ಬಿಜೆಪಿ ಸರಕಾರ ಭಾರತದಲ್ಲಿ ಆರ್ಥಿಕ ಅಸಮಾನತೆಯನ್ನು ಹೆಚ್ಚಿಸಿದೆ: ಖರ್ಗೆ

Update: 2023-01-17 17:00 GMT

ಹೊಸದಿಲ್ಲಿ, ಜ. 17: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಭಾರತದ ಆರ್ಥಿಕ ಅಸಮಾನತೆಯನ್ನು ಹೆಚ್ಚಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಮಂಗಳವಾರ ಆರೋಪಿಸಿದ್ದಾರೆ. ಈ ಅಸಮಾನತೆಯ ಅಂತರ ಈಗ ಸಾಮಾನ್ಯ ಮನುಷ್ಯ ಮುಳುಗುವ ಪ್ರಪಾತದ ಹಂತಕ್ಕೆ ತಲುಪಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ‌

ಆರ್ಥಿಕ ಅಸಮಾನತೆಯ ಅಂತರವನ್ನು ನಿವಾರಿಸುವ ಚಳವಳಿ ಕಾಂಗ್ರೆಸ್ ನ ಭಾರತ್ ಜೋಡೊ ಯಾತ್ರೆ ಎಂದು ಖರ್ಗೆ ಹೇಳಿದರು. 2021ರಲ್ಲಿ ಭಾರತದ ಜನಸಂಖ್ಯೆಯ ಶೇ. 1 ಅತಿ ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ. 40.5ಕ್ಕಿಂತ ಹೆಚ್ಚು ಹೊಂದಿದ್ದಾರೆ. ತಳಸ್ತರದಲ್ಲಿರುವ ಶೇ. 50ಕ್ಕೂ ಅಧಿಕ ಮಂದಿ ಕೇವಲ ಶೇ. 3 ಸಂಪತ್ತು ಮಾತ್ರ ಹೊಂದಿದ್ದಾರೆ ಎಂಬ ಸರಕಾರೇತರ ಸಂಸ್ಥೆ ಆಕ್ಸ್ಫಾಮ್ ನ ಇತ್ತೀಚೆಗಿನ ವರದಿಯ ಹಿನ್ನೆಲೆಯಲ್ಲಿ ಖರ್ಗೆ ಅವರು ಈ ಹೇಳಿಕೆ ನೀಡಿದ್ದಾರೆ. 

‘‘ಸರ್ವೈವಲ್ ಆಫ್ ದಿ ರಿಚ್ಚೆಸ್ಟ್: ದಿ ಇಂಡಿಯಾ ಸಪ್ಲಿಮೆಂಟ್’’ ಹೆಸರಿನ ತನ್ನ ವರದಿಯಲ್ಲಿ ಆಕ್ಸ್ಫಾಮ್ ಭಾರತದ 100 ಅತಿ ಶ್ರೀಮಂತ ವ್ಯಕ್ತಿಗಳ ಒಟ್ಟು ಸಂಪತ್ತು 2022ರಲ್ಲಿ 54.12 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಎಂದು ಹೇಳಿತ್ತು.

Similar News