ಸ್ಯಾಂಟ್ರೋ ರವಿ ಬಂಧನಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ
ಬೆಂಗಳೂರು, ಜ. 11: ಸ್ಯಾಂಟ್ರೋ ರವಿ ಯಾನೆ ಮಂಜುನಾಥ್ ಕೆ.ಎಸ್. ಅಕ್ರಮ ಚಟುವಟಿಕೆಗಳಿಂದ ಕೋಟ್ಯಂತರ ರೂ.ಹಣ ಸಂಪಾದಿಸಿದ್ದು, ಸಚಿವರು ಹಾಗೂ ಅಧಿಕಾರಿಗಳಿಗೆ ಹಣ ನೀಡಿದ್ದಾರೆ. ಆತನನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದೆ. ಹೀಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಬೇಕೆಂದು ಕೋರಿ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ ಮಾಡಿದೆ.
ಬುಧವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದೆ. 'ಮುಖ್ಯಮಂತ್ರಿ, ಗೃಹ ಮಂತ್ರಿ ಹಾಗೂ ಅನೇಕ ಸಚಿವರೊಂದಿಗೆ ಸ್ಯಾಂಟ್ರೋ ರವಿ ಸಂರ್ಪಕ ಹೊಂದಿದ್ದು, ಈತನಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕು'.
'ಆರೋಪಿ ಮಂತ್ರಿಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕವಿದೆ, ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆಂದು ಅಧಿಕಾರಿಯೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾನೆ. ಸಿಎಂ ಗೃಹ ಕಚೇರಿಯ ಬಳಿ ಇರುವ ಕುಮಾರಕೃಪ ಅತಿಥಿ ಗೃಹದ ಅಧಿಕಾರಿಗಳೊಂದಿಗೆ ಈತ ಸಂಪರ್ಕವನ್ನಿಟ್ಟುಕೊಂಡು ಕಾನೂನುಬಾಹಿರ ಚಟುವಟಿಕೆ ನಡೆಸಿರುತ್ತಾನೆ. ಆದುದರಿಂದ ಸ್ಯಾಂಟ್ರೋ ರವಿ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ನಿಯೋಗ ಆಗ್ರಹಿಸಿದೆ.