೊಂದಿಗೆ ಸನಾತನ ಅಸಮಾನತೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಡಾ.ಟಿ.ಆರ್.ಚಂದ್ರಶೇಖರ್ ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಂಪಿ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಎಂ. ಚಂದ್ರ ಪೂಜಾರಿ ಮಾತನಾಡಿ, ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಶೇ.70ರಷ್ಟು ಜನರು ದಿನದ ಮೂರು ಹೊತ್ತಿನ ಅನ್ನಕ್ಕೆ ಪರದಾಡುತ್ತಿರುವುದು ದೇಶದ ದರಿದ್ರ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ಸೋತಿವೆ. ಪಾಳೆಗಾರಿಕೆ ಹೆಚ್ಚುತ್ತಿವೆ. ದುಡಿಯುವ ವರ್ಗ ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ಜನಪ್ರತಿನಿಧಿಗಳಾಗುವ ಅವಕಾಶ ಲಭಿಸುತ್ತಿಲ್ಲ. ಬಂಡವಾಳಶಾಹಿಗಳು, ಕ್ರಿಮಿನಲ್‌ಗಳು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು ಅಭಿವೃದ್ಧಿಯ ಬಗ್ಗೆ ಮಾತನಾಡಬೇಡಿ ಲವ್‌ಜಿಹಾದ್ ಬಗ್ಗೆ ಯೋಚಿಸಿ ಎನ್ನುತ್ತಾರೆ. ಕೋಟ್ಯಂತರ ಜನರ ಬದುಕಿನ ಜೊತೆ ಚೆಲ್ಲಾಟವಾಡಿದ ನೋಟು ಅಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಸಮರ್ಥಿಸುತ್ತಿದೆ. ಚುನಾವಣೆಗಳು ಸಮೀಪಿಸುವಾಗ ಜಿಲ್ಲೆಯಲ್ಲಿ ಕೊಲೆ ರಾಜಕೀಯಗಳೂ ನಡೆಯುತ್ತಿವೆ. ಈ ಎಲ್ಲಾ ಪ್ರಕ್ರಿಯೆಯನ್ನು ಜನರು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಡಾ. ಎಂ.ಚಂದ್ರ ಪೂಜಾರಿ ಹೇಳಿದರು.

ಅಖಿಲ ಭಾರತ ವಕೀಲರ ಸಂಘ (ಎಐಎಲ್‌ಯು) ದ.ಕ.ಜಿಲ್ಲಾಧ್ಯಕ್ಷ ನ್ಯಾಯವಾದಿ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ವಸಂತ ಆಚಾರಿ, ಕೆ.ಯಾದವ ಶೆಟ್ಟಿ, ಪದ್ಮಾವತಿ ಶೆಟ್ಟಿ, ಡಾ. ಕೃಷ್ಣಪ್ಪ ಕೊಂಚಾಡಿ, ಎಂ. ದೇವದಾಸ್, ಸುಕುಮಾರ್ ತೊಕ್ಕೊಟ್ಟು, ರಮಣಿ ಮೂಡುಬಿದಿರೆ, ಬಿ.ಎಂ. ಭಟ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು.

Similar News