ಚೆಕ್‍ಬೌನ್ಸ್ ಪ್ರಕರಣ: ನಿರ್ದೇಶಕ ಗುರುಪ್ರಸಾದ್ ಬಂಧನ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
Update: 2023-01-13 20:18 IST
ಬೆಂಗಳೂರು, ಜ.13: ಚೆಕ್‍ಬೌನ್ಸ್ ಆರೋಪಕ್ಕೆ ಸಂಬಂಧಪಟ್ಟಂತೆ ಸಿನಿಮಾ ನಿರ್ದೇಶಕ, ನಟ ಗುರುಪ್ರಸಾದ್ ಅವರನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಚೆಕ್‍ಬೌನ್ಸ್ ಗೆ ಸಂಬಂಧಪಟ್ಟಂತೆ ನೆಗೋಶಿಯೇಬಲ್ ಇನ್‍ಸ್ಟುಮೆಂಟ್ಸ್ ಕಾಯ್ದೆಯಡಿ ಗುರುಪ್ರಸಾದ್ ವಿರುದ್ಧ ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಲಾಗಿತ್ತು. ಇದರ ವಿಚಾರಣೆಗೆ ಅವರು ಗೈರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಅದರಂತೆ ಗಿರಿನಗರ ಠಾಣಾ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿದರು. ಆನಂತರ, ಸಂಜೆ 21ನೆ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಫೆ.7ಕ್ಕೆ ವಿಚಾರಣೆಯನ್ನು ಮುಂದೂಡಿತು.