ಹೆಚ್ಚು ಮಕ್ಕಳು ಹೊಂದಲು ಸಿಕ್ಕಿಂ ಸರಕಾರದಿಂದ ಹಲವು ಆಫರ್‌ಗಳು !

Update: 2023-01-17 17:51 GMT

ಚಂಡಿಗಢ, ಜ. 17: ಫಲವಂತಿಕೆಯ ಇಳಿಕೆಯ ಸಮಸ್ಯೆ ಎದುರಿಸುತ್ತಿರುವ, ಭಾರತದ ಕನಿಷ್ಠ ಜನಸಂಖ್ಯೆ ಹೊಂದಿರುವ ಸಿಕ್ಕಿಂ(Sikkim) ತನ್ನ ಸ್ಥಳೀಯ ಜನರು ಹೆಚ್ಚು ಮಕ್ಕಳು ಹೆರುವುದಕ್ಕೆ ಉತ್ತೇಜನ ನೀಡಲು ಬಯಸಿದೆ. ಎರಡನೇ ಮಗು ಹೆರುವ ಮಹಿಳಾ ಉದ್ಯೋಗಿಗೆ ವಿಶೇಷ ವೇತನ ಏರಿಕೆ ಹಾಗೂ ಮೂರನೇ ಮಗು ಹೆರುವ ಮಹಿಳಾ ಉದ್ಯೋಗಿಗೆ ಎರಡು ವೇತನ ಏರಿಕೆಯನ್ನು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್(Prem Singh Tamang) ಪ್ರಸ್ತಾವಿಸಿದ್ದಾರೆ.

ಹೆಚ್ಚು ಮಕ್ಕಳನ್ನು ಹೆರಲು ಮಹಿಳೆಯರು ಸೇರಿದಂತೆ ಸ್ಥಳೀಯ ಜನರಿಗೆ ಉತ್ತೇಜಕಗಳನ್ನು ನೀಡುವ ಮೂಲಕ ಇಳಿಕೆಯಾಗುತ್ತಿರುವ ಫಲವಂತಿಕೆಯನ್ನು ತಡೆಯುವ ಅಗತ್ಯತೆ ಇದೆ ಎಂದು ದಕ್ಷಿಣ ಸಿಕ್ಕಿಂನ ಜೊರೆಥಾಂಗ್ ಪಟ್ಟಣದಲ್ಲಿ ಮಾಘ ಸಂಕ್ರಾಂತಿ ಕಾರ್ಯಕ್ರಮದಲ್ಲಿ ತಮಾಂಗ್ ಅವರು ಹೇಳಿದರು.

2021 ನವೆಂಬರ್ನಲ್ಲಿ ಸಿಕ್ಕಿಂ ಸಂಪುಟ ಸರಕಾರಿ ಸೇವೆಯಲ್ಲಿರುವ ಮಹಿಳೆಯರಿಗೆ 365 ಹೆರಿಗೆ ರಜೆ ಹಾಗೂ ಪುರುಷರಿಗೆ 30 ದಿನಗಳ ಪಿತೃತ್ವ ರಜೆ ಘೋಷಿಸಿತ್ತು. ನೈಸರ್ಗಿಕವಾಗಿ ಮಕ್ಕಳನ್ನು ಹೆರಲು ಸಮಸ್ಯೆ ಇರುವ ಮಹಿಳೆಯರು ಕೂಡ ಮಕ್ಕಳು ಹೊಂದುವುದನ್ನು ಉತ್ತೇಜಿಸಲು ಸಿಕ್ಕಿಂನ ಆಸ್ಪತ್ರೆಗಳಲ್ಲಿ ಐವಿಎಫ್ ಸೌಲಭ್ಯವನ್ನು ಸರಕಾರ ಆರಂಭಿಸಿದೆ. ಈ ಪ್ರಕ್ರಿಯೆ ಮೂಲಕ ಮಗು ಪಡೆಯುವ ಎಲ್ಲ ತಾಯಂದಿರಿಗೆ 3 ಲಕ್ಷ ರೂಪಾಯಿ ನೀಡಲಾಗುವುದು ಎಂದು ತಮಾಂಗ್ ಅವರು ತಿಳಿಸಿದ್ದಾರೆ.

ಕುಟುಂಬವೊಂದಕ್ಕೆ ಒಂದು ಮಗು ಎಂದು ಪ್ರಚಾರ ಮಾಡುವ ಮೂಲಕ ಈ ಹಿಂದಿನ ಸರಕಾರ ಪ್ರಮಾದ ಎಸಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಓರ್ವ ಮಹಿಳೆಗೆ ಒಂದೇ ಮಗು ಇರುವುದರಿಂದ ಅತಿ ಕಡಿಮ ಫಲವತ್ತತೆ ದರ ದಾಖಲಾಗಿದೆ ಎಂದು ತಮಾಂಗ್ ತಿಳಿಸಿದ್ದಾರೆ. ತನ್ನ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಸರಕಾರ ಇದಕ್ಕೆ ತದ್ವಿರುದ್ಧವಾದುದನ್ನು ಮಾಡಲು ಬಯಸುತ್ತದೆ. ದೊಡ್ಡ ಕುಟುಂಬಕ್ಕೆ ಪ್ರೋತ್ಸಾಹ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

Similar News