ರೋಹಿತ್ ವೇಮುಲ: ಮೇಲ್ಜಾತಿ ರಾಜಕಾರಣಕ್ಕೆ ಬಲಿಯಾದ ದಲಿತ ಅಸ್ಮಿತೆ

Update: 2023-01-17 05:11 GMT

ಏನೂ ತಪ್ಪು ಮಾಡದ, ಆದರೆ ತನ್ನ ಸಮುದಾಯದ ಸ್ವರವನ್ನು ದಾಖಲಿಸಲು ಹಂಬಲಿಸಿದ್ದ, ಅಲ್ಲಿ ಆಗುತ್ತಿದ್ದ ಅನ್ಯಾಯವನ್ನಷ್ಟೇ ವಿರೋಧಿಸಿದ್ದ ವೇಮುಲರ ದನಿಯನ್ನು ಅಡಗಿಸುವುದಕ್ಕೆ ವ್ಯವಸ್ಥೆ ಕ್ರೂರ ರೀತಿಯಲ್ಲಿ ಸೇರಿತ್ತು. ಅವರನ್ನು ಅವರ ಪಾಡಿಗೆ ಹಾಸ್ಟೆಲ್‌ನಲ್ಲಿದ್ದು ಓದಿಕೊಳ್ಳಲು ಬಿಡಬಹುದಿತ್ತು. ಆದರೆ ಅವರ ಸಂಶೋಧನೆಗೆ ಬೆಂಬಲವಾಗಿದ್ದ ಮತ್ತು ಅವರ ಪ್ರತಿಭೆಗೆ ನ್ಯಾಯವಾಗಿ ಸಲ್ಲಬೇಕಿದ್ದ ಸ್ಕಾಲರ್‌ಶಿಪ್‌ನ್ನು ತಡೆಹಿಡಿಯಲಾಯಿತು. ಕಡೆಗೆ ಅವರನ್ನು ಹಾಸ್ಟೆಲ್‌ನಿಂದಲೇ ಹೊರಹಾಕಲಾಯಿತು. ಅವರ ಹಕ್ಕನ್ನು ಹಾಗೆ ಕಸಿದುಕೊಳ್ಳಲಾಯಿತು. ಅವರನ್ನು ಇಲ್ಲವಾಗಿಸಿದ ವ್ಯವಸ್ಥೆ ಒಳಗೊಳಗೇ ಗೆದ್ದೆನೆಂದು ಬೀಗಿತ್ತು.

‘‘ರೋಹಿತ್ ವೇಮುಲ ದಲಿತ ಅಸ್ಮಿತೆಯ ವಿರುದ್ಧದ ತಾರತಮ್ಯ ಮತ್ತು ಅವಮಾನಗಳಿಗೆ ಬಲಿಯಾದರು. ವರ್ಷಗಳು ಕಳೆದರೂ, ಅವರು ಪ್ರತಿರೋಧದ ಸಂಕೇತವಾಗಿ ಮತ್ತು ಭರವಸೆಯ ಸಂಕೇತವಾಗಿ ಉಳಿಯುತ್ತಾರೆ. ಕೊನೆಯವರೆಗೂ ಹೋರಾಡಿದ್ದಕ್ಕೆ ರೋಹಿತ್ ನನ್ನ ಹೀರೋ, ಅನ್ಯಾಯಕ್ಕೊಳಗಾದ ನನ್ನ ಸಹೋದರ.’’

ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತು. ಕಳೆದ ವರ್ಷದ ಜನವರಿ 17ರಂದು ಅವರು ಟ್ವೀಟ್ ಮಾಡಿ ವೇಮುಲರನ್ನು ನೆನೆದರು. ಜನವರಿ 17 ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ ದಿನ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ 26 ವರ್ಷದ ದಲಿತ ವಿದ್ಯಾರ್ಥಿ ವೇಮುಲ, ತಮಗಾದ ಕಿರುಕುಳದಿಂದಾಗಿ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತೀಯತೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು.

ಕಳೆದ ನವೆಂಬರ್ ತಿಂಗಳಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಹೈದರಾಬಾದ್ ಮುಟ್ಟಿದಾಗ ವೇಮುಲ ತಾಯಿ ರಾಧಿಕಾ ವೇಮುಲ ಅವರು ಯಾತ್ರೆಯಲ್ಲಿ ರಾಹುಲ್ ಜೊತೆ ಸ್ವಲ್ಪದೂರ ಹೆಜ್ಜೆ ಹಾಕಿದರು. ಬಿಜೆಪಿ-ಆರೆಸ್ಸೆಸ್ ದಾಳಿಯಿಂದ ಸಂವಿಧಾನವನ್ನು ಉಳಿಸಲು ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಮನವಿ ಮಾಡಿದರು. ರೋಹಿತ್ ವೇಮುಲಗೆ ನ್ಯಾಯ ಸಿಗಲಿ. ರೋಹಿತ್ ಕಾಯ್ದೆಯನ್ನು ಜಾರಿಗೊಳಿಸಿ, ದಲಿತರ ಪ್ರಾತಿನಿಧ್ಯವನ್ನು ಹೆಚ್ಚಿಸಿ, ಉನ್ನತ ನ್ಯಾಯಾಂಗದಲ್ಲಿ ದಲಿತರ ಪ್ರಾತಿನಿಧ್ಯ, ಎಲ್ಲರಿಗೂ ಶಿಕ್ಷಣ ಸಿಗಲಿ ಎಂದು ಬಳಿಕ ರಾಧಿಕಾ ವೇಮುಲ ಟ್ವೀಟ್ ಮಾಡಿದ್ದರು. ಈ ಸಂದರ್ಭದಲ್ಲಿಯೂ ರಾಹುಲ್ ಅವರು ವೇಮುಲರನ್ನು ಸಾಮಾಜಿಕ ತಾರತಮ್ಯ, ಅನ್ಯಾಯದ ವಿರುದ್ಧ ತಾನು ನಡೆಸುತ್ತಿರುವ ಹೋರಾಟದ ಪ್ರತೀಕ ಎಂದು ಹೇಳಿದರು.

ಹೀಗೆ ರಾಹುಲ್ ಪಾಲಿನ ಹೀರೋ ಆಗಿರುವ, ಹೋರಾಟದ ಪ್ರತೀಕವಾಗಿರುವ ರೋಹಿತ್ ವೇಮುಲ ಈ ದೇಶದಲ್ಲಿನ ಮೇಲ್ಜಾತಿಯ ರಾಜಕಾರಣಕ್ಕೆ, ದಲಿತ ವಿರೋಧಿ ರಾಜಕಾರಣಕ್ಕೆ ಬಲಿಯಾದವರು. ಆದರೆ, ವೇಮುಲ ಆತ್ಮಹತ್ಯೆ ವೈಯಕ್ತಿಕ ಕಾರಣದ್ದು ಎಂದು ಷರಾ ಬರೆದು ಮೋದಿ ನೇತೃತ್ವದ ಬಿಜೆಪಿ ಸರಕಾರ ಎಲ್ಲವನ್ನೂ ಮುಗಿಸಿಹಾಕಿತು. ಎಲ್ಲರ ಕಣ್ಣೆದುರೇ, ಎಲ್ಲರಿಗೂ ಗೊತ್ತಿರುವಂತೆಯೇ ಕ್ರೂರ ಸತ್ಯವೊಂದು ಮುಚ್ಚಿಹೋಯಿತು. ಕಡೆಗೆ ವೇಮುಲರ ದಲಿತ ಸಮುದಾಯ ಕೂಡ ಅದನ್ನು ಮರೆತು, ಮೊದಲಿಗಿಂತ ಹೆಚ್ಚು ಬೆಂಬಲದೊಂದಿಗೆ ಬಿಜೆಪಿಯನ್ನು ಗೆಲ್ಲಿಸಿತು ಎಂಬುದು ಈ ದೇಶದಲ್ಲಿನ ರಾಜಕಾರಣದ ವಿಪರ್ಯಾಸ.

2016ರ ಜನವರಿಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮಾನವಸಂಪನ್ಮೂಲ ಸಚಿವಾಲಯ ಜಸ್ಟಿಸ್ ರೂಪಾನ್ವಾಲ್ ಆಯೋಗವನ್ನು ರಚಿಸಿತ್ತು. ವೇಮುಲ ಆತ್ಮಹತ್ಯೆಗೆ ವಿವಿ ಆಡಳಿತ ಮಂಡಳಿಯೇ ಕಾರಣ ಎಂದು ವೇಮುಲ ಕುಟುಂಬದ ಸದಸ್ಯರು, ರಾಜಕೀಯದ ಜತೆ ನಂಟು ಹೊಂದಿರುವ ಗೆಳೆಯರು ಆರೋಪಿಸಿದ್ದನ್ನು ತಳ್ಳಿಹಾಕಿದ ತನಿಖಾ ಆಯೋಗ ತನ್ನ ವರದಿಯಲ್ಲಿ ರೋಹಿತ್ ಆತ್ಮಹತ್ಯೆಗೂ ವಿವಿ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಿಂದ ಹೊರ ಹಾಕಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದುಬಿಟ್ಟಿತು. ಕೇಂದ್ರ ಸಚಿವರುಗಳಾದ ಸ್ಮತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಅವರಿಗೆ ಕ್ಲೀನ್ ಚಿಟ್ ನೀಡಿತು.

ವಿಜ್ಞಾನಿ ಆಗಬೇಕೆಂದು ಕನಸು ಕಾಣುತ್ತಿದ್ದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿನ ದಲಿತ ಸಂಶೋಧಕನೊಬ್ಬನನ್ನು ವ್ಯವಸ್ಥಿತವಾಗಿ ಬಲಿ ಪಡೆದ ಈ ವ್ಯವಸ್ಥೆ ಒಂದಿಡೀ ಸಮುದಾಯದ ಕನಸನ್ನು ದೋಚಿತ್ತು ಮಾತ್ರವಲ್ಲ, ಇವೆಲ್ಲವೂ ಮೇಲ್ಜಾತಿಯ ಬರೀ ಪ್ರತಿಷ್ಠೆಯ ಕಾರಣಕ್ಕೆ ನಡೆಯಿತು ಎಂಬುದೇ ಕರಾಳವಾದುದು. ಯಾರಿಗೂ ಏನೇನೂ ಅನ್ಯಾಯ ಮಾಡದ, ತನ್ನ ಸಮುದಾಯದವರ ವಿಚಾರದಲ್ಲಿ ನ್ಯಾಯ ಕೇಳಿದ್ದ, ತನಗಾದ ಅನ್ಯಾಯವನ್ನು ಪ್ರತಿಭಟಿಸಿದ್ದ ವೇಮುಲರಿಗೆ ಈ ವ್ಯವಸ್ಥೆ ದೇಶದ್ರೋಹಿಯ ಪಟ್ಟವನ್ನೂ ಕಟ್ಟಿ ಬೆನ್ನಟ್ಟಿತು, ಅವರ ಬಲಿಯಾಗುವವರೆಗೂ.

ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದ ವೇಮುಲ, ಜಾತಿದಮನದ ವಿರುದ್ಧ ದನಿಯೆತ್ತಿದ್ದರು. ದಲಿತರ ಆಹಾರವನ್ನು ಕಸಿಯತೊಡಗಿದ್ದ ವ್ಯವಸ್ಥೆಯ ವಿರುದ್ಧ ಮಾತನಾಡಲಾರಂಭಿಸಿದ್ದರು. ದಲಿತ ವಿದ್ಯಾರ್ಥಿಗಳನ್ನು ಅನ್ಯಾಯದ ವಿರುದ್ಧ ಸಂಘಟಿಸುವ ಕೆಲಸದಲ್ಲಿದ್ದರು. ಆದರೆ ಹಿಂದೂರಾಷ್ಟ್ರದ ಮಾತನಾಡುತ್ತಿದ್ದವರ ಕೆಂಗಣ್ಣು ವೇಮುಲ ಮೇಲೆ ಬಿದ್ದಿದ್ದೇ ಆಗ. ವಿಶ್ವವಿದ್ಯಾನಿಲಯದಲ್ಲಿದ್ದ ಎಬಿವಿಪಿ, ಯಾವುದನ್ನು ವೇಮುಲ ವಿರೋಧಿಸುತ್ತಿದ್ದರೋ ಅದನ್ನೇ ಸಾಧಿಸುವ ಹುನ್ನಾರದೊಂದಿಗೆ ಎದುರಾಗಿತ್ತು. ನ್ಯಾಯಕ್ಕಾಗಿ ವೇಮುಲ ಅವರು ಹೋರಾಡುತ್ತಿದ್ದರೆ, ದಮನಿಸಲೆಂದು ಹಠ ತೊಟ್ಟಂತಿದ್ದ ಎಬಿವಿಪಿಯ ಜೊತೆ ಈ ದೇಶದ ರಾಜಕಾರಣವೂ ಸೇರಿಕೊಂಡು, ವಿಶ್ವವಿದ್ಯಾನಿಲಯವನ್ನು ಪೂರ್ತಿಯಾಗಿ ರಾಜಕೀಯದ ಅಂಗಳವಾಗಿಸಿಬಿಟ್ಟಿತ್ತು.

ವಿಶ್ವವಿದ್ಯಾನಿಲಯದೊಳಗಿನ ಎರಡು ಸಂಘಟನೆಗಳ ನಡುವಿನ ತಿಕ್ಕಾಟದಲ್ಲಿ, ನ್ಯಾಯದ ಪರವಾಗಿದ್ದುದರ ಹೋರಾಟವನ್ನು ಟೀಕಿಸುವ ಮತ್ತು ಮಣಿಸುವ ಕೆಲಸದಲ್ಲಿ ಎದುರಾಳಿ ಸಂಘಟನೆ ತೊಡಗಿತ್ತು. ದಲಿತ ಸಮುದಾಯದ ಆತ್ಮವಿಶ್ವಾಸ ಕುಂದಿಸುವ ಅಡ್ಡದಾರಿಗಳು ಅಲ್ಲಿದ್ದವು. ಅದೆಲ್ಲವನ್ನೂ ವೇಮುಲ ಪ್ರತಿಭಟಿಸುತ್ತಲೇ ಬಂದರು. ಅದಕ್ಕಾಗಿ ಅವರು ಆರೋಪಗಳನ್ನು ಎದುರಿಸಬೇಕಾಯಿತು. ಅವರದು ಅವರ ಜೊತೆಯವರದು ಯಾವ ತಪ್ಪುಗಳೂ ಇಲ್ಲ ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತಿದ್ದರೂ, ತನಿಖೆಗಳೂ ಅದನ್ನು ಸ್ಪಷ್ಟವಾಗಿ ಹೇಳುತ್ತಿದ್ದರೂ, ದೇಶದ್ರೋಹಿಗಳನ್ನು ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಿಂದ ಹೊರಹಾಕಲು ಸ್ಮತಿ ಇರಾನಿಯಂಥವರು ಆದೇಶಿಸಿದರು. ನಿಜವಾಗಿಯೂ ಎಲ್ಲಿ ತಪ್ಪುನಡೆಯುತ್ತಿತ್ತೋ ಆ ಸಂಘಟನೆಯಲ್ಲಿದ್ದವರು ಮಾತ್ರ ಈ ಪ್ರಭುತ್ವದ ಪಾಲಿಗೆ ಒಳ್ಳೆಯವರಾಗಿಯೇ ಉಳಿದಿದ್ದರು. ಯಾಕೆಂದರೆ ಅವರು ಪ್ರಭುತ್ವದ ಕಡೆಯವರಾಗಿದ್ದರು. ಕಡೆಗೆ ದೇಶದ್ರೋಹಿಗಳೆಂಬವರೆಗೂ ವೇಮುಲರನ್ನೂ ಅವರ ಜೊತೆಗಿನವರನ್ನೂ ಗುರಿಯಾಗಿಸಲಾಯಿತು. ಹಾಸ್ಟೆಲ್‌ನಿಂದ ಹೊರಹಾಕಲಾಯಿತು. ಅಂದು ಅಂಬೇಡ್ಕರ್‌ರ ಫೋಟೊ ಕೈಯಲ್ಲಿ ಹಿಡಿದುಕೊಂಡು ಹೊರಬಂದ ವೇಮುಲ ನಿರಂತರ ಪ್ರತಿಭಟನೆಯಲ್ಲಿ ತೊಡಗಿದರು. ಸಂಶೋಧಕ ವಿದ್ಯಾರ್ಥಿಯಾಗಿದ್ದ ವೇಮುಲ ದಲಿತ ಅಸ್ಮಿತೆಯ ಉಳಿವಿಗಾಗಿ ಈ ವ್ಯವಸ್ಥೆಯ ವಿರುದ್ಧ ದಡ ಕಾಣಲಾಗದ ಸಮುದ್ರದಲ್ಲಿ ನಿಂತಿದ್ದರು. ಅದೊಂದು ಭ್ರಮನಿರಸನದ ಘಟ್ಟ ಅವರ ಬದುಕು ಅಲ್ಲೇ ಮುಗಿದುಹೋಗುವುದಕ್ಕೂ ಕಾರಣವಾಯಿತು.

ಏನೂ ತಪ್ಪು ಮಾಡದ, ಆದರೆ ತನ್ನ ಸಮುದಾಯದ ಸ್ವರವನ್ನು ದಾಖಲಿಸಲು ಹಂಬಲಿಸಿದ್ದ, ಅಲ್ಲಿ ಆಗುತ್ತಿದ್ದ ಅನ್ಯಾಯವನ್ನಷ್ಟೇ ವಿರೋಧಿಸಿದ್ದ ವೇಮುಲರ ದನಿಯನ್ನು ಅಡಗಿಸುವುದಕ್ಕೆ ವ್ಯವಸ್ಥೆ ಕ್ರೂರ ರೀತಿಯಲ್ಲಿ ಸೇರಿತ್ತು. ಅವರನ್ನು ಅವರ ಪಾಡಿಗೆ ಹಾಸ್ಟೆಲ್‌ನಲ್ಲಿದ್ದು ಓದಿಕೊಳ್ಳಲು ಬಿಡಬಹುದಿತ್ತು. ಆದರೆ ಅವರ ಸಂಶೋಧನೆಗೆ ಬೆಂಬಲವಾಗಿದ್ದ ಮತ್ತು ಅವರ ಪ್ರತಿಭೆಗೆ ನ್ಯಾಯವಾಗಿ ಸಲ್ಲಬೇಕಿದ್ದ ಸ್ಕಾಲರ್‌ಶಿಪ್‌ನ್ನು ತಡೆಹಿಡಿಯಲಾಯಿತು. ಕಡೆಗೆ ಅವರನ್ನು ಹಾಸ್ಟೆಲ್‌ನಿಂದಲೇ ಹೊರಹಾಕಲಾಯಿತು. ಅವರ ಹಕ್ಕನ್ನು ಹಾಗೆ ಕಸಿದುಕೊಳ್ಳಲಾಯಿತು. ಅವರನ್ನು ಇಲ್ಲವಾಗಿಸಿದ ವ್ಯವಸ್ಥೆ ಒಳಗೊಳಗೇ ಗೆದ್ದೆನೆಂದು ಬೀಗಿತ್ತು.

ವೇಮುಲ ಇಲ್ಲವಾದ ಸನ್ನಿವೇಶದಲ್ಲಿ ಎದ್ದ ಪ್ರತಿರೋಧದ ದನಿಯೇ ಅವರ ಶಕ್ತಿ ಎಂಥದ್ದಾಗಿತ್ತೆಂಬುದರ ಸಂಕೇತದಂತೆ ಇತ್ತೆಂಬುದೇನೋ ನಿಜ. ಅವರು ಇಲ್ಲವಾಗಿ ಹೋದ ಜನವರಿ 17, ವರ್ಷವೂ ಅದೆಷ್ಟೋ ಜೀವಗಳಲ್ಲಿ ನೋವನ್ನು, ಹೋರಾಟದ ಕಿಚ್ಚನ್ನು ಎಬ್ಬಿಸುತ್ತದೆ ಎಂಬುದೂ ನಿಜ. ಆದರೆ, ಹೋರಾಟವನ್ನು ದಮನಿಸುವ ನಿರ್ಲಜ್ಜ ನಡೆಗಳು ಮಾತ್ರ ಬಲವಾಗುತ್ತಲೇ ಇವೆ. ಇನ್ನೂ ದುರಂತದ ಸಂಗತಿಯೆಂದರೆ, ವೇಮುಲ ಎಂಬ ದಿಟ್ಟ ಹೋರಾಟಗಾರ ಯಾರಿಗೋಸ್ಕರ ಹೋರಾಡಿದ್ದರೋ ಆ ಸಮುದಾಯದ ಅಮಾಯಕತೆ, ರಾಜಕಾರಣದ ಮರ್ಮವನ್ನು ಗ್ರಹಿಸದ ಅಮಾಯಕತೆ ಕೂಡ ದಮನಿಸುವವರ ಬಲದ ಭಾಗವಾಗುತ್ತಿದೆ. ವೇಮುಲ ಕಟ್ಟಿದ್ದ ಕನಸು ಆ ಅಮಾಯಕತೆಯನ್ನು ಎಚ್ಚರಿಸುವುದಕ್ಕಾಗಿ ಹೋರಾಡಬೇಕಿದೆ ಈಗ.

Similar News