ಸಕಾಲದಲ್ಲಿ ಹಣ ಪಾವತಿ ಮಾಡದ ಬಿಬಿಎಂಪಿ ವಿರುದ್ಧ ಗುತ್ತಿಗೆದಾರರ ಡಿಢೀರ್ ಪ್ರತಿಭಟನೆ

Update: 2023-01-09 17:10 GMT

ಬೆಂಗಳೂರು, ಜ.9: ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಸೋಮವಾರದಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗ, ಗುತ್ತಿಗೆದಾರರು ಯಾವುದೇ ಮುನ್ಸೂಚನೆಯನ್ನು ನೀಡದೆ, ಡಢೀರ್ ಪ್ರತಿಭಟನೆಯನ್ನು ನಡೆಸಿದರು. 

ಪಾಲಿಕೆಯ ಅನುದಾನದಲ್ಲಿ ನಿರ್ವಹಿಸಿ ಕಾಮಗಾರಿಗಳಿಗೆ ಸಂಬಂಧಿಸಿ ಸುಮಾರು 25 ತಿಂಗಳಿನಿಂದ ಗುತ್ತಿಗೆದಾರರಿಗೆ ಹಣವನ್ನು ಪಾವತಿ ಮಾಡಿಲ್ಲ. ಕನಿಷ್ಟ 6 ತಿಂಗಳ ಕಾಮಗಾರಿ ಹಣವನ್ನು ಪಾವತಿ ಮಾಡಬೇಕು ಎಂದು ಪತ್ರಿಭಟನಾಕಾರರು ಒತ್ತಾಯಿಸಿದರು. 

ವಲಯ ಆಯುಕ್ತರ ಮುಖಾಂತರ ಬಿಲ್ ಪಾವತಿಯನ್ನು ಕೈಗೊಳ್ಳುತ್ತಿರುವುದರಿಂದ ಕೆಲ ವಲಯ ಆಯುಕ್ತರು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಹಾಗಾಗಿ ಈ ಪದ್ದತಿಯನ್ನು ಕೂಡಲೇ ಹಿಂಪಡೆದು, ಈ ಹಿಂದಿನಂತೆ ಕೇಂದ್ರ ಕಚೇರಿಯಿಂದಲೇ ಗುತ್ತಿಗೆದಾರರಿಗೆ ಬಿಲ್ಲುಗಳನ್ನು ಪಾವತಿಸಲು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಬಿಎಂಪಿಯಲ್ಲಿ ಪಾವತಿಗಾಗಿ ಬಾಕಿ ಇರುವ ಬಿಲ್ಲುಗಳಿಗೆ ಹಾಗೂ 2022, ಜುಲೈ ತಿಂಗಳ ವರೆಗೆ ನೀಡಲಾಗಿರುವ ಕಾರ್ಯಾದೇಶಗಳಿಗೂ ಶೇ.6ರಷ್ಟು ಜಿಎಸ್‍ಟಿ ವ್ಯತ್ಯಾಸದ ಮೊತ್ತವನ್ನು ಪಾಲಿಕೆಯ ವತಿಯಿಂದಲೇ ಭರಿಸುವಂತೆ ಅವರು ಮನವಿ ಮಾಡಿದರು. 

ನವೆಂಬರ್ 2020ರಿಂದ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿ ಮಾಡಿಲ್ಲ. ಹಾಗಾಗಿ ಹಣ ಮಂಜೂರು ಮಾಡುವವರೆಗೆ ಯಾವುದೇ ಕಾಮಗಾರಿಗಳನ್ನು ನಡೆಸಬಾರದು. ಹಾಗೆಯೇ ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಿಸಿದ ಕೂಲಿ ಕಾರ್ಮಿಕರನ್ನು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು. ಆದರೆ ಪ್ರತಿಭಟನಾನಿರತ ಎಲ್ಲ ಗುತ್ತಿಗೆದಾರರು ಈ ತೀರ್ಮಾನವನ್ನು ಒಪ್ಪಲಿಲ್ಲ. ಕೆಲ ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸಲು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಬಳಿ ಕಾಲಾವಕಾಶವನ್ನು ಕೋರಿದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆಯನ್ನು ವಸೂಲಿ ಮಾಡಲು ರೆವೆನ್ಯೂ ಡ್ರೈವ್ ಮಾಡಲಾಗುತ್ತಿದೆ. ಹೀಗಾಗಿ ಗುತ್ತಿಗೆದಾರರು ಯಾವುದೇ ಆತಂಕಪಡುವ ಅಗತ್ಯ ಇಲ್ಲ. ಶೀಘ್ರವಾಗಿ ಬಾಕಿ ಹಣವನ್ನು ಪಾವತಿ ಮಾಡುತ್ತೇವೆ. ಮೊದಲು ನಿರ್ವಹಣೆಯ ಕೆಲಸಗಳಿಗೆ ಹಣವನ್ನು ಬಿಡುಗಡೆ ಮಾಡುತ್ತೇವೆ. ನಂತರ ಕಾಮಗಾರಿಗಳ ಬಾಕಿ ಹಣವನ್ನು ಪಾವತಿಸುತ್ತೇವೆ. ಈ ರೀತಿಯಾಗಿ ಬಿಬಿಎಂಪಿಯಲ್ಲಿ ಹೊಸ ಪದ್ಧತಿಯನ್ನು ಮಾಡಿದ್ದೇವೆ. 

-ತುಷಾರ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ

Similar News