ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತೂಗುಸೇತುವೆ ಅವೈಜ್ಞಾನಿಕ: ಜೆ.ಆರ್.ಲೋಬೊ

Update: 2023-01-18 16:30 GMT

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೋಳೂರಿನಲ್ಲಿ ತಣ್ನೀರು ಬಾವಿಗೆ ಹೋಗಲು 35 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣ ಮಾಡಲು ಯೋಚಿಸಿರುವುದು ಅವೈಜ್ಞಾನಿಕ ಎಂದು ಮಂಗಳೂರಿನ ಮಾಜಿ ಶಾಸಕ ಜೆ.ಆರ್. ಲೋಬೊ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೂಗು ಸೇತುವೆ ನಿರ್ಮಾಣದಿಂದ ಯಾರಿಗೂ  ಪ್ರಯೋಜನೆ ಇಲ್ಲ. ಘನ ವಾಹನಗಳ ಸಂಚಾರಕ್ಕೆ ಖಾಯಂ ಸೇತುವೆ ನಿರ್ಮಿಸಲಿ ಎಂದು ಆಗ್ರಹಿಸಿದರು.

ಶಾಸಕನಾಗಿ ಮಂಗಳೂರಿನ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಮಂಜೂರು ಮಾಡಿಸಿದ್ದೆ. ಆ ಪೈಕಿ ಸ್ಮಾರ್ಟ್ ಸಿಟಿ ಯೋಜನೆ ಕೂಡಾ ಒಂದು ಎಂದರು.

ಸ್ಮಾರ್ಟ್ ಸಿಟಿಯ ಯಾವುದೇ ಕಾಮಗಾರಿ ನಗರದ ಒಂದು ದಿನದ ಉಪಯೋಗಕ್ಕೆ ಬರುವಂತದಲ್ಲ. ಮುಂದಿನ 50ರಿಂದ 100 ವರ್ಷಗಳ ತನಕ ಉಪಯೋಗಕ್ಕೆ ಬರುವ ಯೋಜನೆಯಾಗಿದೆ.  

ಸ್ಮಾರ್ಟ್ ಸಿಟಿ ಯೋಜನೆ ಮೀನುಗಾರಿಕೆ ಮತ್ತು ಹಳೆ ಬಂದರು ಇವರೆಡನ್ನು ಮುಂದಿಟ್ಟು ಯೋಜನಾ ವರದಿ ತಯಾರಿಸಿ ಮಂಜೂರಾತಿ ಪಡೆಯಲಾಗಿತ್ತು. ಆದರೆ ಇದೀಗ  ಇವರೆಡನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದರು.

ಸರಕು ಸಾಗಿಸಲು ಹಳೆ ಬಂದರನ್ನು ನವಬಂದರಿಗೆ ಜೋಡಣೆಗೆ  ಖಾಯಂ ಸೇತುವೆ ನಿರ್ಮಾಣ ಮಾಡಿದರೆ ಉತ್ತಮ. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಿಷ್ಪ್ರಯೋಜಕವಾಗಿದೆ ಎಂದರು.

ಹಿಂದೆ ಲಕ್ಷದೀಪಕ್ಕೆ ತಮ್ಮ ನೇತೃತ್ವದಲಿ ಉನ್ನತ ಮಟ್ಟದ  ನಿಯೋಗ ಹೋಗಿ ಅಲ್ಲಿನ ಎಲ್ಲ ವಹಿವಾಟಗಳನ್ನು ಮಂಗಳೂರಿಗೆ ಸ್ಥಳಾಂತರಿಸುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ 400 ಕೋಟಿ ರೂ ಹೂಡಿಕೆಗೆ  ಅಲ್ಲಿನ ಆಳಿತಾಧಿಕಾರಿ ಒಪ್ಪಿದ್ದರು. ಈಗ ಅದು ಮಂಜೂರು ಆಗಿದೆ. ಇನ್ನು ಇದಕ್ಕಾಗಿ ಲಕ್ಷದ್ವೀಪದ  ಜಟ್ಟಿ ನಿರ್ಮಾಣವಾಗಬೇಕಿದೆ. ಹಳೆ ಮತ್ತು ಹೊಸ ಬಂದರಿಗೆ ಸಂಪರ್ಕದ ಖಾಯಂ ವ್ಯವಸ್ಥೆ ಮಾಡಬೇಕಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆ  ತಾನು ಶಾಸಕರಾಗಿದ್ದಾಗ ಮಂಜೂರು ಆಗಿತ್ತು. ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ 4, 750 ಕೋಟಿ ರೂ. ಅನುದಾನ ಮಂಗಳೂರಿಗೆ ತಂದಿರುವುದಾಗಿ  ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದಾರೆ.ಆದರೆ   ಸ್ಮಾರ್ಟ್ ಸಿಟಿ, ಅಮೃತ ಯೋಜನೆ, ಜಲಸಿರಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ತಾನು ಶಾಸಕರಾಗಿರುವಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಆಗಿರುವಂತದ್ದು, ಇದರಲ್ಲಿ ಈಗಿನ ಶಾಸಕರ ಯಾವುದೇ ಪಾತ್ರ ಇಲ್ಲ .ಕೇವಲ ಅವರ ಭಾಗ್ಯ ಶಂಕಸ್ಥಾಪನೆ ಮಾಡಿರುವಂತದ್ದು ಎಂದು ಸ್ಪಷ್ಟಪಡಿಸಿದರು.

ಶಕ್ತಿ ನಗರದ ವಸತಿ ಶಕ್ತಿ ನಗರದ ವಸತಿ ಯೋಜನೆಯ ವೈಫಲ್ಯವನ್ನು ಬಿಡಿಸಿಟ್ಟ ಲೋಬೋ ಅವರು ಹಿಂದೆ ಈ ಯೋಜನೆಗೆ ಶಿಲಾನ್ಯಾಸ ಮಾಡಲಾಗಿತ್ತು. ಆದರೆ  ಈಗಿನ ಶಾಸಕರು ಮುಂದಿನ ಫೆಬ್ರವರಿಯಲ್ಲಿ ಶಿಲಾನ್ಯಾಸ ಮಾಡಲು ಹೊರಟಿರುವುದಾಗಿ ತಿಳಿದು ಬಂದಿದೆ. ಈ ಯೋಜನೆಯ ವೈಫಲ್ಯಕ್ಕೆ  ಬಿಜೆಪಿ ಕಾರಣವಾಗಿದೆ. ಹಿಂದೆ 975  ಮನೆೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೆವು. ಆದರೆ ವಸತಿ ನಿರ್ಮಾಣದ ಜಾಗ ಡೀಮ್ಡ್ ಫಾರೆಸ್ಟ್‌ಗೆ ಸೇರಿರುವಂತದ್ದು ಎಂದು  ಬಿಜೆಪಿ ಗಲಾಟೆ ಮಾಡಿದ್ದರು. ಈಗ ಚುನಾವಣೆ ಬರುವಾಗ ಅವರಿಗೆ ಅದರ  ನೆನಪು ಆಗಿದೆ ಎಂದು ಹೇಳಿದರು.

ಐದು ವರ್ಷಗಳಲ್ಲಿ ಒಂದು ಮನೆಗಳನ್ನು ಕೊಡಲು ಸಾಧ್ಯವಾಗದ ಬಿಜೆಪಿಗೆ ನಾಚಿಕೆಯಾಗಬೇಕು. ನಗರವನ್ನು ಬಿಜೆಪಿ ಕಾಮಗಾರಿ ಹೆಸರಿನಲ್ಲಿ ಹಾಳು ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಧುರೀಣರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಶಾಹುಲ್‌ ಹಮೀದ್, ನವೀನ್ ಡಿ ಸೋಜ, ಶಶಿಧರ ಹೆಗ್ಡೆ, ಚಂದ್ರಕಲಾ, ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.

Similar News