ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸದೃಢ ಭಾರತದ ನಿರ್ಮಾಣ ಸಾಧ್ಯ: ಸಚಿವ ಡಾ.ಅಶ್ವತ್ಥ ನಾರಾಯಣ
ಬೆಂಗಳೂರು, ಜ. 13: ‘ಯುವಜನರು ಸ್ವಾಮಿ ವಿವೇಕಾನಂದರಂತೆ ಬದ್ಧತೆಯಿಂದ ಕೆಲಸ ಮಾಡುವ ಸಂಸ್ಕೃತಿ ರೂಢಿಸಿಕೊಳ್ಳಬೇಕೆಂಬ ಆಶಯದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಶುಕ್ರವಾರ ಮಲ್ಲೇಶ್ವರಂ ಕ್ಷೇತ್ರದ ಹಲವೆಡೆ ಆಯೋಜಿಸಿದ್ದ ವಿವೇಕಾನಂದರ 160ನೆ ಜಯಂತಿ ಪ್ರಯುಕ್ತ ಯುವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎನ್‍ಇಪಿ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ನೈತಿಕ ದೃಷ್ಟಿಕೋನಗಳಿಗೆ ಆದ್ಯತೆ ನೀಡಲಾಗಿದೆ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸದೃಢ ಭಾರತದ ನಿರ್ಮಾಣ ಸಾಧ್ಯ’ ಎಂದು ಪ್ರತಿಪಾದಿಸಿದರು.
‘ವಿದ್ಯಾರ್ಥಿಗಳು ತಾವೇ ತಮ್ಮ ಭವಿಷ್ಯದ ಶಿಲ್ಪಿಗಳಾಗಬೇಕು. ಈಗ ಇಡೀ ಜಗತ್ತಿನ ಜತೆ ನಾವು ಸ್ಪರ್ಧಿಸುತ್ತಿದ್ದೇವೆ. ಆದುದರಿಂದ ಈ ನಿಟ್ಟಿನಲ್ಲಿ ವಿವೇಕಾನಂದ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ. ಎನ್‍ಇಪಿ ನೀತಿಯು ವಿದ್ಯಾರ್ಥಿ ಕೇಂದ್ರಿತವಾಗಿದೆ. ಪ್ರಧಾನಿಯವರು ಯುವಜನರ ವಿಕಾಸಕ್ಕೆ ಪೂರಕವಾದ ಹಲವು ಉಪಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಗುಣಮಟ್ಟ, ಕೌಶಲ್ಯ ಮತ್ತು ಸಮಾಜಮುಖಿಯಾದ ನಾಯಕತ್ವಕ್ಕೆ ಈಗ ಗಮನ ಹರಿಸಲಾಗಿದೆ ಎಂದು ಅವರು ನುಡಿದರು.
ತಂತ್ರಜ್ಞಾನ ಇಂದು ಜಗತ್ತನ್ನು ಆಳುತ್ತಿದೆ. ಅದರಲ್ಲೂ ಬೆಂಗಳೂರು ನಗರವು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನಗಳ ರಾಜಧಾನಿ ಆಗಿದೆ. ನಾವು ಸಾಂಘಿಕವಾಗಿ ಕೆಲಸ ಮಾಡುವ ಅಭ್ಯಾಸ ರೂಢಿಸಿ ಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ, ಬೆಂ.ನಗರ ವಿವಿ ಕುಲಪತಿ ಲಿಂಗರಾಜ ಗಾಂಧಿ, ಕುಲಸಚಿವ ಡಾ.ಶ್ರೀಧರ, ಪ್ರಾಂಶುಪಾಲೆ ಡಾ.ಪ್ರತಿಮಾ, ಡಾ.ಜ್ಯೋತಿ ವೆಂಕಟೇಶ್, ರತ್ನಾಕರ ಶೆಟ್ಟಿ, ಡಾ.ಲಕ್ಷ್ಮಿ ಉಪಸ್ಥಿತರಿದ್ದರು.