ನಡೆದಾಡುವ ಕ್ಯಾಲೆಂಡರ್ ‘ಮೆಮೊರಿ ಪ್ರಶಾಂತ್’

ಹತ್ತು ಮಿಲಿಯನ್ ವರ್ಷಗಳ ದಿನಾಂಕಗಳು ಕಂಠಪಾಠ !

Update: 2023-01-17 07:23 GMT

ಮಂಗಳೂರು: 25 ವರ್ಷ ವಯಸ್ಸಿನ ಓರ್ವ ಭಿನ್ನ ಸಾಮರ್ಥ್ಯವುಳ್ಳ ವ್ಯಕ್ತಿ ತನ್ನ ಸ್ವಂತ ಸ್ಮರಣೆಯಲ್ಲಿ ಹತ್ತು ಮಿಲಿಯನ್ ವರ್ಷಗಳವರೆಗಿನ ಕ್ಯಾಲೆಂಡರ್ ಅನ್ನು ನೆನಪಿನಲ್ಲಿ ಉಳಿಸಬಲ್ಲ ಎಂದರೆ ನಂಬುವುದು ಸಾಧ್ಯವೇ?. ತಂತ್ರಜ್ಞಾನಗಳನ್ನು ಸೋಲಿಸಬಲ್ಲ ಈ ಯುವಕನ ಹೆಸರು ಪ್ರಶಾಂತ್. ‘ಮೆಮೊರಿ ಪ್ರಶಾಂತ್’ ಎಂದು ಕೇರಳೀ ಯರು ಪ್ರೀತಿಯಿಂದ ಕರೆಯುವ ಈತನ ಇನ್ನಷ್ಟು ಸಾಮರ್ಥ್ಯಗಳ ಬಗ್ಗೆ ತಿಳಿದರೆ ಅಚ್ಚರಿಯ ಮೇಲೆ ಅಚ್ಚರಿ ಎನ್ನಲೇಬೇಕು. ವಿಪರ್ಯಾಸವೆಂದರೆ, ಸಾಮಾನ್ಯ ಮನುಷ್ಯನಿಗೆ ಇರಬೇಕಾಗುವಷ್ಟು ದೈಹಿಕ ಸಾಮರ್ಥ್ಯ ಪ್ರಶಾಂತ್‌ಗೆ ಇಲ್ಲ. ಆದರೆ, ಕ್ರಿ.ಶ. ಒಂದರಿಂದ ಹತ್ತು ಕೋಟಿ ವರ್ಷಗಳವರೆಗಿನ ಕ್ಯಾಲೆಂಡರ್‌ನಿಂದ ಯಾವ ದಿನಾಂಕದ ವಿಶೇಷತೆಗಳೇನು? ಅದು ಯಾವ ದಿನ ಬರುತ್ತದೆ ಎಂಬುದನ್ನು ಪ್ರಶಾಂತ್ ನಿಖರವಾಗಿ ಹೇಳಬಲ್ಲರು. ಹೀಗೆ ಪ್ರಶಾಂತ್ ಮೂವತ್ತಾರು ಸಾವಿರದ ಐನೂರ ಇಪ್ಪತ್ತೈದು ಕೋಟಿ ದಿನಗಳ ಬಗೆಗಿನ ಮಾಹಿತಿಯನ್ನು ಕಂಠಪಾಠ ಮಾಡಿದ್ದಾರೆ.

ಪ್ರಶಾಂತ್‌ಗೆ ಒಂದು ತಿಂಗಳ ಕ್ಯಾಲೆಂಡರ್ ಮಾಡಲು ಒಂದು ನಿಮಿಷ ಸಾಕು. ಅದೇ ರೀತಿ ಒಂದು ವರ್ಷದ ಕ್ಯಾಲೆಂಡರ್ ತಯಾರಿಸಲು ಆತನಿಗೆ ಬೇಕಾಗುವ ಸಮಯ ಕೇವಲ ಹತ್ತು ನಿಮಿಷಗಳು!. ಯಾವುದೇ ವರ್ಷದ ವಿಶೇಷ ದಿನ ಗಳನ್ನು ಸೆಕೆಂಡ್‌ಗಳಲ್ಲಿ ಪ್ರಶಾಂತ್ ನೆನಪಿನಿಂದ ನಕಲು ಮಾಡಬಲ್ಲರು. ಅಷ್ಟೇ ಅಲ್ಲ, ಆ ದಿನಕ್ಕೆ ಈ ದಿನದಿಂದ ಎಷ್ಟು ದಿನ ಬಾಕಿ ಉಳಿದಿದೆ ಎಂಬುದನ್ನೂ ನಿಖರವಾಗಿ ಪ್ರಶಾಂತ್ ಹೇಳಬಲ್ಲರು.

ಕೇರಳದ ತಿರುವನಂತಪುರಂ ಜಿಲ್ಲೆಯ ಕರಮನ ಬಳಿಯ ಡಿ.ಬಿ. ಸ್ಟ್ರೀಟ್ ನಿವಾಸಿಯಾಗಿರುವ ಪ್ರಶಾಂತ್, ಚಂದ್ರನ್ ಮತ್ತು ಸುಹಿತಾ ದಂಪತಿಯ ಪುತ್ರನಾಗಿದ್ದು, ಅವರ ಸಹೋದರಿ ಪ್ರಿಯಾಂಕಾಗೆ ಮದುವೆಯಾಗಿದೆ. ದೃಷ್ಟಿ ಮತ್ತು ಶ್ರವಣ ದೋಷ, ಮಾತಿನ ದುರ್ಬಲತೆ, ಹೃದಯದಲ್ಲಿ ಎರಡು ರಂಧ್ರಗಳು ಮತ್ತು ಹಲವಾರು ನರ ಸಂಬಂಧಿತ ಕಾಯಿಲೆಗಳು ಹುಟ್ಟಿನಿಂದಲೇ ಕಾಡುತ್ತಿರುವ ಇವರು, ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಹೆಚ್ಚು ದಿನ ಬದುಕುವುದು ಸಾಧ್ಯವಿಲ್ಲ ಎಂದುಕೊಂಡಿದ್ದ ಮಗು ಅದ್ಭುತವಾಗಿ ಬೆಳೆದು ನಿಂತಿತು. ಆ ಪಯಣದಲ್ಲಿ ವಿಜ್ಞಾನ ಲೋಕವೂ ಆತನ ಎದುರಲ್ಲಿ ಬೆರಗಾಗಿ ನಿಂತಿತ್ತು. ಬಾಲ್ಯದಲ್ಲಿ ಹೆತ್ತವರು ನೀಡಿದ ಪ್ಲಾಸ್ಟಿಕ್ ಅಕ್ಷರಗಳು ಮತ್ತು ಸಂಖ್ಯೆಗಳ ಆಟಿಕೆಗಳ ಮೂಲಕ ಪ್ರಶಾಂತ್ ಅವರ ವಿಸ್ಮಯ ಜಗತ್ತು ತೆರೆಯಲ್ಪಟ್ಟಿತು.

ಗಣಿತದಲ್ಲಿ ಆಸಕ್ತಿ ಹುಟ್ಟಿ ಕ್ಯಾಲೆಂಡರ್ ಕಂಠಪಾಠ ಮಾಡಲು ಆರಂಭಿಸಿದಾಗ ಅವರ ಜೀವನವೇ ಬದಲಾಯಿತು. ಅದಕ್ಕೆ ಕಾರಣ ಅಕ್ಕ ಪ್ರಿಯಾಂಕಾ ಉಡುಗೊರೆಯಾಗಿ ನೀಡಿದ ಮೊಬೈಲ್ ಫೋನ್. ಪ್ರಥಮವಾಗಿ ಪ್ರಶಾಂತ್ 150 ವರ್ಷಗಳ ಕ್ಯಾಲೆಂಡರ್ ಅನ್ನು ಮಂದ ದೃಷ್ಟಿಯ ಸಹಾಯದಿಂದ ಎರಡು ದಿನಗಳಲ್ಲಿ ಫೋನ್ ಮೂಲಕ ಕಂಠಪಾಠ ಮಾಡಿದರು. ನಂತರದ ಪ್ರತಿ ದಿನ, ಹೊಸ ಜ್ಞಾನವನ್ನು ನೆನಪಿನಲ್ಲಿ ನಕಲು ಮಾಡಲು ಪ್ರಾರಂಭಿಸಿದರು. ಕಣ್ಣಿಗೆ ಹತ್ತಿರವಾಗಿ ಹಿಡಿದಿರುವ ಮೊಬೈಲ್ ಫೋನ್‌ನೊಂದಿಗೆ ಹೆಚ್ಚಿನ ವೇಗದಲ್ಲಿ ಅವರು ಚಲಿಸುತ್ತಾರೆ. ಈ ಮಧ್ಯೆ, ಅವರು 150 ವರ್ಷಗಳ ಯಾವುದೇ ದಿನಾಂಕದ ಬಗ್ಗೆ ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರಗಳನ್ನು ನೀಡಲು ಪ್ರಾರಂಭಿಸಿದರು. ಇದರೊಂದಿಗೆ ಪೋಷಕರು ಹತ್ತು ಸಾವಿರ ವರ್ಷಗಳ ವರೆಗಿನ ಕ್ಯಾಲೆಂಡರ್ ಅನ್ನು ಅಂತರ್‌ಜಾಲದಿಂದ ಡೌನ್‌ಲೋಡ್ ಮಾಡಿ ಕೊಟ್ಟರು. ಸರಿಯಾಗಿ ಒಂದು ವಾರದಲ್ಲಿ ಪ್ರಶಾಂತ್ ಅಷ್ಟೂ ದಿನಾಂಕಗಳನ್ನು ಕಂಠಪಾಠ ಮಾಡಿದರು. ಅವರ ಅಸಾಧಾರಣ ಸ್ಮರಣೆಶಕ್ತಿಯು ಕಾಲಕ್ರಮೇಣ ಹೆಚ್ಚಾಗತೊಡಗಿತು. 2018ರಲ್ಲಿ ಕ್ರಿ.ಶ. ಒಂದರಿಂದ ಹತ್ತು ಮಿಲಿಯನ್ ವರ್ಷಗಳ ವರೆಗಿನ ಕ್ಯಾಲೆಂಡರ್‌ಗಳನ್ನು ಆತ ಮನನ ಮಾಡಿಯೇ ಬಿಟ್ಟರು.

ಜನಿಸುವಾಗಲೇ ಮಾನಸಿಕವಾಗಿಯೂ, ದೈಹಿಕವಾಗಿಯೂ ವಿಕಲತೆ ಹೊಂದಿದ್ದ ಪ್ರಶಾಂತ್, ಮೂರು ತಿಂಗಳು ಮಾತ್ರ ಜೀವಿಸುವುದು ಸಾಧ್ಯ ಎಂದು ವೈದ್ಯರು ಹೇಳಿದ್ದರು. ಆರು ತಿಂಗಳು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ಬಳಿಕ ಮಗುವನ್ನು ನಮಗೆ ಹಸ್ತಾಂತರಿಸಿದ್ದರು. ಆ ಬಳಿಕ ಹಲವಾರು ಸರ್ಜರಿಗಳ ಮೂಲಕ ಮುಖವನ್ನು ಇಂದು ಕಾಣುವ ರೀತಿಗೆ ಬದಲಾಯಿಸಿದ್ದೆವು. ಸೊಂಡಿಲಿನಂತಹ ಮೂಗು, ಪುಟ್ಟ ಕಣ್ಣುಗಳು, ದೊಡ್ಡ ಕಿವಿಗಳನ್ನು ಮಗು ಹೊಂದಿದ್ದವು. ಚಿಕಿತ್ಸೆ ನೀಡಿದ ಡಾಕ್ಟರ್ಗಳು ಮುಂಚಿತವಾಗಿ ತಿಳಿಸಿದಂತೆ, ಅತ್ಯಂತ ಕಾಳಜಿಯಿಂದ ನೋಡಿಕೊಂಡೆವು. ಇದೀಗ ಇಪ್ಪತ್ತೈದರ ಹರೆಯದಲ್ಲಿ ಪ್ರಶಾಂತ್ ಇದ್ದು, ಹಲವಾರು ರೋಗಗಳು ಆತನನ್ನು ಕಾಡುತ್ತಿದ್ದು, ಆ ನೋವು ನಮ್ಮನ್ನೂ ಕಾಡುತ್ತಿದೆ.

  ಚಂದ್ರನ್ ಕೆ. (ಪ್ರಶಾಂತ್ ತಂದೆ)

 ಇಂದು ಪ್ರಶಾಂತ್ ದಾಖಲೆಗಳ ಸರದಾರ. ಏಶ್ಯ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಯುಆರ್‌ಎಫ್ ನ್ಯಾಶನಲ್ ರೆಕಾರ್ಡ್ಸ್, ಯುಆರ್‌ಎಫ್ ಹಾಲ್ ಆಫ್ ಫೇಮ್, ಇನ್‌ಕ್ರಿಡಬಲ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ಡ್ ಕಿಂಗ್ಸ್ ಟಾಪ್ ರೆಕಾರ್ಡ್ಸ್, ಇನ್‌ಕ್ರೆಡಿಬಲ್ ಪೀಪಲ್ ಪ್ರಶಸ್ತಿ ಮತ್ತು ಭಾರತದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅವಾರ್ಡ್ ಗಳು ಮತ್ತು ವಿದೇಶದಲ್ಲಿ ಪ್ರಶಾಂತ್ ಹೆಸರು ದಾಖಲೆ ಪುಸ್ತಕದಲ್ಲಿದೆ. 2018ರಲ್ಲಿ ಪ್ರಶಾಂತ್ ಅವರ ಸಾಧನೆಗಳೆಂದರೆ ವಂಡರ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ವರ್ಲ್ಡ್ಡ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ಹೈ ರೇಂಜ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್ ಮತ್ತು ಗ್ಲೋಬಲ್ ರೆಕಾರ್ಡ್ಸ್. ರಾಷ್ಟ್ರಪತಿಯವರು 2016ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ್ದು, 2017ರಲ್ಲಿ ಯುಕೆ ವಿಶ್ವ ದಾಖಲೆ ವಿಶ್ವವಿದ್ಯಾನಿಲಯದಿಂದ ಪ್ರಶಾಂತ್ ಡಾಕ್ಟರೇಟ್ ಕೂಡ ಪಡೆದುಕೊಂಡರು.

‘ಹಲವು ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳು, ಮೂರು ನ್ಯಾಶನಲ್ ಅವಾರ್ಡ್‌ಗಳಿಗೆ ಭಾಜನರಾದರೂ, ಒಂದೇ ಒಂದು ರಾಜ್ಯ ಪ್ರಶಸ್ತಿ ಲಭಿಸದಿರುವುದು ಪ್ರಶಾಂತ್

ರಲ್ಲಿ ಮಾನಸಿಕ ಮುಜುಗರವನ್ನು ಉಂಟುಮಾಡಿತ್ತು. ಕಳೆದ ಬಾರಿ ಆ ಬಗೆಗಿನ ಫೈಲ್ ಮುಂದುವರಿಸಿದ್ದರೂ, ಅದು ಆಡಳಿತಾತ್ಮಕ ವ್ಯವಸ್ಥೆಯನ್ನು ತಲುಪಿರಲಿಲ್ಲ. ಅದೂ ಅಲ್ಲದೆ, ಆ ಬಗ್ಗೆ ಹಲವಾರು ವಿವಾದಗಳೂ ಹುಟ್ಟಿಕೊಂಡಿದ್ದವು. ಆ ಬಳಿಕ ಕಳೆದ ಡಿಸೆಂಬರ್ 3ಕ್ಕೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದವು’ ಎಂದು ಪ್ರಶಾಂತ್‌ರ ತಾಯಿ ಸುಹಿತಾ ಹೇಳುತ್ತಾರೆ.

ಕುಟುಂಬಸ್ಥರೊಂದಿಗೆ 

ಪ್ರಶಾಂತ್ ಎನ್ನುವ ಹೆಸರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕಾಣಿಸಿಕೊಳ್ಳಬೇಕಾ ಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಇದು ವಿಳಂಬವಾ ಗಿದೆ. ಅಚ್ಚರಿಯ ವಿಷಯವೆಂದರೆ, ಅಷ್ಟು ವರ್ಷಗಳ ನಿಖರತೆಯನ್ನು ಅಳೆಯುವ ಅಧಿಕೃತ ವ್ಯವಸ್ಥೆಗಳಿಲ್ಲದ ಕಾರಣ ಗಿನ್ನ್ನೆಸ್ ಅಧಿಕಾರಿಗಳು ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದಾರೆ ಎನ್ನುವುದು!. ವ್ಯಕ್ತಿಗಳ ಹೆಸರಿನಲ್ಲಿರುವ ಮಾಹಿತಿಗಳು ಗೂಗಲ್‌ನಲ್ಲಿ ಲಭ್ಯವಿವೆ. ಆದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಮತ್ತು ಸ್ಪರ್ಧಿಸಲು ಯಾವುದೇ ಪ್ರತಿಸ್ಪರ್ಧಿ ಇಲ್ಲದಿರುವುದೂ ಒಂದು ಕಾರಣ ಎನ್ನಲಾ ಗಿದೆ. ಪ್ರಶಾಂತ್ ತನ್ನ ಹೆಸರು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಲು ಯಾವುದೇ ಸರಕಾರ ಅಥವಾ ಪ್ರಾಧಿಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಅರ್ಜಿಗಾಗಿ ಕಾಯಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಗಿನ್ನೆಸ್ ದಾಖಲೆಯೂ ಪ್ರಶಾಂತ್ ಮುಂದೆ ತಲೆಬಾಗಿ ಕುಳಿತಿದೆ ಎನ್ನಬೇಕಾಗಿದೆ.

ಜ.30ಕ್ಕೆ ಮತ್ತೆ 17 ಅವಾರ್ಡ್‌ಗಳ ಹಸ್ತಾಂತರ!

 ಪ್ರಶಾಂತ್‌ಗೆ ಬಂಗಾಳ್ ಬುಕ್ ಆಫ್ ರೆಕಾರ್ಡ್, ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್, ಅಸ್ಸಾಂ ಬುಕ್ ಆಫ್ ರೆಕಾರ್ಡ್, ಇಂಡಿಯನ್ಸ್ ವರ್ಲ್ಡ್ ರೆಕಾರ್ಡ್, ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್, ಬೆಸ್ಟ್ ಇಂಡಿಯಾ, ಒಎಂಜಿ ಬುಕ್ ಆಫ್ ರೆಕಾರ್ಡ್, ನ್ಯಾಶನಲ್ ಬುಕ್ ಆಫ್ ರೆಕಾರ್ಡ್, ಫ್ಯೂಚರ್ ಕಲಾಂ ಆಫ್ ಇಂಡಿಯಾ ಬುಕ್ ಆಫ್ ರೆಕಾರ್ಡ್, ಅಮೇಝಿಂಗ್ ಬುಕ್ ಆಫ್ ರೆಕಾರ್ಡ್ ಮತ್ತಿತರ 17 ಅವಾರ್ಡ್‌ಗಳನ್ನು ಹಸ್ತಾಂತ ರಿಸುವ ಕಾರ್ಯಕ್ರಮವನ್ನು ಜ.30ರಂದು ತಿರುವನಂತಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

Similar News