ಝಮೀರ್ ​ಅಹ್ಮದ್ ಖಾನ್​ ಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ: ಸಿದ್ದರಾಮಯ್ಯ

ಚಾಮರಾಜಪೇಟೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆ

Update: 2023-01-10 15:58 GMT

ಬೆಂಗಳೂರು, ಜ.10: ಬಿಜೆಪಿ ಒಂದು ಕೋಮುವಾದಿ ಪಕ್ಷ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಹೇಳುತ್ತಾರೆ. ಆದರೆ, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ಬಿಜೆಪಿಯಲ್ಲಿ ಪ್ರಾತಿನಿಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ. 

ಮಂಗಳವಾರ ಚಾಮರಾಜಪೇಟೆಯ ಶ್ರೀ ಜಂಗಮ ಕಲ್ಯಾಣ ಮಂಟಪದಲ್ಲಿ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ, ಜೆಡಿಎಸ್, ಎಂಐಎಂ ಪಕ್ಷದ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರಕಾರ ಮಾಡುತ್ತಿರುವ ಭ್ರಷ್ಟಾಚಾರ ಹಾಗೂ ಸಮಾಜದಲ್ಲಿ ದ್ವೇಷ ಹರಡಲು ಯತ್ನಿಸುತ್ತಿದೆ. ದೇಶದಲ್ಲಿ ಜಾತ್ಯತೀತತೆ ಮತ್ತು ನ್ಯಾಯದ ಆಧಾರದ ಮೇಲೆ ಸರಕಾರವನ್ನು ಬಯಸುವ ಜನರು ಆದಷ್ಟು ಬೇಗ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈಗಿನ ಬಿಜೆಪಿ ಸರಕಾರದಿಂದ ಸ್ಥಗಿತಗೊಂಡಿರುವ ಎಲ್ಲ ಕಲ್ಯಾಣ ಯೋಜನೆಗಳನ್ನು ಪುನಃ ಆರಂಭಿಸಲಾಗುವುದು. ತಮ್ಮ ವಂಚನೆಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಪುಸ್ತಕ ಪ್ರಕಟಿಸುವ ಮೂಲಕ ನನ್ನ ತೇಜೋವಧೆಗೆ ಯತ್ನಿಸಿದರು. ಆದರೆ, ನ್ಯಾಯಾಲಯವು ತಡೆಯಾಜ್ಞೆ ಮೂಲಕ ಅವರ ದುಷ್ಕøತ್ಯಕ್ಕೆ ಕಡಿವಾಣ ಹಾಕಿದೆ ಎಂದು ಎಂದು ಅವರು ಹೇಳಿದರು.

ಝಮೀರ್ ಅಹ್ಮದ್ ಖಾನ್ ಜಾತ್ಯತೀತ ಮುಸ್ಲಿಮ್ ನಾಯಕ. ಮುಸ್ಲಿಮರನ್ನು ಪ್ರೀತಿಸಿದಂತೆ ಹಿಂದೂಗಳು ಸೇರಿದಂತೆ ಎಲ್ಲ ಧರ್ಮೀಯರನ್ನು ಪ್ರೀತಿಸುತ್ತಾರೆ. ಈ ಗುಣ ಎಲ್ಲರಲ್ಲೂ ಇರಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಭಾರತೀಯರು ಅಧಿಕಾರಕ್ಕೆ ಬಂದಂತೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಮಾಜದ ಎಲ್ಲ ಬಡವರಿಗೆ, ನ್ಯಾಯ ಕೊಡುವ ಕೆಲಸ ಮಾಡಿದ್ದೆವು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ. ಝಮೀರ್ ಅಹ್ಮದ್‍ಗೆ ಮುಂದೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಳಬರು, ಹೊಸವರು ಎಂಬ ತಾರತಮ್ಯ ಇಲ್ಲ. ಇಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಗುಣಧರ್ಮ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಮುಖಂಡ ಬಿ.ಕೆ.ಅಲ್ತಾಫ್ ಖಾನ್, ಚಂದ್ರಶೇಖರ್, ರವಿಪ್ರಸಾದ್, ಶಕೀಲ್ ನವಾಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News