×
Ad

UGC ಕಚೇರಿ ದೆಹಲಿಗೆ ಸ್ಥಳಾಂತರ; ರಾಜ್ಯಕ್ಕೆ ಬಗೆಯುತ್ತಿರುವ ದ್ರೋಹ: ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ

Update: 2023-01-20 13:54 IST

ಬೆಂಗಳೂರು: ಬೆಂಗಳೂರಿನಲ್ಲಿದ್ದ UGC ಕಚೇರಿಯನ್ನು ಸದ್ದಿಲ್ಲದಂತೆ ದೆಹಲಿಗೆ ಸ್ಥಳಾಂತರಿಸಲಾಗಿದೆ. ಇದು ಕೇಂದ್ರದ BJP ಸರ್ಕಾರ ಕರ್ನಾಟಕಕ್ಕೆ ಬಗೆಯುತ್ತಿರುವ ದ್ರೋಹ. UGC ಕಚೇರಿ ಸ್ಥಳಾಂತರವಾದರೂ ಬೊಮ್ಮಾಯಿಯವರಾಗಲಿ, ಉನ್ನತ ಶಿಕ್ಷಣ ಸಚಿವರಾಗಲಿ ಯಾಕೆ ಎಂದು ಕೇಳಿಲ್ಲ. ಕೊನೆಯ ಪಕ್ಷ UGC ಕಚೇರಿ  ಇಲ್ಲೇ ಉಳಿಯುವಂತೆ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  UGC ದೆಹಲಿಗೆ ಸ್ಥಳಾಂತರವಾಗಿರುವುದರಿಂದ ರಾಜ್ಯದ ವಿದ್ಯಾರ್ಥಿಗಳು,ವಿವಿ ಆಡಳಿತ ಮಂಡಳಿಗಳು ತೊಂದರೆಗೆ ಸಿಲುಕಲಿದ್ದಾರೆ‌. ಸಣ್ಣ ಸಮಸ್ಯೆಗಳಿಗೂ ದೆಹಲಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಾಧ್ಯವೇ.? ಕೇಂದ್ರ ಸರ್ಕಾರ ರಾಜ್ಯಕ್ಕೆ ಸಿಕ್ಕಿರುವ ಸವಲತ್ತುಗಳನ್ನೆಲ್ಲಾ ಹಿಂದಕ್ಕೆ ಪಡೆಯುತ್ತಿದೆ. ಕರ್ನಾಟಕ ಕೇಂದ್ರದ ಪಾಲಿಗೆ ಎರಡನೇ ದರ್ಜೆಯ ರಾಜ್ಯವೇ.? ಎಂದು ಪ್ರಶ್ನೆ ಮಾಡಿದ್ದಾರೆ. 

''ಬೊಮ್ಮಾಯಿಯವರು ಬಾಯಿ ಬಿಟ್ಟರೆ 'ಧಮ್-ತಾಕತ್'ನ ಮಾತಾಡುತ್ತಾರೆ. UGC ಬೆಂಗಳೂರಿನಿಂದ ದೆಹಲಿಗೆ ಸ್ಥಳಾಂತರವಾಗುವಾಗ ಬೊಮ್ಮಾಯಿಯವರು ತಮ್ಮ ಧಮ್ ತಾಕತ್ತನ್ನು ಮೂಟೆ ಕಟ್ಟಿ ಇಟ್ಟಿದ್ದರಾ? ಬೊಮ್ಮಾಯಿಯವರಿಗೆ ಮೈಕ್ ಮುಂದೆ ಮಾತ್ರ ಧಮ್-ತಾಕತ್ತಿನ ಪ್ರದರ್ಶನವೇ? ಬೊಮ್ಮಾಯಿಯವರಿಗೆ ನಿಜವಾದ ಧಮ್-ತಾಕತ್ತು ಇದ್ದರೆ UGCಯನ್ನು ಮರಳಿ ಬೆಂಗಳೂರಿಗೆ ತರಲಿ'' ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. 

Similar News