ಕೊಂಕಣ ರೈಲ್ವೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2023-01-12 16:45 GMT

ಉಡುಪಿ: ಕರಾವಳಿ ಜಿಲ್ಲೆಗಳನ್ನು ಹಾದು ಹೋಗುವ ಕೊಂಕಣ ರೈಲ್ವೆ ವ್ಯಾಪ್ತಿಯ ರೈಲುಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ರೈಲ್ವೆ ಇಲಾಖೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ  ಸೂಚಿಸಿದರು.

ಮಣಿಪಾಲದಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್‌ಆಚಾರ್ಯ ಸಭಾಂಗಣ ದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ರೈಲುಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ತಮಗೆ ತುಂಬಾ ದೂರುಗಳು ಬರುತ್ತಿವೆ. ಸಾರ್ವಜನಿಕರು ಸಹ ಈ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬಯಿಂದ ಮದುವೆಯಲ್ಲಿ ಭಾಗವಹಿಸಲು ಬರುತಿದ್ದ ಜಿಲ್ಲೆಯ ಮಹಿಳೆಯೊಬ್ಬರ 50 ಲಕ್ಷ ರೂ. ಮೌಲ್ಯದ ಆಭರಣ ಕಳವಾಗಿದೆ. ಇದನ್ನು ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಮಾತನಾಡಿ, ಈ ಕಳ್ಳತನ ಭಟ್ಕಳ ಹಾಗೂ ಉಡುಪಿ ನಿಲ್ದಾಣಗಳ ನಡುವೆ ನಡೆದಿದೆ. ಅವರಿಗೆ ಮಾಹಿತಿ ಕೇಳಿ, ರೈಲು ನಿಲ್ದಾಣ ಹಾಗೂ ಬೋಗಿಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸೂಚಿಸಿದರೆ, ಅದಕ್ಕೆ ತಮ್ಮಲ್ಲಿ ಫಂಡ್ ಇಲ್ಲ ಎಂದು ಉತ್ತರಿಸಿದ್ದಾರೆ ಎಂದರು.

ಎಸ್ಪಿ ಮಾತಿಗೆ ಆಕ್ರೋಶಗೊಂಡ ಸಂಸದೆ, ಹಣ ಇಲ್ಲದಿದ್ದರೆ ರೈಲನ್ನೇ ನಿಲ್ಲಿಸಲಿ. ಜನರಿಗೆ ರಕ್ಷಣೆ ನೀಡಲು, ಅವರ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದರೆ ಹೇಗೆ ಎಂದು  ಪ್ರಶ್ನಿಸಿದರು. ರೈಲ್ವೆ ಇಲಾಖೆಯ ಅಧಿಕಾರಿಗಳು ಕಳ್ಳತನ ತಡೆಯಲು ಬೇಕಾದ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ರೈಲಿನ ಪ್ರತಿ  ಬೋಗಿಗಳಲ್ಲಿ ಸಿಸಿಟಿವಿ ಅಳವಡಿಕೆ,  ಪ್ರಯಾಣಿಕರಿಗೆ ಲಾಕರ್‌ಗಳ ವ್ಯವಸ್ಥೆ ಮಾಡಬೇಕು. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವಂತೆ ಸೂಚನೆ ನೀಡಿದ ಕೇಂದ್ರ ಸಚಿವರು, ಈ ಬಗ್ಗೆ ದೆಹಲಿಯಲ್ಲಿ ಇಲಾಖೆಯ ಅಧಿಕಾರಿ ಗಳೊಂದಿಗೆ ಕೂಡಾ ಚರ್ಚಿಸುವುದಾಗಿ ತಿಳಿಸಿದರು.

ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯ ದುರಸ್ತಿ ಕುರಿತಂತೆ ರೈಲ್ವೆ, ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ತನಿಖೆ ನಡೆಸಿ, ಶೀಘ್ರದಲ್ಲಿ ಪ್ರಯಾಣಿಕರಿಗೆ ಉತ್ತಮ ರಸ್ತೆ ಸೌಲಭ್ಯ ಒದಗಿಸುವಂತೆ ಹಾಗೂ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಹಾಗೂ ಎಲ್ಲಾ ಕಡೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಗುರುತಿಸಲಾಗಿರುವ ಬ್ಲಾಕ್ ಸ್ಪಾಟ್‌ಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದ ಸಚಿವರು, ಕಟಪಾಡಿ, ಉಡುಪಿ ಮತ್ತು ಪಡುಬಿದ್ರಿ ಜಂಕ್ಷನ್‌ಗಳಲ್ಲಿ ಅಪಘಾತ ಮತ್ತು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಿಗ್ನಲ್ ಅಳವಡಿಸುವಂತೆ, ಕರಾವಳಿ- ಮಲ್ಪೆ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸುವಂತೆ, ಪರ್ಕಳದಲ್ಲಿ ತ್ವರಿತಗತಿ ಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಮತ್ತು ಯಾವುದೇ ಕಾನೂನು ತೊಡಕುಗಳಿದ್ದಲ್ಲಿ  ಶೀಘ್ರದಲ್ಲಿ ಬಗೆಹರಿಸಿಕೊಳ್ಳುವಂತೆ  ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶದ ಜನತೆಗೆ ಮನೆ ನಿರ್ಮಾಣ ಕುರಿತಂತೆ ವ್ಯಾಪಕ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಪೂರ್ಣ ಗುರಿ ಸಾಧಿಸುವಂತೆ ಹಾಗೂ ಮನೆ ನಿರ್ಮಾಣಕ್ಕೆ ಸುಲಭ ರೀತಿಯಲ್ಲಿ ಸಾಲ ದೊರೆಯುವಂತೆ ಕ್ರಮ ಕೈಗೊಳ್ಳಿ ಎಂದರು.

ಜಿಲ್ಲೆಯ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಗೇರು ಬೆಳೆಗಾರರಿಗೆ ಉತ್ತಮ ತಳಿಯ ಕಸಿ ಗಿಡ ಮತ್ತು ಹೆಚ್ಚು ಇಳುವರಿ ನೀಡುವ ಗೇರು ಗಿಡಗಳನ್ನು ಸರಬರಾಜು ಮಾಡುವಂತೆ ಸೂಚಿಸಿದ ಸಚಿವರು, ಮೀನುಗಾರಿಕೆ ಇಲಾಖೆ ವತಿಯಿಂದ ಎಫ್‌ಓಪಿ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಬಿ.ಎಂ.ಸುಕುಮಾರ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಪಂ ಸಿಇಓ ಪ್ರಸನ್ನ ಹೆಚ್, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್ ಹಾಗೂ ವಿವಿಧಿಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Similar News