ಮೆಲ್ಕಾರ್: ಬಿಜೆಪಿ ಪ್ರಚಾರ ವಾಹನ ಮತ್ತು ಬೈಕ್ ಮಧ್ಯೆ ಅಪಘಾತ: ಬೈಕ್ ಸವಾರ ಮೃತ್ಯು
Update: 2023-01-16 11:21 IST
ಬಂಟ್ವಾಳ, ಜ.16: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ 'ಗ್ರಾಮ ವಿಕಾಸ' ಪಾದಯಾತ್ರೆಯ ಪ್ರಚಾರ ವಾಹನ ಮತ್ತು ಬೈಕ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕನೋರ್ವ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ನರಹರಿ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ವಿಜಿತ್ (35) ಎಂದು ಗುರುತಿಸಲಾಗಿದೆ. ಬಂಟ್ವಾಳದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಶಾಸಕ ರಾಜೇಶ್ ನಾಯ್ಕ್ ಅವರ ಪಾದಯಾತ್ರೆಯ ಪ್ರಚಾರ ಮಾಡುತ್ತಿದ್ದ ತೆಲಂಗಾಣ ರಾಜ್ಯದ ನೋಂದಣಿಯ ಜೀಪ್ ಮತ್ತು ಬೈಕ್ ಮಧ್ಯೆ ನರಹರಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ವಿಜಿತ್ ರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.