ಕಳೆದ ವರ್ಷಕ್ಕಿಂತ 33 ಪಟ್ಟು ಹೆಚ್ಚಿದ ರಶ್ಯನ್ ತೈಲ ಖರೀದಿ

Update: 2023-01-18 05:39 GMT

ಭಾರತ ಕಳೆದ ವರ್ಷಕ್ಕಿಂತ 33 ಪಟ್ಟು ಹೆಚ್ಚು ರಶ್ಯನ್ ತೈಲವನ್ನು ಖರೀದಿಸುತ್ತಿದೆ. ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿ ಭಾರತ ಕಳೆದ ಡಿಸೆಂಬರ್‌ನಲ್ಲಿ ರಶ್ಯದಿಂದ ದಿನಕ್ಕೆ ಸರಾಸರಿ 12 ಲಕ್ಷ ಬ್ಯಾರೆಲ್‌ಗಳನ್ನು ಖರೀದಿಸಿದೆ ಎನ್ನುತ್ತಿವೆ ವರದಿಗಳು. ಇದು ದಾಖಲೆ ಪ್ರಮಾಣದ ತೈಲ ಖರೀದಿಯಾಗಿದೆ. ಹಿಂದಿನ ವರ್ಷಕ್ಕಿಂತ ಭಾರೀ ದೊಡ್ಡ ಮೊತ್ತದ ಆಮದು ಇದಾಗಿದೆ. ಈ ಪ್ರಮಾಣ ನವೆಂಬರ್‌ನಲ್ಲಿ ಖರೀದಿಸಿದ್ದಕ್ಕಿಂತ ಶೇ.29ರಷ್ಟು ಜಾಸ್ತಿ.

ಹಲವು ತಿಂಗಳುಗಳ ಹಿಂದೆ ಇರಾಕ್ ಮತ್ತು ಸೌದಿ ಅರೇಬಿಯವನ್ನು ಹಿಂದಿಕ್ಕಿದ ನಂತರ ರಶ್ಯವು ಈಗ ಸುಲಭವಾಗಿ ಭಾರತದ ಅತಿದೊಡ್ಡ ತೈಲ ಮೂಲವಾಗಿದೆ. ಉಕ್ರೇನ್ ಆಕ್ರಮಣದಿಂದ ಅನೇಕ ಖರೀದಿದಾರರು ರಶ್ಯದಿಂದ ತೈಲ ಖರೀದಿಸುವುದಕ್ಕೆ ಹಿಂದೇಟು ಹಾಕಿರುವ ಹೊತ್ತಲ್ಲಿ ಭಾರತೀಯ ಸಂಸ್ಕರಣಾಗಾರಗಳು ಅಗ್ಗದ ರಶ್ಯದ ಕಚ್ಚಾ ತೈಲವನ್ನು ದೊಡ್ಡ ಮಟ್ಟದಲ್ಲಿ ಆಮದು ಮಾಡಿಕೊಳ್ಳುತ್ತಿವೆ. ರಶ್ಯ ತನ್ನ ಕಚ್ಚಾ ತೈಲವನ್ನು ಭಾರತೀಯ ಸಂಸ್ಕರಣಾಗಾರಗಳಿಗೆ ಆಕರ್ಷಕ ರಿಯಾಯಿತಿಯಲ್ಲಿ ನೀಡಿದೆ. ಇದರ ಪರಿಣಾಮವಾಗಿ ರಶ್ಯದ ಕಚ್ಚಾ ತೈಲದ ಅತಿದೊಡ್ಡ ಆಮದುದಾರ ದೇಶವಾಗಿ ಭಾರತ ಚೀನಾವನ್ನು ಮೀರಿಸಿದೆ.

ಭಾರತವು ತನ್ನ ತೈಲ ಬೇಡಿಕೆಯ ಶೇ. 85ಕ್ಕಿಂತ ಹೆಚ್ಚಿನ ಪ್ರಮಾಣದ ಆಮದು ಮಾಡಿಕೊಳ್ಳುತ್ತಿದೆ. ಮೇ ತಿಂಗಳಿನಿಂದ ಡೀಸೆಲ್ ಮತ್ತು ಗ್ಯಾಸೋಲಿನ್‌ನ ಪಂಪ್ ಬೆಲೆಗಳನ್ನು ಹೆಚ್ಚಿಸದಂತೆ ಸರಕಾರದಿಂದ ತಡೆಯಲ್ಪಟ್ಟ ಸರಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಅಗ್ಗದ ರಶ್ಯದ ಆಮದುಗಳಿಗೆ ಹೆಚ್ಚು ಒಲವು ತೋರಿವೆ.

ಭಾರತಕ್ಕೆ ತೈಲ ಪೂರೈಸುವ ಇತರ ಎರಡು ಪ್ರಮುಖ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಕೂಡ ಕಳೆದ ತಿಂಗಳು ಹೆಚ್ಚಾಗಿದೆ. ಇರಾಕ್‌ನಿಂದ ದಿನಕ್ಕೆ 8,86,000 ಬ್ಯಾರೆಲ್‌ಗಳು ಅಂದರೆ ಶೇ. 7ರಷ್ಟು ಏರಿಕೆಯಾಗಿದ್ದರೆ, ಸೌದಿ ಅರೇಬಿಯದಿಂದ ದಿನಕ್ಕೆ 7,48,000 ಬ್ಯಾರೆಲ್‌ಗಳು ಅಂದರೆ ಶೇ. 12ರಷ್ಟು ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ.

ಉಕ್ರೇನ್ ಮೇಲೆ ರಶ್ಯ ಯುದ್ಧ ಆರಂಭಿಸಿದಾಗಿನಿಂದ ರಶ್ಯ ಮತ್ತು ಭಾರತದ ಮಧ್ಯೆ ತೈಲ ವ್ಯವಹಾರ ಸಾಕಷ್ಟು ಹೆಚ್ಚಿದೆ. ಎಪ್ರಿಲ್ ತಿಂಗಳಿನಿಂದೀಚೆ ರಶ್ಯದಿಂದ ಭಾರತ ಆಮದು ಮಾಡಿಕೊಂಡ ಕಚ್ಚಾ ತೈಲದ ಪ್ರಮಾಣ ಐವತ್ತು ಪಟ್ಟು ಹೆಚ್ಚಾಗಿದೆ. ಉಕ್ರೇನ್ ಯುದ್ಧಕ್ಕೆ ಮುನ್ನ ರಶ್ಯದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣ ಶೇ. 0.2 ಮಾತ್ರ. ಈಗ ವಿದೇಶಗಳಿಂದ ಭಾರತ ಆಮದು ಮಾಡಿಕೊಳ್ಳುವ ತೈಲದಲ್ಲಿ ರಶ್ಯದ ಪಾಲು ಶೇ. 10ಕ್ಕೆ ಹೆಚ್ಚಿದೆ.

ಮೇ ತಿಂಗಳಲ್ಲಿ ಭಾರತೀಯ ಕಂಪೆನಿಗಳು ರಶ್ಯನ್ ತೈಲ ಕಂಪೆನಿಗಳಿಂದ 25 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಖರೀದಿ ಮಾಡಿದ್ದವು. ಇದರೊಂದಿಗೆ ಭಾರತಕ್ಕೆ ತೈಲ ಸರಬರಾಜು ಮಾಡುವ ದೇಶಗಳ ಪೈಕಿ ರಶ್ಯ ಸೌದಿ ಅರೇಬಿಯವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿತ್ತು. ಇರಾಕ್ ಭಾರತಕ್ಕೆ ಈಗಲೂ ಅತಿದೊಡ್ಡ ತೈಲ ಸರಬರಾಜುದಾರ ದೇಶವಾಗಿ ಮುಂದುವರಿದಿದೆ.

ಎಲ್ಲವೂ ಉಕ್ರೇನ್ ಯುದ್ಧದ ಪರಿಣಾಮ. ಉಕ್ರೇನ್ ಯುದ್ಧ ಶುರುವಾದಾಗಿನಿಂದ ರಶ್ಯ ಮೇಲೆ ವಿವಿಧ ರೀತಿಯ ಅಂತರ್‌ರಾಷ್ಟ್ರೀಯ ನಿಷೇಧಗಳನ್ನು ಹೇರಲಾಗಿದೆ. ತತ್ಪರಿಣಾಮವಾಗಿ ರಶ್ಯದಿಂದ ಅತಿ ಕಡಿಮೆ ಬೆಲೆಗೆ ತೈಲ ಬಿಕರಿಯಾಗುತ್ತಿದೆ. ಭಾರತ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳುತ್ತಿದ್ದು, ಭಾರತೀಯ ತೈಲ ಸಂಸ್ಕರಣ ಸಂಸ್ಥೆಗಳು ಕಡಿಮೆ ಬೆಲೆಗೆ ರಶ್ಯ ತೈಲವನ್ನು ಖರೀದಿ ಮಾಡುತ್ತಿವೆ. ಹೀಗಾಗಿಯೇ ಎಪ್ರಿಲ್ ನಂತರದ ಅವಧಿಯಲ್ಲಿ ರಶ್ಯದಿಂದ ಭಾರತ ಆಮದು ಮಾಡಿಕೊಳ್ಳುವ ತೈಲ ಪ್ರಮಾಣ ಹೆಚ್ಚುತ್ತಿರುವುದು.

ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಶ್ಯ ಮೇಲೆ ಅಮೆರಿಕ ಹಾಗೂ ಅನೇಕ ಯುರೋಪಿಯನ್ ದೇಶಗಳು ನಿರ್ಬಂಧಗಳನ್ನು ಹೇರಿವೆ. ರಶ್ಯ ಜೊತೆ ಯಾವುದೇ ವ್ಯವಹಾರ ಮಾಡದಂತೆ ಇತರ ಹಲವು ದೇಶಗಳಿಗೆ ತಾಕೀತು ಮಾಡುತ್ತಿವೆ. ಹೀಗಿದ್ದರೂ ಭಾರತ ರಶ್ಯ ಜೊತೆ ಮಿಲಿಟರಿ ಶಸ್ತ್ರಾಸ್ತ್ರ ಖರೀದಿ ಮುಂದುವರಿಸುತ್ತಿದೆ, ಈಗ ತೈಲ ಖರೀದಿ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ರಶ್ಯದೊಂದಿಗಿನ ತಾನು ಹೊಂದಿರುವ ವ್ಯವಹಾರವನ್ನು ಭಾರತ ಸಮರ್ಥಿಸಿಕೊಳ್ಳುತ್ತಿದೆ. ತನ್ನ ಹಿತಾಸಕ್ತಿಗೆ ತಕ್ಕಂತೆ ನಡೆ ಇಡುವುದಾಗಿ ಭಾರತ ಸ್ಪಷ್ಟಪಡಿಸಿದೆ.

ಈಗ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಮತ್ತು ಬಳಕೆ ಮಾಡುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುವುದು. ಭಾರತದಲ್ಲಿ ಬಳಕೆಯಾಗುವ ತೈಲದಲ್ಲಿ ಶೇ. 85ರಷ್ಟು ಪ್ರಮಾಣವು ಬೇರೆ ದೇಶಗಳಿಂದ ಆಮದಾಗಿರುವಂಥವೇ. ಇರಾಕ್ ಮತ್ತು ಸೌದಿ ಅರೇಬಿಯ ಸಾಂಪ್ರದಾಯಿಕವಾಗಿ ಭಾರತಕ್ಕೆ ಅತಿ ಹೆಚ್ಚು ತೈಲ ಸರಬರಾಜು ಮಾಡುತ್ತಿದ್ದ ದೇಶಗಳು. ಈಗ ರಶ್ಯ ಪ್ರವೇಶವಾಗಿದೆ.

ಉಕ್ರೇನ್ ಮತ್ತು ರಶ್ಯ ಯುದ್ಧದ ಪರಿಣಾಮ ಬೇರೆ ತೈಲ ಮಾರುಕಟ್ಟೆಗಳಲ್ಲಿ ಬೆಲೆ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಅಮೆರಿಕ ಮತ್ತಿತರ ದೇಶಗಳ ಒತ್ತಡದಿಂದಾಗಿ ರಶ್ಯದಿಂದ ತೈಲ ಖರೀದಿಸಲು ಹಲವು ದೇಶಗಳು ಹಿಂದೇಟು ಹಾಕಿವೆ. ಹೀಗಾಗಿ, ರಶ್ಯದ ಉರಲ್‌ನಲ್ಲಿರುವ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿರುವ ದೇಶಗಳು ಕಡಿಮೆಯೇ. ಹೀಗಾಗಿ, ರಶ್ಯದ ತೈಲ ಕಡಿಮೆ ಬೆಲೆಗೆ ಸಿಗುತ್ತಿದೆ. ಭಾರತದ ತೈಲ ಸಂಸ್ಕರಣ ಕಂಪೆನಿಗಳು ರಶ್ಯದಿಂದ ಒಂದು ಬ್ಯಾರಲ್‌ಗೆ 30 ಡಾಲರ್ ರಿಯಾ ಯಿತಿ ದರದಲ್ಲಿ ಕಚ್ಚಾ ತೈಲ ಖರೀದಿ ಮಾಡುತ್ತಿವೆ.

Similar News