ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದರೆ, ದಂಡ ವಿಧಿಸುವಂತೆ BBMP ಎಚ್ಚರಿಕೆ

Update: 2023-01-13 15:28 GMT

ಬೆಂಗಳೂರು, ಜ.13: ನಗರದ ಮಾಗಡಿ ರಸ್ತೆ ಬದಿಯ ಪಾದಚಾರಿ ಮಾರ್ಗಗಳನ್ನು ಮಳಿಗೆಗಳು ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತದೆ. ಹಾಗಾಗಿ ಒತ್ತುವರಿ ತೆರವು ಮಾಡಿರುವವರಿಗೆ ಒತ್ತುವರಿ ತೆರವುಗೊಳಿಸುವಂತೆ ಎಚ್ಚರಿಕೆ ನೀಡಬೇಕು. ಒತ್ತುವರಿ ತೆರವುಗೊಳಿಸದಿದ್ದರೆ ಮುಲಾಜಲ್ಲದೆ ದಂಡ ವಿಧಿಸಬೇಕು ಎಂದು ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿ ಮಾತನಾಡಿದ ಅವರು, ಕೆಂಗೇರಿ 80 ಅಡಿ ರಸ್ತೆಯಲ್ಲಿ ಗ್ರೀನ್ ಹೌಸ್ ಎಂಬ ತರಕಾರಿ ಮಳಿಗೆಯು ಪಾದಚಾರಿ ಮಾರ್ಗದಲ್ಲಿ ರಾಶಿ-ರಾಶಿ ತರಕಾರಿಗಳನ್ನು ಹಾಕಿದ್ದು, ಕೂಡಲೆ ಪಾದಚಾರಿ ಮಾರ್ಗದಲ್ಲಿ ಹಾಕಿರುವ ತರಕಾರಿಗಳನ್ನು ತೆರವುಗೊಳಿಸಬೇಕು. ಮತ್ತೆ ಪಾದಚಾರಿ ಮಾರ್ಗದಲ್ಲಿ ಹಾಕಿದಲ್ಲಿ ಮಳಿಗೆ ಮಾಲಕರಿಗೆ 50 ಸಾವಿರ ರೂ. ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೇರೋಹಳ್ಳಿ ವಾರ್ಡ್‍ನಲ್ಲಿ ಹೊಸದಾಗಿ ಡಯಾಲಿಸಿಸ್ ಸೆಂಟರ್ ಅನ್ನು ಸ್ಥಾಪಿಸಲಾಗುತ್ತಿದ್ದು, ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿಕೊಂಡು ಶೀಘ್ರ ಸಾರ್ವಜನಿಕರ ಸೇವೆಗೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ವಲಯ ಜಂಟಿ ಆಯುಕ್ತರಾದ ನಾಗರಾಜ್, ವಲಯ ಮುಖ್ಯ ಅಭಿಯಂತರರಾದ ರಾಘವೇಂದ್ರ ಪ್ರಸಾದ್, ಅಧೀಕ್ಷಕ ಅಭಿಯಂತರರಾದ ನಂದೀಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Similar News