ಬಿಜೆಪಿ ಸರಕಾರಗಳು ಮಾಧ್ಯಮಗಳ ಮೇಲೆ ನಿಷೇಧ ಹೇರಿಲ್ಲ: ರಾಜ್ ನಾಥ್ ಸಿಂಗ್

Update: 2023-01-15 17:32 GMT

ಹೊಸದಿಲ್ಲಿ, ಜ. 15: ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸುವವರು, ಬಿಜೆಪಿಯು ಯಾವುದೇ ಮಾಧ್ಯಮ ಸಂಸ್ಥೆಯ ಮೇಲೆ “ಯಾವತ್ತೂ ಯಾವುದೇ ನಿಷೇಧವನ್ನು ಹೇರಿಲ್ಲ ಅಥವಾ ಯಾರದೇ ವಾಕ್ಸ್ವಾತಂತ್ರ್ಯವನ್ನು ಕಡಿತಗೊಳಿಸಿಲ್ಲ’’ ಎನ್ನುವುದನ್ನು ಮರೆತಿದ್ದಾರೆ ಎಂದು ರಕ್ಷಣಾ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ರಾಜ್ ನಾಥ್ ಸಿಂಗ್ ರವಿವಾರ ಹೇಳಿದ್ದಾರೆ.

ಆದರೆ, ಕಾಂಗ್ರೆಸ್ ಸರಕಾರವು ವಾಕ್ ಸ್ವಾತಂತ್ರ್ಯವನ್ನು ದಮನಿಸಲು ಸಂವಿಧಾನಕ್ಕೇ ತಿದ್ದುಪಡಿಯನ್ನು ತಂದಿತ್ತು ಎಂದು 1951ರಲ್ಲಿ ಸಂವಿಧಾನದ 19ನೇ ವಿಧಿಗೆ ತರಲಾಗಿದ್ದ ತಿದ್ದುಪಡಿಯನ್ನು ಉಲ್ಲೇಖಿಸುತ್ತಾ ಅವರು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಮುಖವಾಣಿ ಪತ್ರಿಕೆ ‘ಪಾಂಚಜನ್ಯ’ ಏರ್ಪಡಿಸಿರುವ ಸಮಾರಂಭವೊಂದರಲ್ಲಿ ಮಾತನಾಡಿದ ಸಿಂಗ್, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ದೇಶದಲ್ಲಿ ಹೊಸದಾಗಿ ಚರ್ಚೆಯೊಂದು ಆರಂಭವಾಗಿದೆ ಎಂದು ಹೇಳಿದರು.

“ಆಸಕ್ತಿಯ ವಿಷಯವೆಂದರೆ, ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಇಂದು ಆರೋಪಿಸುವವರು, ಅಟಲ್ ಜೀ (ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ)ಯ ಸರಕಾರವಾಗಲಿ, (ಪ್ರಧಾನಿ) ಮೋದೀಜಿಯ ಸರಕಾರವಾಗಲಿ ಯಾವುದೇ ಮಾಧ್ಯಮ ಸಂಸ್ಥೆಯ ಮೇಲೆ ಯಾವತ್ತೂ ಯಾವುದೇ ನಿಷೇಧ ಹೇರಿಲ್ಲ ಅಥವಾ ಯಾವುದೇ ವ್ಯಕ್ತಿಯ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾವುದೇ ರೀತಿಯಲ್ಲಿ ದಮನಿಸಿಲ್ಲ ಎನ್ನುವುದನ್ನು ಮರೆತಿದ್ದಾರೆ’’ ಎಂದು ಅವರು ಹೇಳಿದರು.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್ ನ ಇಡೀ ಇತಿಹಾಸವು “ಎಲ್ಲಾ ರೀತಿಯ ಸ್ವಾತಂತ್ರ್ಯಗಳ ಉಲ್ಲಂಘನೆಯ ಘಟನೆ’’ಗಳಿಂದಲೇ ತುಂಬಿ ಹೋಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನು ಓದಿ: 2024ರಲ್ಲೂ ಮೋದಿಯೇ ಪ್ರಧಾನಿ ಎಂಬುವುದು ಗುಜರಾತ್ ಚುನಾವಣಾ ಫಲಿತಾಂಶದಿಂದ ಸ್ಪಷ್ಟ: ಅಮಿತ್ ಶಾ

Similar News