ವಂಚನೆಗೊಳಗಾಗಿ ಮಿಲಿಯನ್‌ಗಟ್ಟಲೆ ಡಾಲರ್ ಕಳೆದುಕೊಂಡ ಉಸೇನ್ ಬೋಲ್ಟ್: ಜಮೈಕಾ ಮೂಲದ ಕಂಪನಿ ವಿರುದ್ಧ ತನಿಖೆ

Update: 2023-01-15 09:19 GMT

ಜಮೈಕಾ: ವಿಶ್ವವಿಖ್ಯಾತ ಅಥ್ಲೀಟ್ ಹಾಗೂ 2016ರ ಒಲಿಪಿಂಕ್ಸ್ ಕ್ರೀಡಾ ಕೂಟದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸಿದ್ದ ಜಮೈಕಾ ದೇಶದ ಉಸೇನ್ ಬೋಲ್ಟ್ ವಂಚಕ ಕಂಪನಿಯೊಂದರ ಜಾಲಕ್ಕೆ ಸಿಲುಕಿ, ಮಿಲಿಯನ್‌ಗಟ್ಟಲೆ ಡಾಲರ್ ಕಳೆದುಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.

ಉಸೇನ್ ಬೋಲ್ಟ್‌ರ ಹೂಡಿಕೆ ವ್ಯವಹಾರಗಳನ್ನು ನಿಭಾಯಿಸುವ ಕಂಪನಿಯೊಂದು ಮಾಜಿ ವೇಗದ ಓಟಗಾರ ಬೋಲ್ಟ್ ವಂಚನೆಗೊಳಗಾಗಿ ಮಿಲಿಯನ್‌ಗಟ್ಟಲೆ ಡಾಲರ್ ನಷ್ಟ ಅನುಭವಿಸಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಗೊಳಿಸಿದ್ದು, ಇದರ ಬೆನ್ನಿಗೇ ಸದರಿ ಕಂಪನಿಯ ಕಾರ್ಯನಿರ್ವಹಣೆ ಪ್ರಶ್ನೆಗೊಳಗಾಗಿದೆ. ಉಸೇನ್ ಅವರ ಹೂಡಿಕೆ ವ್ಯವಹಾರಗಳನ್ನು ಸದರಿ ಆರ್ಥಿಕ ಕಂಪನಿಯು ಕಳೆದ ಒಂದು ದಶಕದಿಂದ ನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಉಸೇನ್ ಬೋಲ್ಟ್‌ರ ವ್ಯವಸ್ಥಾಪಕ ನ್ಯೂಜೆಂಟ್ ವಾಕರ್, ಪ್ರಕರಣದ ಕುರಿತು ದೇಶದ ಆರ್ಥಿಕ ವ್ಯವಹಾರಗಳ ತನಿಖಾ ಸಂಸ್ಥೆಯಾದ ಆರ್ಥಿಕ ತನಿಖಾ ವಿಭಾಗ ತನಿಖೆ ನಡೆಸುತ್ತಿದ್ದು, ಈ ತನಿಖೆಗೆ ಪ್ರಶ್ನೆಗೊಳಗಾಗಿರುವ ಸ್ಟಾಕ್ಸ್ ಆ್ಯಂಡ್ ಸೆಕ್ಯೂರಿಟೀಸ್ ಲಿಮಿಟೆಡ್ ಪೊಲೀಸರೊಂದಿಗೆ ಸಹಕರಿಸುತ್ತಿದೆ ಎಂದು ತಿಳಿಸಿದ್ದಾರೆ.

"ಉಸೇನ್ ಬೋಲ್ಟ್ ಅವರು ಕಳೆದ ಒಂದು ದಶಕದಿಂದ ಈ ಸಂಸ್ಥೆಯೊಂದಿಗೆ ವ್ಯವಹರಿಸುತ್ತಿದ್ದು, ಅವರ ಸಂಪೂರ್ಣ ವ್ಯವಹಾರಗಳನ್ನು ಪುನರ್ ಪರಿಶೀಲನೆಗೊಳಪಡಿಸಲಾಗುವುದು" ಎಂದು ವಾಕರ್ ಹೇಳಿದ್ದಾರೆ.

"ಈ ಪ್ರಕರಣದ ಆಳಕ್ಕಿಳಿಯಲು ಎಲ್ಲ ಬಗೆಯ ಪ್ರಸ್ತುತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿರುವ ವಾಕರ್, ತನಿಖೆಯು ಪ್ರಗತಿಯಲ್ಲಿರುವುದರಿಂದ, ಎಷ್ಟು ಮೊತ್ತವನ್ನು ಕಳೆದುಕೊಳ್ಳಲಾಗಿದೆ ಎಂದು ಬಯಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮುನ್ನ ಬುಧವಾರದಂದು ತಮ್ಮ ಖಾತೆಯಿಂದ ಮಿಲಿಯನ್‌ಗಟ್ಟಲೆ ಹಣ ಕಾಣೆಯಾಗಿರುವುದು ಉಸೇನ್ ಬೋಲ್ಟ್ ಗಮನಕ್ಕೆ ಬಂದಿತ್ತು‌.

ಪ್ರಕರಣದಲ್ಲಿ ಪ್ರಶ್ನೆಗೊಳಗಾಗಿರುವ ಉದ್ಯೋಗಿಯನ್ನು ಕಂಪನಿಯು ಈಗಾಗಲೇ ವಜಾಗೊಳಿಸಿದ್ದು, ಉಸೇನ್ ಬೋಲ್ಟ್ ಒಳಗೊಂಡಂತೆ ತಳಮಟ್ಟದಲ್ಲಿ ವ್ಯಾಪಕ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ವಜಾಗೊಂಡಿರುವ ಉದ್ಯೋಗಿ ಪರ ವಕೀಲರು, ಆಕೆ ಉಸೇನ್ ಬೋಲ್ಟ್‌ರೊಂದಿಗೆ ಕಳೆದ ಎರಡು ವಾರಗಳಿಂದ ಮಾತ್ರ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾಳೆ ಮತ್ತು ಈ ಕುರಿತು ಮಾತುಕತೆ ಮುಂದುವರಿದಿದೆ. ನನ್ನ ಕಕ್ಷಿದಾರರು ಸ್ಟಾಕ್ಸ್ ಆ್ಯಂಡ್ ಸೆಕ್ಯೂರಿಟೀಸ್ ಕಂಪನಿ ಹಾಗೂ ಆ ಕಂಪನಿಯನ್ನು ಪ್ರತಿನಿಧಿಸುವ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

Similar News