ಏರ್‌ಪೋರ್ಟ್‌ನಲ್ಲಿ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು ನಿಯಮ ಉಲ್ಲಂಘಿಸಿದ್ದ ಸಂಸದ ತೇಜಸ್ವಿ ಸೂರ್ಯ: ವರದಿ

Update: 2023-01-17 11:54 GMT

ಬೆಂಗಳೂರು: ಬೆಂಗಳೂರು ದಕ್ಷಿಣ ಬಿಜೆಪಿ (BJP) ಸಂಸದ ಹಾಗೂ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಅವರು ಡಿಸೆಂಬರ್‌ 10, 2022 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆನ್ನೈ-ತಿರುಚ್ಚಿ ಇಂಡಿಗೋ ವಿಮಾನವೊಂದರ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದರೆಂದು ಆರೋಪಿಸಲಾಗಿದೆ. ಈ ಕುರಿತು ಇಂಡಿಗೋ ಯಾವುದೇ ಹೇಳಿಕೆ ಬಿಡುಗಡೆಗೊಳಿಸಲು ನಿರಾಕರಿಸಿದೆ ಎಂದು thenewsminute.com ವರದಿ ಮಾಡಿದೆ.

ಪ್ರಯಾಣಿಕರೊಬ್ಬರು ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದರೆಂಬ ಅಂಶವನ್ನು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಡಿಜಿಸಿಎ  ಅಧಿಕಾರಿಗಳು ದೃಢೀಕರಿಸಿದ್ದರೂ ಆ ಪ್ರಯಾಣಿಕ ತೇಜಸ್ವಿ ಸೂರ್ಯ ಆವರಾಗಿದ್ದರೇ ಎಂಬುದನ್ನು ದೃಢೀಕರಿಸಲು ನಿರಾಕರಿಸಿದ್ದಾರೆ. ಆದರೆ ಘಟನೆಯ ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬರ ಪ್ರಕಾರ ಆ ಪ್ರಯಾಣಿಕ ತೇಜಸ್ವಿ ಸೂರ್ಯ ಅವರೇ ಆಗಿದ್ದರು ಹಾಗೂ ಅವರ ಕೃತ್ಯಕ್ಕೆ ಕ್ಷಮೆಕೋರುವಂತೆ ಮಾಡಲಾಯಿತು ಎಂದು ಹೇಳಿದ್ದಾರೆಂದು ವರದಿಯಾಗಿದೆ.

"ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸುರಕ್ಷತೆಗೆ ಸಂಬಂಧಿಸಿದ ಶಿಷ್ಟಾಚಾರ ಕುರಿತು ಮಾಹಿತಿ ನೀಡುತ್ತಿರುವಾಗ ಘಟನೆ ಸಂಭವಿಸಿದೆ. ತುರ್ತು ನಿರ್ಗಮನ ದ್ವಾರವೊಂದರ ಸಮೀಪ ಕುಳಿತಿದ್ದ ತೇಜಸ್ವಿ ಸೂರ್ಯ  ಸಿಬ್ಬಂದಿ ಹೇಳುವುದನ್ನು ಗಮನವಿಟ್ಟು ಕೇಳಿ ಕೆಲವೇ ನಿಮಿಷಗಳಲ್ಲಿ ಲಿವರ್‌ ಎಳೆದ ಕಾರಣ ತುರ್ತು ನಿರ್ಗಮನ ದ್ವಾರ ತೆರೆಯಿತು. ತಕ್ಷಣ ನಮ್ಮನ್ನೆಲ್ಲಾ ಕೆಳಗಿಳಿಸಿ ಬಸ್‌ ಒಂದರಲ್ಲಿ ಕೂರಿಸಲಾಯಿತು," ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ನಂತರ ಅಧಿಕಾರಿಗಳು ಹಾಗೂ ಸಿಐಎಸ್‌ಎಫ್‌ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು ಹಾಗೂ ಸುಮಾರು ಎರಡು ಗಂಟೆಗಳ ನಂತರ ವಿಮಾನ ಹಾರಾಟಕ್ಕೆ ಸಿದ್ಧಗೊಂಡಿತ್ತು, ಇದು ಉಲ್ಲಂಘನೆಯಾಗಿದ್ದರಿಂದ ಸಂಸದರಿಗೆ ಕ್ಷಮೆಕೋರಲು ಹೇಳಲಾಯಿತು ಹಾಗೂ ಅವರು ಲಿಖಿತ  ಪತ್ರ ನೀಡಿದರು ಎಂದು ಇಂಡಿಗೋ ಮೂಲಗಳು ತಿಳಿಸಿವೆ.

"ನಂತರ ಸಂಸದ ಅದೇ ವಿಮಾನದಲ್ಲಿ ಪ್ರಯಾಣಿಸಿದರೂ ಅವರ ಸೀಟ್‌ ಬದಲಾಯಿಸಲಾಯಿತು, ಅವರೊಂದಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಇದ್ದರು," ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಇದೇ ವಿಮಾನದಲ್ಲಿ ಡಿಎಂಕೆ ವಕ್ತಾರ ಬಿ ಟಿ ಅರಸಕುಮಾರ್‌ ಇದ್ದರು ಹಾಗೂ ಘಟನೆಯನ್ನು ದೃಢೀಕರಿಸಿದ್ದಾರೆ.

ಇಲ್ಲಿಯ ತನಕ ಈ ಘಟನೆ ಕುರಿತು ತೇಜಸ್ವಿ ಸೂರ್ಯ ಅಥವಾ ಅಣ್ಣಾಮಲೈ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: ಅಬುಧಾಬಿ ದೊರೆ ಕುಟುಂಬದ ಉದ್ಯೋಗಿ ಎಂದು ನಟಿಸಿ ಹೋಟೆಲ್‌ ನಲ್ಲಿ ರೂ. 23 ಲಕ್ಷ ಬಿಲ್ ಬಾಕಿಯುಳಿಸಿ ವ್ಯಕ್ತಿ ಪರಾರಿ

Similar News