ಬಹುತ್ವವು ಅಪಾಯದಲ್ಲಿದೆ, ಆದರೆ ಭಾರತವು ದ್ವೇಷವನ್ನು ತಿರಸ್ಕರಿಸಲಿದೆ: ಬಹಿರಂಗ ಪತ್ರದಲ್ಲಿ ರಾಹುಲ್ ಗಾಂಧಿ

Update: 2023-01-14 15:40 GMT

ಹೊಸದಿಲ್ಲಿ: ದೇಶದ ವೈವಿಧ್ಯತೆಯನ್ನು ಅದರ ವಿರುದ್ಧವೇ ತಿರುಗಿಸಲು ವಿಭಜಕ ಶಕ್ತಿಗಳು ಪ್ರಯತ್ನಿಸುತ್ತಿದ್ದರೂ ಭಾರತವು ದ್ವೇಷವನ್ನು ತಿರಸ್ಕರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ. ಪಕ್ಷದ ಭಾರತ ಜೋಡೊ ಯಾತ್ರೆಯು ಸಂಪನ್ನಗೊಂಡ ಬಳಿಕ ಈ ಪತ್ರವನ್ನು ದೇಶಾದ್ಯಂತ ವಿತರಿಸಲಾಗುತ್ತದೆ.

ಜ.26ರಿಂದ ಮಾ.26ರವರೆಗೆ ಬ್ಲಾಕ್,ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿ ನಡೆಯಲಿರುವ ಕಾಂಗ್ರೆಸ್ ನ ‘ಹಾಥ್ ಸೆ ಹಾಥ್ ಜೋಡೊ ’ಅಭಿಯಾನದ ಅಂಗವಾಗಿ ಈ ಪತ್ರವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ‘ಚಾರ್ಜ್ ಶೀಟ್’ನೊಂದಿಗೆ ಜನರಿಗೆ  ವಿತರಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2.5 ಲಕ್ಷ ಗ್ರಾಮ ಪಂಚಾಯತ್ ಗಳು , ಆರು ಲ.ಗ್ರಾಮಗಳು ಮತ್ತು ಸುಮಾರು 10 ಲಕ್ಷ ಮತಗಟ್ಟೆಗಳಲ್ಲಿ ಅಭಿಯಾನವು ನಡೆಯಲಿದೆ ಎಂದರು.

ಭಾರತದ ಬಹುತ್ವವು ಅಪಾಯದಲ್ಲಿದೆ ಎಂದು ತನ್ನ ಪತ್ರದಲ್ಲಿ ಬರೆದಿರುವ ರಾಹುಲ್,‘ವಿಭಜಕ ಶಕ್ತಿಗಳು ನಮ್ಮ ವೈವಿಧ್ಯತೆಯನ್ನೇ ನಮ್ಮ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿವೆ. ವಿವಿಧ ಧರ್ಮಗಳು, ಸಮುದಾಯಗಳು ಮತ್ತು ಪ್ರದೇಶಗಳನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಆದರೆ ಈ ಭಾರತ ಜೋಡೊ ಯಾತ್ರೆಯು ಅಂತ್ಯಗೊಂಡ ಬಳಿಕ ಈ ದುಷ್ಟ ಅಜೆಂಡಾ ಅಲ್ಲಿಗೇ ನಿಲ್ಲಲಿದೆ ಮತ್ತು ಅದು ಮುಂದುವರಿಯಲು ಸಾಧ್ಯವಿಲ್ಲ ಎನ್ನುವುದು ನನಗೆ ಮನದಟ್ಟಾಗಿದೆ’ ಎಂದು ಹೇಳಿದ್ದಾರೆ.

ದೇಶದಲ್ಲಿಯ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ರಾಹುಲ್, ‘ದೇಶದ ಪ್ರತಿಯೊಬ್ಬರಿಗೂ ಆರ್ಥಿಕ ಸಮೃದ್ಧಿಯನ್ನು ಸೃಷ್ಟಿಸಲು ನಾನು ದೃಢಸಂಕಲ್ಪವನ್ನು ಮಾಡಿದ್ದೇನೆ. ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ,ನಮ್ಮ ಯುವಜನರಿಗೆ ಉದ್ಯೋಗ,ದೇಶದ ಸಂಪತ್ತಿನ ನ್ಯಾಯಯುತ ಹಂಚಿಕೆ,ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಮತ್ತು ಉದ್ಯಮಿಗಳಿಗೆ ಪೂರಕ ವಾತಾವರಣ,ಅಗ್ಗದ ಡೀಸೆಲ್,ಶಕ್ತಿಶಾಲಿ ರೂಪಾಯಿ ಮತ್ತು 500 ರೂ.ಗೆ ಗ್ಯಾಸ್ ಸಿಲಿಂಡರ್ ಒದಗಿಸುವ ನಿಟ್ಟಿನಲ್ಲಿ ನಾನು ಕಟಿಬದ್ಧನಾಗಿದ್ದೇನೆ ’ಎಂದು ಪತ್ರದಲ್ಲಿ ಬರೆದಿದ್ದಾರೆ.

ಪ್ರಸ್ತುತ ಪಂಜಾಬಿನಲ್ಲಿರುವ ಕಾಂಗ್ರೆಸ್ ನ ಭಾರತ ಜೋಡೊ ಯಾತ್ರೆಯು ಜ.20ರಂದು ತನ್ನ ಅಂತಿಮ ಹಂತವಾದ ಜಮ್ಮು-ಕಾಶ್ಮೀರವನ್ನು ಪ್ರವೇಶಿಸಲಿದೆ.

ಇದನ್ನು ಓದಿ: ದೇಶದಲ್ಲಿ ಅಲ್ಪಸಂಖ್ಯಾತರ ಪಾತ್ರ ಕಡಿಮೆಗೊಳಿಸಲು CAA ಜಾರಿ: ನೊಬೆಲ್‌ ಪುರಸ್ಕೃತ ಅಮರ್ತ್ಯ ಸೇನ್

Similar News