×
Ad

ಸ್ಯಾಂಟ್ರೋ ರವಿ ಜತೆ ಬೆಂಗಳೂರು ಇನ್ಸ್ ಪೆಕ್ಟರ್?

Update: 2023-01-09 21:30 IST

ಬೆಂಗಳೂರು, ಜ.9: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ಪ್ರಕರಣ ಬೆನ್ನಲ್ಲೇ ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಇನ್ಸ್‍ಪೆಕ್ಟರ್ ಮೈಸೂರಿನ ಮಂಜುನಾಥ್ ಯಾನೆ ಸ್ಯಾಂಟ್ರೋ ರವಿಯೊಂದಿಗೆ ಕೈಜೋಡಿಸಿ, ಮಹಿಳೆಯರ ಮೇಲೆ ಸುಳ್ಳು ದೂರು ದಾಖಲಿಸಿದ್ದ ಎನ್ನುವ ಆರೋಪ ಕೇಳಿಬಂದಿದೆ.

ಪ್ರಕಾಶ್ ಎಂಬವರು ನೀಡಿದ್ದ ದೂರಿನನ್ವಯ ಕಾಟನ್‍ಪೇಟೆ ಠಾಣೆಯಲ್ಲಿ ನ.24 ರಂದು ರಶ್ಮಿ, ನಯನಾ ಹಾಗೂ ಶೇಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. 

ನನ್ನಿಂದ ಮೂರು ತಿಂಗಳ ಅವಧಿಗೆ 5 ಲಕ್ಷ ರೂಪಾಯಿ ಪಡೆದಿದ್ದ ರಶ್ಮಿ, ನ.23ರ ಸಂಜೆ 6 ಗಂಟೆಗೆ ಹಿಂತಿರುಗಿಸುವುದಾಗಿ ಕಾಟನ್‍ಪೇಟೆಯ ಖೋಡೆ ಸರ್ಕಲ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ ರಶ್ಮಿಯವರ ಜೊತೆಗಿದ್ದ ಶೇಕ್ ಎಂಬಾತ ನನ್ನ ಎರಡೂ ಕೈಗಳನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು, ರಶ್ಮಿ ತಮ್ಮ ಬಳಿಯಿದ್ದ ಚಾಕುವನ್ನು ಕುತ್ತಿಗೆಯ ಮೇಲಿಟ್ಟು ಬೆದರಿಸಿದ್ದಾರೆ.

ಅವರ ಜೊತೆಗಿದ್ದ ನಯನಾ ಎಂಬಾಕೆ ಕತ್ತಿನಲ್ಲಿದ್ದ ಸುಮಾರು 13 ಗ್ರಾಂ ತೂಕದ ಚಿನ್ನದ ಸರ, 9 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದರು.

ಆದರೆ, ಈ ಬಗ್ಗೆ ತನಿಖೆ ನಡೆಸಿರುವ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಕೃತ್ಯ ನಡೆದ ಸ್ಥಳದಲ್ಲಿ ರಶ್ಮಿ ಹಾಗೂ ನಯನಾ ಇರಲಿಲ್ಲ. ಆದರೆ ಇರುವಂತೆ ಸಾಬೀತುಪಡಿಸಲು ಸ್ಯಾಂಟ್ರೋ ರವಿಯೇ ತನ್ನ ಕೆಲಸಗಾರ ಶೇಕ್ ಜೊತೆಯಲ್ಲಿ ರಶ್ಮಿ ಹಾಗೂ ನಯನಾ ಅವರ ಮೊಬೈಲ್ ಕೊಟ್ಟು ಕಳುಹಿಸಿದ್ದ. ಸೂಕ್ತ ತನಿಖೆ ನಡೆಸದೇ ಕಾಟನ್ ಪೇಟೆ ಇನ್ಸ್‍ಪೆಕ್ಟರ್ ಪ್ರವೀಣ್ ಸುಳ್ಳು ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ವರದಿ ನೀಡಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ಸ್ಯಾಂಟ್ರೋ ರವಿಯ ಷಡ್ಯಂತ್ರದ ಜೊತೆಗೆ ಇನ್ಸ್‍ಪೆಕ್ಟರ್ ಪ್ರವೀಣ್‍ರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ  ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ರವಿಯ ಷಡ್ಯಂತ್ರದಿಂದ ಕಾಟನ್‍ಪೇಟೆ ಠಾಣೆಯಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಮೈಸೂರಿನ ವಿಜಯನಗರ ಠಾಣೆಯಲ್ಲಿ ಆತನ ಪತ್ನಿ ರಶ್ಮಿ ದೂರು ನೀಡಿದ್ದರು. ಅದರನ್ವಯ ಅಂದಿನ ಕಾಟನ್‍ಪೇಟೆ ಇನ್ಸ್‍ಪೆಕ್ಟರ್ ಪ್ರವೀಣ್ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿಗೆ ಆದೇಶಿಸಲಾಗಿತ್ತು. ಸದ್ಯ ತನಿಖೆ ಪೂರ್ಣಗೊಂಡಿದ್ದು ವರದಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಲಾಗಿದೆ ಎಂದರು.

► ಸ್ಯಾಂಟ್ರೋ ರವಿ ವಿರುದ್ಧ ಈಡಿಗೆ ದೂರು:

ಸ್ಯಾಂಟ್ರೋ ರವಿ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿ ಸಲಾಗಿದೆ. ಆತ ಅಕ್ರಮವಾಗಿ ಹಣ, ಸಂಪಾದನೆ ಬಗ್ಗೆ ದಾಖಲೆವಿದೆ. ಎರಡು ಕಂಪೆನಿಗಳ ಮೂಲಕ ಹವಾಲಾ ಹಣ ವರ್ಗಾವಣೆಯಾಗಿದೆ. ತನ್ನ ಆರ್ಥಿಕ ಅಪರಾಧಗಳಿಗೆ ಕುಮಾರಕೃಪಾ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಮೈಸೂರಿನ ಒಡನಾಡಿ ಸಂಸ್ಥೆ ಸದಸ್ಯ ಎಂ.ಪರಶುರಾಮ್ ತಿಳಿಸಿದ್ದಾರೆ.

ಇದನ್ನೂ ಓದಿ>>> ದಲಿತ ಮಹಿಳೆಯ ಅತ್ಯಾಚಾರ, ವಂಚನೆ ಆರೋಪ: ಸ್ಯಾಂಟ್ರೋ ರವಿ ಆಪ್ತ ಪೊಲೀಸ್ ವಶಕ್ಕೆ

Similar News