ಅಪಾರ್ಟ್‍ಮೆಂಟ್ ನಿವಾಸಿಗಳ ನೂತನ ಘಟಕ ಆರಂಭಿಸಿದ ಕಾಂಗ್ರೆಸ್‍

Update: 2023-01-11 18:08 GMT

ಬೆಂಗಳೂರು, ಜ.11: ಅಪಾರ್ಟ್‍ಮೆಂಟ್ ನಿವಾಸಿಗಳ ಮೂಲಸೌಕರ್ಯ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಕಾಂಗ್ರೆಸ್ ಪಕ್ಷವು ಅಪಾರ್ಟ್‍ಮೆಂಟ್ ನಿವಾಸಿಗಳ ನೂತನ ಘಟಕವನ್ನು ಆರಂಭಿಸಿದ್ದು, ರಾಜ್ಯಸಭೆಯ ಮಾಜಿ ಸದಸ್ಯ ರಾಜೀವ್ ಗೌಡರನ್ನು ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಶೇಕ್ ದತ್ ತಿಳಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಕೋವಿಡ್ ಸಮಯಗಳಲ್ಲಿ ಅಪಾರ್ಟ್‍ಮೆಂಟ್ ನಿವಾಸಿಗಳು ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಅನಾರೋಗ್ಯ ಸಮಸ್ಯೆ ಇದ್ದವರು ಆಸ್ಪತ್ರೆಗೆ ತೆರಳಲಾಗುತ್ತಿರಲಿಲ್ಲ. ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಐಟಿ ವಲಯ, ಸಣ್ಣ ಮತ್ತು ಮಧ್ಯಮ ವ್ಯಾಪಾರ ಕುಟುಂಬಗಳು, ಇತರ ವರ್ಗದವರು ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭವಿಷ್ಯ ಅಪಾರ್ಟ್‍ಮೆಂಟ್‍ಗಳ ಮೇಲೆ ನಿಂತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿವಾಸಿಗಳ ಸಮಸ್ಯೆಯನ್ನು ತಿಳಿಯಲು ಹಾಗೂ ಅವುಗಳಿಗೆ ಸ್ಪಂದಿಸಲು ಪಕ್ಷ ಘಟಕವನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದರು.

ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ ಮಾತನಾಡಿ, ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ರೂಪಿಸಲು ಪಕ್ಷ ಅಪಾರ್ಟ್‍ಮೆಂಟ್ ಘಟಕ ಸ್ಥಾಪಿಸಿದೆ. ಈ ಘಟಕ ಶಾಶ್ವತ ಘಟಕವಾಗಿ ಉಳಿಯಲಿದೆ. ಈ ಘಟಕದಲ್ಲಿ ಸಂಚಾಲಕರಾಗಿ ಪ್ರವೀಣ್ ಪೀಟರ್, ಸಹ ಸಂಚಾಲಕರಾಗಿ ಮಾಜಿ ಮೇಯರ್ ಗಂಗಾಭಿಕೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. 

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ಮೊದಲು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅಪಾರ್ಟ್‍ಮೆಂಟ್ ಮಾಲಕರ ಸಂಘ, ಅಪಾರ್ಟ್‍ಮೆಂಟ್ ನಿವಾಸಿಗಳ ಸಂಘದವರನ್ನು ಒಂದೆಡೆಗೆ ಸೇರಿಸಿ ಅವರನ್ನು ತಲುಪುವ ಪ್ರಯತ್ನ ಮಾಡಲಾಗುತ್ತದೆ. ನಂತರ ಪ್ರತಿ ಕ್ಷೇತ್ರಗಳಲ್ಲಿ ಸಭೆ ಮಾಡಿ ಸಭೆಯಲ್ಲಿ ನಿವಾಸಿಗಳ ಅಗತ್ಯತೆಗಳನ್ನು ಚರ್ಚಿಸಲಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಅಪಾರ್ಟ್‍ಮೆಂಟ್ ನಿವಾಸಿಗಳಲ್ಲಿ ತಬ್ಬಲಿಯ ಭಾವನೆ ಬರಬಾರದು. ರಾಜಕೀಯ ನಾಯಕರು ತಮ್ಮತ್ತ ಗಮನಹರಿಸುತ್ತಿಲ್ಲ ಎಂದುಕೊಳ್ಳಬಾರದು. ಹಾಲಿ ಸರಕಾರ ಅವರ ಬಗ್ಗೆ ಗಮನಹರಿಸುತ್ತಿಲ್ಲ. ನಾವು ಮೂಲ ಸೌಕರ್ಯ, ನೀರು, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಭದ್ರತೆ ವಿಚಾರವಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಬೆಂಗಳೂರು ವಿಶ್ವದಲ್ಲೇ ಅತ್ಯಂತ ವಾಸ ಯೋಗ್ಯ ನಗರವನ್ನಾಗಿ ಮಾಡಬೇಕು ಎಂಬುದು ನಮ್ಮ ಗುರಿ ಎಂದ ಅವರು, ಸಮಿತಿಯಲ್ಲಿ ಎನ್.ಎಸ್ ಮುಕುಂದ, ತಾರಾ ಕೃಷ್ಣಸ್ವಾಮಿ, ಕಿರಣ್ ಹೆಬ್ಬಾರ್, ಗೀತಾ ಶಿವರಾಂ, ಡಿ.ವಿ. ಲಕ್ಷ್ಮಿ, ಕೆ.ವಿ ಗೌತಮ್, ದೀಪಿಕಾ ರೆಡ್ಡಿ, ಕರ್ನಲ್ ದಿನೇಶ್ ಕುಮಾರ್, ಕರ್ನಲ್ ರಾಜ್, ಜಗದೀಶ್ ರೆಡ್ಡಿ, ಮಕ್ಕಳ ಹೋರಾಟಗಾರ್ತಿ ಸರಿತಾ ವಾಸು, ರಾಜೇಂದ್ರ ಬಾಬು ಇದ್ದಾರೆಂದು ಮಾಹಿತಿ ನೀಡಿದರು.

ಜನರ ರಕ್ತ ಹೀರುವ ಬಿಜೆಪಿ ಸರಕಾರ: ‘ಬಿಜೆಪಿ ಜನರ ರಕ್ತ ಹೀರುವ ಸರಕಾರವಾಗಿದ್ದು, ಜನರ ರಕ್ಷಣೆಗೆ ಕೆಲಸ ಮಾಡುತ್ತಿಲ್ಲ. ರಸ್ತೆ ಗುಂಡಿ, ಚರಂಡಿ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತಾಡಿ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆಯಲ್ಲೇ ಅವರ ಮನಸ್ಥಿತಿ ಅಡಗಿದೆ. ಮೆಟ್ರೋ ಕಳಪೆ ಕಾಮಗಾರಿಯಿಂದ ಪಿಲ್ಲರ್ ಬಿದ್ದು ಎರಡು ಅಮಾಯಕ ಜೀವಗಳು ಬಲಿಯಾಗಿವೆ. ನಗರದಲ್ಲಿ ರಸ್ತೆ ಗುಂಡಿಗಳಿಂದ ಇದುವರೆಗೆ 17 ಜನ ಪ್ರಾಣ ಕಳೆದು ಕೊಂಡಿದ್ದಾರೆ. ಸರಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಪರಮಾವಧಿ ತಲುಪಿದೆ. ಮೆಟ್ರೋ ಸಿಎಂ ವ್ಯಾಪ್ತಿಗೆ ಬರುತ್ತದೆ, ಅಲ್ಲದೆ ಬೆಂಗಳೂರಿನ 8 ಶಾಸಕರು ಮಂತ್ರಿಗಳಾಗಿದ್ದರೂ, ಯಾವುದಕ್ಕೂ ಲಾಯಕ್ಕಿಲ್ಲ’

-ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Similar News