ಚುನಾವಣೆಯಲ್ಲಿ ಈ ಬಾರಿ 30 ಮಹಿಳೆಯರಿಗೆ ಟಿಕೆಟ್ ಕೊಡಬೇಕು: ಮಹಿಳಾ ಕಾಂಗ್ರೆಸ್ ಆಗ್ರಹ
ಬೆಂಗಳೂರು, ಜ.12: ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.16ರ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿರುವ ‘ನಾ ನಾಯಕಿ’ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ನಾಯಕಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಮಹಿಳೆಯರು, ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಿಂದ ಮಹಿಳಾ ನಾಯಕಿಯರು, ಶಾಸಕಿಯರು, ಪರಾಜಿತ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು, ಪದಾಧಿಕಾರಿಗಳು ಆಗಮಿಸುತ್ತಾರೆ ಎಂದರು.
ಅಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ವಿಶೇಷವಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 30 ಮಹಿಳೆಯರಿಗೆ ಟಿಕೆಟ್ ಕೊಡಬೇಕು ಎಂದು ಪ್ರಿಯಾಂಕಾ ಗಾಂಧಿಗೆ ಪಕ್ಷದ ಎಲ್ಲ ನಾಯಕಿಯರು ಸೇರಿ ಮನವಿ ಮಾಡುತ್ತೇವೆ ಎಂದು ಉಮಾಶ್ರೀ ಹೇಳಿದರು.
ಈಗಾಗಲೇ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿ, ಒಂದು ಪ್ರಯತ್ನ ಮಾಡಲಾಗಿದೆ. 109 ಮಹಿಳೆಯರು ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಟಿಕೆಟ್ ಆಕಾಂಕ್ಷಿಗಳಾಗಿರುವುದರಿಂದ ಅವಕಾಶ ಕಲ್ಪಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ನಾವು ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಲು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸಿದ್ದಾರೆ. ನಿನ್ನೆ ಯಾತ್ರೆಯ ಮೊದಲ ದಿನ ಪಕ್ಷ ‘ಗೃಹಜ್ಯೋತಿ’ ಎಂಬ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಘೋಷಿಸಿದೆ ಎಂದರು.
ಈ ಬಾರಿ ಪಕ್ಷದ ವತಿಯಿಂದ ಮಹಿಳೆಯರಿಗಾಗಿ ಪ್ರತ್ಯೆಕ ಪ್ರಣಾಳಿಕೆ ನೀಡಲು ಮಹಿಳೆಯರಿಂದಲೇ ಸಲಹೆಗಳನ್ನು ಪಡೆಯಲು ಆಹ್ವಾನ ನೀಡಲಾಗಿದೆ. ಎಲ್ಲ ವರ್ಗದ ಜನರನ್ನು ಮುಟ್ಟಲು ಈ ಪ್ರಯತ್ನ ಮಾಡಲಾಗಿದೆ. ಮಹಿಳಾ ಕಾಂಗ್ರೆಸ್ ಜಿಲ್ಲಾ, ಬ್ಲಾಕ್, ಬೂತ್ ಮಟ್ಟದ ಅಧ್ಯಕ್ಷರು ಈ ವಿಚಾರವನ್ನು ತಳಮಟ್ಟದವರೆಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈಗಾಗಲೇ ಝೂಮ್ ಮೂಲಕ 3 ಬಾರಿ ಮಹಿಳಾ ಪದಾಧಿಕಾರಿಗಳ ಸಭೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚು ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ. ಪ್ರತಿ ವಾರ್ಡ್ ಹಾಗೂ ಪಂಚಾಯಿತಿ ಮಟ್ಟದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸಲು ತೀರ್ಮಾನಿಸಲಾಗಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ರಾಣಿ ಸತೀಶ್, ಪರಿಷತ್ ಮಾಜಿ ಸದಸ್ಯರಾದ ಮಲ್ಲಾಜಮ್ಮ, ಜಲಜಾ ನಾಯ್ಕ್, ಮಾಜಿ ಮೇಯರ್ ಪದ್ಮಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.