ಒಳಮೀಸಲಾತಿ ವಿಚಾರದಲ್ಲಿ ವೈರತ್ವ ಬೇಡ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2023-01-10 14:58 GMT

ಬೆಂಗಳೂರು, ಜ.10: ಮನುವಾದಿಗಳು ನಮ್ಮನ್ನು ವಿಭಜಿಸುತ್ತಿದ್ದು, ಒಳಮೀಸಲಾತಿ ಕುರಿತು ವೈರತ್ವ ಬೆಳೆಸಿಕೊಳ್ಳಬಾರದು. ಭೋವಿ, ಲಂಬಾಣಿ ಸಮುದಾಯಗಳಿಗೂ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ದೊರೆಲಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದ್ದಾರೆ. 

ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಮೀಸಲಾತಿಯನ್ನು ಜನಸಂಖ್ಯೆಯ ಆಧಾರದಲ್ಲಿ ಹಂಚಿಕೆ ಮಾಡಬೇಕು. ಸರಕಾರವು ಕೆಳ ಸಮುದಾಯಗಳಿಗೆ ಒಳಮೀಸಲಾತಿಯನ್ನು ಜಾರಿ ಮಾಡಲು ಉಪಸಮಿತಿಯನ್ನು ರಚನೆ ಮಾಡಿದೆ. ಆದರೆ ಯಾವುದೇ ಸಮಿತಿಯನ್ನು ರಚಿಸದೇ ಬ್ರಾಹ್ಮಣರಿಗೆ ಮೀಸಲಾತಿಯನ್ನು ನೀಡಿಲ್ಲವೇ ಎಂದು ಪ್ರಶ್ನಿಸಿದರು. 

ಚುನಾವಣೆಯು ಹತ್ತಿರಕ್ಕೆ ಬಂದಿದೆ ಎಂದು ಒಳಮೀಸಲಾತಿ ಜಾರಿ ವಿಚಾರದಲ್ಲಿ ಉಪಸಮಿತಿಯನ್ನು ರಚನೆ ಮಾಡಿದೆ. ನ್ಯಾ. ಎ.ಜೆ. ಸದಾಶಿವ ಆಯೋಗ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ತಕ್ಷಣ ಏಕೆ ಜಾರಿ ಮಾಡಿಲ್ಲ. ಚುನಾವಣೆಯ ಸಂದರ್ಭದಲ್ಲಿ 101 ಜಾತಿಗಳ ನಡುವೆ ಸಂಘರ್ಷವನ್ನು ತಂದಿಟ್ಟು, ನಮ್ಮ ಸಮುದಾಯಗಳನ್ನು ವಿಭಜನೆ ಮಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು. 

ಅಧಿಕಾರಿ ಇಲ್ಲದ ಕಾರಣ ನಮ್ಮ ಪರಿಶಿಷ್ಟ ಸಮುದಾಯಗಳು ಇಂದಿಗೂ ದೌರ್ಜನ್ಯಕ್ಕೆ ಒಳಗಾಗುತ್ತಿವೆ. ನಮ್ಮ ಹೆಣಗಳನ್ನು ಊಳಲು ಜಾಗವಿಲ್ಲದ ಹಾಗೆ ಸರಕಾರಗಳು ನಡೆಸಿಕೊಂಡಿವೆ. ಸವಲತ್ತುಗಳನ್ನು ಪಡೆಯಲು ನಮ್ಮ ಸಮುದಾಯಗಳು ಇನ್ನೂ ಪ್ರತಿಭಟನೆಗಳನ್ನು ಮಾಡುತ್ತಿವೆ. ನಮ್ಮ ಸಮುದಾಯಗಳನ್ನು ಒಗ್ಗೂಡಿ ಅಧಿಕಾರವನ್ನು ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ನಾಲ್ಕು ವಿಭಾಗದಲ್ಲಿ ಸಮಿತಿಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದರು.

ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಇಡಬ್ಲೂಎಸ್ ಮೀಸಲಾತಿಯನ್ನು ಜಾರಿ ಮಾಡಿದೆ. ಸಂಸತ್ತು ಇದಕ್ಕೆ ಅಂಗೀಕಾರ ನೀಡಿದೆ. ಸುಪ್ರೀಂ ಕೋರ್ಟ್ ಈ ಮೀಸಲಾತಿಯ ಪರವಾಗಿ ತೀರ್ಮಾನವನ್ನು ನೀಡಿದೆ. ಏಕೆಂದರೆ ಅಧಿಕಾರ ಅವರ ಕೈಯಲ್ಲಿ ಕೇಂದ್ರಿಕೃತ ಆಗಿದೆ. ಈ ಮೀಸಲಾತಿಯನ್ನು ಬೇರೆಯವರಿಗೆ ಕೊಡುತ್ತೇವೆ ಎಂದರೆ ಅವರು ಕೋರ್ಟ್ ಮೊರೆ ಹೋಗುತ್ತಾರೆ. ಹಾಗಾಗಿ ನಾವು ಅಧಿಕಾರವನ್ನು ಪಡೆಯಬೇಕಾಗಿದೆ ಎಂದರು. 

ಪರಿಶಿಷ್ಟ ಸಮುದಾಯದ 101 ಜಾತಿಗಳಿಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ದೇಶದ ಸಂಪತ್ತು ಒಬ್ಬರ ಕೈಯಲ್ಲೇ ಕೇಂದ್ರಿಕೃತ ಆಗುತ್ತದೆ. ದೇಶದ ಪ್ರತಿಷ್ಠಿತ ಕಂಪನಿಗಳು ಮೇಲ್ವರ್ಗದ ಪರವಾಗಿದೆ ಎಂದು ಅವರು, ಪಕ್ಷಗಳಿಗೆ ನಮ್ಮ ಮತಬೇಕು, ಆದರೆ ನಮ್ಮ ಹಿತ ಬೇಡ ಎಂದು ಹೇಳಿದರು.

ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಸರಕಾರ ಮೀಸಲಾತಿಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಕೆಳ ಜಾತಿಗಳ ವಿರುದ್ದ ಮೇಲ್ಜಾತಿಗಳನ್ನು ಎತ್ತುಗಟ್ಟುವ ಹುನ್ನಾರ ರೂಪಿಸುತ್ತಿದೆ. ಕೆಳ ಜಾತಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ರೂಪಿಸಿದ ಎ.ಜೆ. ಸದಾಶಿವಾ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಲು ಹಿಂಜರಿಯುತ್ತಿದೆ. ವಂಚಿಸಿ ತಿನ್ನುವುದು ಬ್ರಾಹ್ಮಣ ಧರ್ಮ, ಹಂಚಿ ತಿನ್ನುವುದು ಬಹುಜನರ ಧರ್ಮ. ಹಾಗಾಗಿ ಮೀಸಲಾತಿಯನ್ನು ವೈಜ್ಞಾನಿಕವಾಗಿ ಹಂಚಬೇಕು ಎಂದು ಹೇಳಿದರು. 

ರಾಜಕೀಯ ಮೀಸಲಾತಿ ಕ್ಷೇತ್ರಗಳಿಂದ ಹೇಡಿಗಳು ಆಯ್ಕೆಯಾಗಿ ಬರುತ್ತಿದ್ದಾರೆ. ಅವರು ಮೇಲ್ಜಾತಿಗಳ ಗುಲಾಮಗಿರಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಾಗಾಗಿ ಪರಿಶಿಷ್ಟ ಸಮುದಾಯಗಳ ಸಮಸ್ಯೆಗಳು ಇಂದಿಗೂ ಜೀವಾಂತವಾಗಿದೆ. ಅಲ್ಲದೆ ಒಳಮೀಸಲಾತಿಯೂ ಜಾರಿ ಆಗುತ್ತಿಲ್ಲ ಎಂದ ಅವರು, ಸರಕಾರ ಯಾವುದೇ ಸಮಿತಿ, ಉಪಸಮಿತಿಗಳನ್ನು ನೇಮಕ ಮಾಡಿಕೊಳ್ಳಲಿ. ಆದರೆ ಒಳಮೀಸಲಾಯನ್ನು ಜಾರಿ ಮಾಡಲಿ ಎಂದು ಅವರು ಒತ್ತಾಯಿಸಿದರು.

'ಸಂವಿಧಾನದ 14ನೆ ವಿಧಿಯು ಸಮಾನತೆಯನ್ನು ತಿಳಿಸುತ್ತದೆ. ಯಾವುದೇ ಸಮುದಾಯ ಸಾಮಾಜಿಕವಾಗಿ ಹಿಂದುಳಿದರೆ ಅದಕ್ಕೆ ಮೀಸಲಾತಿಯನ್ನು ಕಲ್ಪಿಸಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಹಾಗಾಗಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಅಗತ್ಯ. ಹೀಗಾಗಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು'. 

- ಬಿ. ಗೋಪಾಲ್, ದಲಿತ ಮುಖಂಡ
 

Similar News