ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅಧಿಕಾರ ಸ್ವೀಕಾರ

Update: 2023-01-11 11:17 GMT

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಗೊಳಪಟ್ಟ ದಿ ಮುಸ್ಲಿಂ  ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ  ಪುನರಾಯ್ಕೆಗೊಂಡಿರುವ  ಮಾಜಿ ವಿಧಾನ ಪರಿಷತ್ ಸದಸ್ಯ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ನಗರದ ಬಂದರಿನಲ್ಲಿರುವ  ಸಂಸ್ಥೆಯ  ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆ.ಎಸ್. ಮೊಹಮ್ಮದ್ ಮಸೂದ್ ಅವರು ಅಧಿಕಾರ ವಹಿಸಿಕೊಂಡರು.ಅವರೊಂದಿಗೆ ಉಪಾಧ್ಯಕ್ಷರಾದ ಹಾಜಿ ಸಿ.ಮಹಮೂದ್ ಮತ್ತು ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಮತ್ತು ಕೋಶಾಧ್ಯಕ್ಷರಾಗಿ ಹಾಜಿ ಮೂಸಾ ಮೊಯಿದಿನ್ ಪದಗ್ರಹಣ ಮಾಡಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಮಸೂದ್ ಅವರು ಚುನಾವಣಾಧಿಕಾರಿ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ಅಲಿ  ಅವರಿಂದ ಪ್ರಮಾಣ ಪತ್ರ ಸ್ವೀಕರಿಸುವ ಮೂಲಕ ಅಧಿಕಾರ ವಹಿಸಿಕೊಂಡ ಮಸೂದ್ ಅವರು ಮುಂದೆ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ನೀಡುವಂತೆ ವಿನಂತಿಸಿದರು. ಶೀಘ್ರದಲ್ಲೇ ಎರಡೂ ಜಿಲ್ಲೆಗಳ ವಿವಿಧ ತಾಲೂಕುಗಳ ಪ್ರತಿನಿಧಿಗಳನ್ನು ನೇಮಕ ಮಾಡುವುದಾಗಿ ಪ್ರಕಟಿಸಿದರು.

ದುವಾಶೀರ್ವಚನಗೈದ ಕೇಂದ್ರ ಜುಮಾ ಮಸೀದಿಯ ಖತೀಬ್  ಅಬುಲ್ ಅಕ್ರಂ ಅವರು ಮುಸ್ಲಿಮ್ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸಮುದಾಯದ ನಾಯಕರಾದವರಿಗೆ ಬದ್ಧತೆ ಇರುತ್ತದೆ. ಅವರ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ. ಅದೇ ರೀತಿ ಅವರನ್ನು ನಾಯಕರಾಗಿ ಆಯ್ಕೆ ಮಾಡಿದವರು ಅವರನ್ನು ಅನುಸರಿಸಬೇಕಾಗಿದೆ ಎಂದರು.

ಹಾಜಿ ಕೆ.ಎಸ್.ಮೊಹಮ್ಮದ್ ಮಸೂದ್ ಅವರು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿರುವುದನ್ನು ಶ್ಲಾಘಿಸಿದರು.

Similar News