ನಾಗಾರ್ಜುನ ಕನ್‌ಸ್ಟ್ರಕ್ಷನ್ಸ್‌ನಿಂದ ಬೀದರ್‌ನಲ್ಲೂ ಕಳಪೆ ಕಾಮಗಾರಿ

ಮೆಟ್ರೊ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಪ್ರಕರಣ

Update: 2023-01-14 02:23 GMT

ಬೆಂಗಳೂರು, ಜ.13: ನಗರದ ಹೆಣ್ಣೂರು ಕ್ರಾಸ್ ಬಳಿ ನಿರ್ಮಾಣ ಹಂತದಲ್ಲಿದ್ದ  ಮೆಟ್ರೊ ಪಿಲ್ಲರ್ ಕುಸಿದು ತಾಯಿ ಮಗುವನ್ನು ಬಲಿ ಪಡೆದುಕೊಂಡಿರುವ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿರುವ ನಾಗಾರ್ಜುನ 

ಕನ್‌ಸ್ಟ್ರಕ್ಷನ್ಸ್ ಕಂಪೆನಿಯು ಬೀದರ್‌ನಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿಯೂ ಕಳಪೆ ಕಾಮಗಾರಿ ಮಾಡಿರುವ ಪರಿಣಾಮ ಆಸ್ಪತ್ರೆಯ ಬೀಮ್‌ಗಳಲ್ಲಿ ನೀರು ಸೋರಿಕೆಯಾಗುತ್ತಿರುವುದು  ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

‘ಆಸ್ಪತ್ರೆ ವಿಸ್ತರಣೆಗಾಗಿ ಅಳವಡಿಸಿರುವ ಬೀಮ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಜಾಯಿಂಟ್ ಕೆಲಸಗಳು ಸರಿಯಾಗಿ ಆಗದೇ ಇರುವುದರಿಂದ ನೀರು ಸೋರಿಕೆಯಾಗುತ್ತಿದೆ. ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೇ ಇರುವುದೇ ಇದಕ್ಕೆ ಕಾರಣ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಸಲ್ಲಿಸಿರುವ ವರದಿಯು ಇದೀಗ ಮುನ್ನೆಲೆಗೆ ಬಂದಿದೆ.

 ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಮೇಲು ಸ್ತುವಾರಿಯಲ್ಲಿ ಎನ್‌ಸಿಸಿ ಸಂಸ್ಥೆಯು ಕಾಮಗಾರಿ ಕೈಗೆತ್ತಿ ಕೊಂಡಿತ್ತು. ಈ ಕಂಪೆನಿಯು ಕೈಗೆತ್ತಿ ಕೊಂಡಿರುವ  ಆಸ್ಪತ್ರೆಯ ಕಾಮಗಾರಿಯು  ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಕಾಮಗಾರಿ ಗುಣಮಟ್ಟದ ಕುರಿತು ವರದಿಯನ್ನು ಸಲ್ಲಿಸದ ಪಿಡಬ್ಲ್ಯೂಡಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿರುವುದು ವರದಿಯಿಂದ ಗೊತ್ತಾಗಿದೆ.

‘ನಾಗಾರ್ಜುನ ಕನ್‌ಸ್ಟ್ರಕ್ಷನ್ಸ್  ಕಂಪೆನಿ ಯವರು ಎಲ್ಲ ಕಾಮಗಾರಿಗಳನ್ನು ಮುಗಿಸಿ 2020ನೇ ವರ್ಷದಲ್ಲಿ ಕಟ್ಟಡ ವನ್ನು ಆಸ್ಪತ್ರೆಗೆ ಹಸ್ತಾಂತರ ಮಾಡಿ ರುತ್ತಾರೆ. ಕಾಮಗಾರಿಗೆ ನಿಗದಿ ಪಡಿಸಿದ್ದ ಅನು ದಾನದಲ್ಲಿ 105 ಕೋಟಿ ರೂ.ಗಳನ್ನು ಸಂಸ್ಥೆಗೆ ಪಾವತಿಸಲಾಗಿದೆ. ಬಾಕಿ ಪಾವತಿಸಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡಿಲ್ಲ,’ ಎಂಬುದು ವರದಿಯಿಂದ ಗೊತ್ತಾಗಿದೆ.

 ಬಿಮ್ಸ್ ಆಸ್ಪತ್ರೆ ಕಟ್ಟಡ ಕಾಮಗಾರಿಯೂ ಸೇರಿದಂತೆ ಇಲ್ಲಿನ ಅವ್ಯವಸ್ಥೆಗಳ ಕುರಿತು ಶಾಸಕ  ಹಾಗೂ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸದಸ್ಯರೂ ಆಗಿರುವ ಈಶ್ವರ್ ಬಿ.ಖಂಡ್ರೆ ಅವರು ಹಲವು ದೂರುಗಳನ್ನು ಸಮಿತಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವರ ನೇತೃತ್ವದಲ್ಲಿ 2022ರ ನವೆಂಬರ್ 9ರಂದು ಆಸ್ಪತ್ರೆಯ ಕಾಮಗಾರಿ ಮತ್ತು ವ್ಯವಸ್ಥೆಗಳನ್ನು ಪರಿವೀಕ್ಷಣೆ ನಡೆಸಲಾಗಿತ್ತು. ಪರಿವೀಕ್ಷಣೆ ವೇಳೆಯಲ್ಲಿ ಆಸ್ಪತ್ರೆ ಕಾಮಗಾರಿಯಲ್ಲಿನ ಹಲವು ಲೋಪಗಳು ಬೆಳಕಿಗೆ ಬಂದಿದ್ದವು. ಇದನ್ನಾಧರಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಸರಕಾರಕ್ಕೆ ವರದಿ ಸಲ್ಲಿಸಿದ್ದರು ಎಂಬುದು  ಗೊತ್ತಾಗಿದೆ.

 ಸಿಬ್ಬಂದಿ ವಾಹನ ನಿಲುಗಡೆಗಾಗಿ ಮೀಸಲಿಟ್ಟಿರುವ ಆಸ್ಪತ್ರೆಯ ನೆಲಮಹಡಿಯಲ್ಲಿ ನೀರು ಸೋರಿಕೆಯಾಗುತ್ತಿರುವುದು, ಅಗ್ನಿ ಶಾಮಕ ಇಲಾಖೆಯವರು ವಿಧಿಸಿರುವ ದಂಡದ ಮೊತ್ತನ್ನು ಪಾವತಿಸಲು ವಿಫಲವಾಗಿರುವುದು, ಇಂಟರ್ನೆಟ್ ಸೇವೆ ಅಸಮರ್ಪಕವಾಗಿರುವುದು, ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಪ್ರಾರಂಭಿಸದೇ ಇರುವುದು, ಆಸ್ಪತ್ರೆಯ ಸಿವಿಲ್ ಕಾಮಗಾರಿಗಳಲ್ಲಿ ಆಗಿರುವ ಲೋಪಗಳ ಕುರಿತು ಕ್ರಮಕೈಗೊಳ್ಳದಿರುವುದು, ಆಸ್ಪತ್ರೆಗೆ ಲೆಕ್ಕಾಧಿಕಾರಿ, ಆರ್ಥಿಕ ಸಲಹೆಗಾರರನ್ನು ನೇಮಿಸದಿರುವುದು ಸೇರಿದಂತೆ ಹಲವು ಲೋಪಗಳನ್ನು ಪರಿವೀಕ್ಷಣೆ ವೇಳೆಯಲ್ಲಿ ಪತ್ತೆ ಹಚ್ಚಿದೆ. 

ಮೆಟ್ರೊ ಪಿಲ್ಲರ್ ಕುಸಿದು ಬಿದ್ದು ತಾಯಿ ಮತ್ತು ಮಗು ಬಲಿ ಪಡೆದುಕೊಂಡಿರುವ ಪ್ರಕರಣದಲ್ಲಿ ನಾಗಾರ್ಜುನ ಕಂಪೆನಿ ಮತ್ತು ಅದರ ನಿರ್ದೇಶಕ ಚೈತನ್ಯ, ಜೂನಿಯರ್ ಇಂಜಿನಿಯರ್ ಪ್ರಭಾಕರ್, ಮೇಲ್ವಿಚಾರಣಾ ಪ್ರಾಜೆಕ್ಟ್ ಮ್ಯಾನೇಜರ್ ಮಥಾಯ್, ಯೋಜನಾ ವ್ಯವಸ್ಥಾಪಕ ವಿಕಾಸ್ ಸಿಂಗ್, ಮೇಲ್ವಿಚಾರಕ ಲಕ್ಷ್ಮೀಪತಿ ಹಾಗೂ ಬಿಎಂಆರ್‌ಸಿಎಲ್ ಉಪ ಮುಖ್ಯ ಇಂಜಿನಿಯರ್ ವೆಂಕಟೇಶ್ ಶೆಟ್ಟಿ, ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್ ಬೆಂಡೆಕರಿ ಮತ್ತು ಜೂನಿಯರ್ ಇಂಜಿನಿಯರ್ ಜಾಫರ್ ಸಾದಿಕ್ ಹೆಸರನ್ನು ಎಫ್‌ಐಆರ್ ನಲ್ಲಿ ದಾಖಲಿಸಿರುವುದನ್ನು ಸ್ಮರಿಸಬಹುದು. 

Similar News