ಮಂಗಳೂರು: ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನ್ಯಾಕ್ ‘ಎ’ ಮಾನ್ಯತೆ
ಮಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನಿರ್ಧರಿಸುವ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್)ಯು ನಗರದ ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸಿ.ಜಿ.ಪಿ.ಎ 3.07 ಅಂಕಗಳೊಂದಿಗೆ ನ್ಯಾಕ್ ‘ಎ’ ದರ್ಜೆಯ ಮಾನ್ಯತೆ ನೀಡಿದೆ.
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇದು ಗರಿಷ್ಠ ಗ್ರೇಡ್ ಎಂದು ದಾಖಲಾಗಿದೆ. ಖ್ಯಾತ ಶಿಕ್ಷಣ ತಜ್ಞರನ್ನು ಒಳಗೊಂಡ ನ್ಯಾಕ್ ತಂಡವು ಜನವರಿ 6 ಮತ್ತು 7ರಂದು ಮೊದಲ ಸುತ್ತಿನ ಶೈಕ್ಷಣಿಕ ಮೌಲ್ಯಮಾಪನಕ್ಕಾಗಿ ಕಾಲೇಜಿಗೆ ಭೇಟಿ ನೀಡಿ, ಶೈಕ್ಷಣಿಕ ಗುಣಮಟ್ಟ ಮತ್ತು ಪೂರಕ ವ್ಯವಸ್ಥೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಕಾಲೇಜಿನ ಅಭಿವೃದ್ದಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿತ್ತು.
ನ್ಯಾಕ್ ತಂಡದ ನೇತೃತ್ವವನ್ನು ಅಸ್ಸಾಂ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಜಂತಾ ರಾಜ್ಕೊನ್ವರ್ ವಹಿಸಿದ್ದರು.
ಗುಜರಾತಿನ ಹೇಮಚಂದ್ರಾಚಾರ್ಯ ವಿಶ್ವವಿದ್ಯಾನಿಲಯದ ಪ್ರೊ. ಸಂಗೀತ ಶರ್ಮ ಸಂಯೋಜಕ ಸದಸ್ಯರಾಗಿ ಹಾಗೂ ಮುಂಬೈಯ ಟೆಂಡಾರ‌್ಕರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಅನುರಾಧ ರಾನಡೆ ತಂಡದ ಸದಸ್ಯರಾಗಿದ್ದರು.
ತಂಡವು ಕಾಲೇಜಿನ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿನಿಯರ ಕ್ರಿಯಾಶೀಲತೆಯನ್ನೂ, ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ಲಭ್ಯವಿರುವ ಸೌಲಭ್ಯಗಳನ್ನು ನ್ಯಾಕ್ ಪರಿಶೀಲಿಸಿ ಮೆಚ್ಚಿಕೊಂಡಿತ್ತು. ಎರಡು ದಿನದ ಮೌಲ್ಯಮಾಪನದಲ್ಲಿ ಕಾಲೇಜಿನ ವಿವಿಧ ಭಾಗಗಳಿಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟದ ಪರಿಶೀಲನೆಯನ್ನು ಮಾಡಿದೆ ಎಂದು ತಿಳಿದುಬಂದಿದೆ.
ಕಾಲೇಜಿನ ಗ್ರಂಥಾಲಯ ಕೇಂದ್ರಕ್ಕೆ, ಕ್ರೀಡಾ ವಿಭಾಗಕ್ಕೆ, ಗಣಕ ಜ್ಞಾನ, ಗಣಿತ ಪ್ರಯೋಗಾಲಯ, ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರ ಪ್ರಯೋಗಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ತಂಡ ಪರಿಶೀಲಿಸಿದೆ ಎಂದು ಕಾಲೇಜು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ ಬಾಳ ಮತ್ತು ಐಕ್ಯೂಎಸಿ ಹಾಗೂ ನ್ಯಾಕ್ ಸಂಚಾಲಕ ಡಾ. ಚಂದ್ರಶೇಖರ ಕೆ. ನೇತೃತ್ವದ ಅಧ್ಯಾಪಕರ ತಂಡವು ನ್ಯಾಕ್ ಸಮಿತಿಗೆ ಪೂರಕ ದಾಖಲೆಗಳನ್ನು ಒದಗಿಸಿತ್ತು.
ನ್ಯಾಕ್ ಸಮಿತಿಯು ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರನ್ನೊಳಗೊಂಡ ಸದಸ್ಯರೊಂದಿಗೆ, ಪೋಷಕರು ಮತ್ತು ಹಳೆ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿತ್ತು.
ನ್ಯಾಕ್ ತಂಡದ ಭೇಟಿಯ ಸಂದರ್ಭ ಕಾಲೇಜಿನ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ತೇಜೋಮಯ, ನಿಸರ್ಗದ ಮಂಜುನಾಥ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕ ಡಾ. ಜೆನಿಫರ್ ಲೋಲಿಟಾ, ವಿಶೇಷಾಧಿಕಾರಿ ದೇವಿಪ್ರಸಾದ್, ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಮಾನಾಥ ಬಿ., ಕಾಲೇಜಿನ ನ್ಯಾಕ್‌ನ ಸಲಹೆಗಾರ ಪ್ರೊ.ಶಶಿಕಲಾ. ಕೆ, ಹಾಗೂ ಐಕ್ಯೂಎಸಿ ಸಹ ಸಂಚಾಲಕ ಡಾ. ನಯನಾ ಎಲ್.ಎಂ. ಮತ್ತಿತರರು ಉಪಸ್ಥಿತರಿದ್ದರು.