ಉಕ್ರೇನ್ ಸಂಘರ್ಷಕ್ಕೆ ಬೆಲಾರಸ್ ಪ್ರವೇಶಿಸಬಹುದು: ರಶ್ಯ‌

Update: 2023-01-13 18:34 GMT

  ಮಾಸ್ಕೊ, ಜ.13: ಒಂದು ವೇಳೆ ರಶ್ಯ ಅಥವಾ ಬೆಲಾರಸ್ನ ಮೇಲೆ ಆಕ್ರಮಣಕ್ಕೆ ಉಕ್ರೇನ್ ನಿರ್ಧರಿಸಿದರೆ ತಕ್ಷಣ ಉಕ್ರೇನ್ ಸಂಘರ್ಷಕ್ಕೆ ಬೆಲಾರಸ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ರಶ್ಯದ ವಿದೇಶಾಂಗ ಸಚಿವಾಲದ ಅಧಿಕಾರಿ ಹೇಳಿದ್ದಾರೆ.

 2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣದ ಆರಂಭಕ್ಕೆ ಬೆಲಾರಸ್ ಅನ್ನು ಚಿಮ್ಮುಹಲಗೆ(ಸ್ಪ್ರಿಂಗ್ಬೋರ್ಡ್) ಆಗಿ ರಶ್ಯ ಬಳಸಿಕೊಂಡಿತ್ತು. ಬಳಿಕ ಅಕ್ಟೋಬರ್ನಲ್ಲಿ ಎರಡೂ ದೇಶಗಳು ಜಂಟಿ ಸಮರಾಭ್ಯಾಸ ನಡೆಸಿದ್ದು ಅಂದಿನಿಂದ ರಶ್ಯದ ಸೇನೆಯ ಒಂದು ತುಕಡಿ ಬೆಲಾರಸ್ನಲ್ಲೇ ಇದೆ. ಬಳಿಕ ಎರಡೂ ದೇಶಗಳು ಮಿಲಿಟರಿ ಸಹಕಾರ ಸಂಬಂಧ ವೃದ್ಧಿಸಲು ಒಪ್ಪಿಕೊಂಡಿದ್ದು , ತನ್ನ ನಿಕಟ ಮಿತ್ರ ಬೆಲಾರಸ್ ಅನ್ನು ಬಳಸಿಕೊಂಡು ರಶ್ಯವು ಉಕ್ರೇನ್ ಮೇಲೆ ಹೊಸದಾಗಿ ದಾಳಿ ಆರಂಭಿಸಬಹುದು ಎಂಬ ಆತಂಕ ಹೆಚ್ಚಿದೆ.

ಬೆಲಾರಸ್ನೊಂದಿಗೆ ನಡೆಸುತ್ತಿರುವ ಜಂಟಿ ಸಮರಾಭ್ಯಾಸವು ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯುವ ಉದ್ದೇಶ ಹೊಂದಿದೆ. ಕಾನೂನಿನ ಅಂಶದಿಂದ ಪರಿಗಣಿಸಿದರೆ, ಉಕ್ರೇನ್ ಆಡಳಿತದಿಂದ ಮಿಲಿಟರಿ ಬಲದ ಬಳಕೆ ಅಥವಾ ಉಕ್ರೇನ್ನ ಸಶಸ್ತ್ರ ಪಡೆಯಿಂದ ಬೆಲಾರಸ್ ಅಥವಾ ರಶ್ಯದ ಪ್ರದೇಶದ ಮೇಲಿನ ಆಕ್ರಮಣವು ಸಾಮೂಹಿಕ ಪ್ರತಿಕ್ರಿಯೆಗೆ ಆಧಾರವಾಗಿದೆ ಎಂದು ಉಕ್ರೇನ್ ವಿದೇಶಾಂಗ ಇಲಾಖೆಯ ಅಧಿಕಾರಿ ಅಲೆಕ್ಸಿ ಪೊಲಿಶ್ಚುಕ್ರನ್ನು ಉಲ್ಲೇಖಿಸಿ ‘ತಾಸ್’ ಸುದ್ಧಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಬುಧವಾರ ಸುದ್ಧಿಗಾರರ ಜತೆ ಮಾತನಾಡಿದ್ದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ‘ಬೆಲಾರಸ್-ಉಕ್ರೇನ್ ಗಡಿಭಾಗದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲೂ ತಮ್ಮ ಸೇನೆ ಸನ್ನದ್ಧವಾಗಿದೆ. ಆದರೆ ಆ ಕಡೆಯಿಂದ ಅಬ್ಬರದ ಹೇಳಿಕೆ ಬಿಟ್ಟರೆ ಬೇರೇನೂ ನಡೆಯುವ ಲಕ್ಷಣ ಕಾಣುತ್ತಿಲ್ಲ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಾಗುತ್ತದೆ’ ಎಂದು ಹೇಳಿದ್ದಾರೆ. 

Similar News