ಪಚ್ಚನಾಡಿ ತ್ಯಾಜ್ಯ ರಾಶಿಗೆ ಬೆಂಕಿ: ಬಿಜೆಪಿಯ ವೈಫಲ್ಯಕ್ಕೆ ಸಾಕ್ಷಿ; ಕಾಂಗ್ರೆಸ್ ಆರೋಪ
ಮಂಗಳೂರು: ನಗರದ ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನ ತ್ಯಾಜ್ಯ ರಾಶಿಯಲ್ಲಿ ಮತ್ತೆ ಮತ್ತೆ ಬೆಂಕಿ ಕಾಣಿಸಿಕೊಳ್ಳಲು ಮಂಗಳೂರು ಮನಪಾದ ಬಿಜೆಪಿ ಆಡಳಿತದ ವೈಫಲ್ಯಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಆರೋಪಿಸಿದೆ.
ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ ನೇತೃತ್ವದಲ್ಲಿ ಬುಧವಾರ ಡಂಪಿಂಗ್ ಯಾರ್ಡ್‌ಗೆ ಭೇಟಿ ನೀಡಿದ ಕಾಂಗ್ರೆಸ್ ನಿಯೋಗವು ಈಗಾಗಲೆ ಬಿಜೆಪಿಯು ಮಹಾನಗರ ಪಾಲಿಕೆಯ ವತಿಯಿಂದ 56 ಕೋ.ರೂ. ಹಳೆಯ ಕಸ ವಿಲೇವಾರಿಗೆ ನೀಡಲಾಗಿದೆ. ಅದನ್ನು ವಹಿಸಿದ ಗುತ್ತಿಗೆದಾರರ ಬೇಜವ್ದಾರಿ ಹಾಗೂ ಮಹಾನಗರ ಪಾಲಿಕೆಯ ಎನ್ವಾಯರ್ಮೆಂಟ್ ವೇಸ್ಟ್ ಮೆನೇಜ್‌ಮೆಂಟ್ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಬೆಂಕಿ ಬೀಳುತ್ತಿವೆ. ಕಸವನ್ನು ಸರಿಯಾಗಿ ವಿಂಗಡಿಸಿ ಪ್ಲಾಸ್ಟಿಕನ್ನು ಬೇರ್ಪಡಿಸಿ ಅಕ್ಟೋಬರ್ ಹಾಗೂ ನವಂಬರ್ ಮೊದಲೇ ಅದಕ್ಕೆ ನೀರನ್ನು ಸಿಂಪಡಿಸಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು. ಈ ಬೆಂಕಿಯ ವಾಸನೆಭರಿತ ಹೊಗೆಯು ಪಚ್ಚನಾಡಿಯ ಸುತ್ತಲೂ ಹರಡಿ ಪದವಿನಂಗಡಿಯವರೆಗೆ ಆವರಿಸಿದೆ. ಇದರಿಂದ ಮಕ್ಕಳು, ಹಿರಿಯ ನಾಗರಿಕರು, ವಯೋವೃದ್ಧರು ಸಂಕಷ್ಟಪಡುತ್ತಿದ್ದಾರೆ. ಆತಂಕದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕ ಭರತ್ ಶೆಟ್ಟಿ ಕೂಡ ನೇರ ಹೊಣೆ ಎಂದು ಆಪಾದಿಸಿದೆ.
ಮಾಜಿ ಶಾಸಕರಾದ ಐವನ್ ಡಿಸೋಜ, ಮೊಯ್ದಿನ್ ಬಾವ, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮನಪಾ ಸದಸ್ಯರಾದ ಭಾಸ್ಕರ ಕೆ., ಲ್ಯಾನ್ಸಿಲೋಟ್ ಪಿಂಟೋ, ಅನಿಲ್ ಕುಮಾರ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ವೀಣಾ ಟೆಲಿಸ್, ಮಂಜುಳಾ ನಾಯಕ್, ಶಾಂತಲಾಗಟ್ಟಿ, ನಝೀರ್ ಬಜಾಲ್, ಯುವ ಕಾಂಗ್ರೆಸ್ ಮುಖಂಡರಾದ ರಾಕೇಶ್ ದೇವಾಡಿಗ, ಸುನೀಲ್ ಪೂಜಾರಿ, ಸಮರ್ಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.