ನೆಲಮಂಗಲ ನಗರಸಭೆ ಅಧ್ಯಕ್ಷೆ ಸಹಿತ 11 ಮಂದಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ

Update: 2023-01-20 12:02 GMT

ಬೆಂಗಳೂರು, ಜ. 20: ನೆಲಮಂಗಲ ನಗರಸಭೆ ಹಾಲಿ ಅಧ್ಯಕ್ಷೆ ಸೇರಿದಂತೆ 11 ಮಂದಿ ನಗರಸಭೆ ಸದಸ್ಯರು ಜೆಡಿಎಸ್ ಪಕ್ಷವನ್ನು ತ್ಯಜಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಇಲ್ಲಿನ ಸದಾಶಿವನಗರದಲ್ಲಿನ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ನೆಲಮಂಗಲ ನಗರಸಭೆಯ ಅಧ್ಯಕ್ಷರು ಹಾಗೂ ಇತರ ಸದಸ್ಯರು ಬೆಮೆಲ್ ಕಾಂತರಾಜು ಬೆಂಬಲಿಗರು ಪಕ್ಷವನ್ನು ಸೇರಿದ್ದಾರೆ. ನೆಲಮಂಗಲದಲ್ಲಿ ಪಕ್ಷದ ದೊಡ್ಡ ಸಭೆ ಇದ್ದು, ಅಲ್ಲಿ ಮತ್ತಷ್ಟು ಜನ ಸೇರ್ಪಡೆ ಆಗಲಿದ್ದಾರೆ. ನನಗೆ ಬೇರೆ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ಪ್ರಮುಖರನ್ನು ಇಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದರು.

ಜೆಡಿಎಸ್‍ನ ಈ ನಾಯಕರು ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರ್ಪಡೆ ಆಗಿದ್ದಾರೆ. ಅಲ್ಲಿನ ಶಾಸಕರು ಸರಕಾರದ ಜತೆ ಸೇರಿಕೊಂಡು ಇವರ ಮುನ್ಸಿಪಲ್ ಸದಸ್ಯತ್ವದ ಅಸ್ತಿತ್ವವನ್ನು ತೆಗೆದುಹಾಕಲು ಪ್ರಯತ್ನ ಮಾಡಿದ್ದರು. ಕಾನೂನು ಪ್ರಕಾರ ಇವರ ಅವಧಿ ಮುಕ್ತಾಯ ಆಗುವವರೆಗೂ ಇವರು ಸೇವೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು ಎಂದು ಅವರು ತಿಳಿಸಿದರು.

ಬದಲಾವಣೆ ಪರ್ವ: ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು, ಅನೇಕರು ಬಿಜೆಪಿ ಹಾಗೂ ಜೆಡಿಎಸ್‍ನಿಂದ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ನಾವು ಅವರಿಗೆ ಶಕ್ತಿ ನೀಡಿ, ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ. ನಮ್ಮಲ್ಲಿ ಹೊಸಬರು, ಹಳಬರು ಎಂಬ ಬೇಧವಿಲ್ಲ. ಇವರಲ್ಲಿ ಬಹುತೇಕರು ನನ್ನ ಜತೆ ಕೆಲಸ ಮಾಡಿದ್ದರು. ಈ ಬಾರಿ ನಾವು ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಇವರು ಕೆಲಸ ಮಾಡಲಿದ್ದಾರೆ ಎಂದು ಅವರು ನುಡಿದರು.

‘ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನಾಯಕರು ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪಕ್ಷ ಸೇರ್ಪಡೆಯಾಗಲು ದಿನಾಂಕ ನಿಗದಿಯಾಗಿದೆ. ಉಳಿದಂತೆ ಯಾರೆಲ್ಲಾ ಬರುತ್ತಾರೆ ಎಂದು ನಾನು ಈಗ ಹೇಳುವುದಿಲ್ಲ ಎಂದ ಅವರು, ಬಿಜೆಪಿ ಹಾಲಿ ಶಾಸಕರು ಬಹಳ ಜನ ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ ಪಕ್ಷದಲ್ಲಿ ಅವರಿಗೆ ಸ್ಥಾನ ನೀಡಬೇಕಾಗುತ್ತದೆ. ಕೆಲವು ಕಡೆ ಅದು ಸಾಧ್ಯ ಆಗುವುದಿಲ್ಲ. ಯಾರೆಲ್ಲಾ ಬರಲಿದ್ದಾರೆಂದು ನಾನು ಇಂದು ಬಹಿರಂಗ ಪಡಿಸುವುದಿಲ್ಲ' ಎಂದು ಶಿವಕುಮಾರ್ ತಿಳಿಸಿದರು.

ಸೇರ್ಪಡೆಯಾದ ಪ್ರಮುಖರು: ನೆಲಮಂಗಲ ನಗರಸಭೆಯಲ್ಲಿ 14 ಮಂದಿ ಜೆಡಿಸ್ ಸದಸ್ಯರಿದ್ದು, ಆ ಪೈಕಿ 11 ಮಂದಿ ಕಾಂಗ್ರೆಸ್‍ಗೆ ಬೆಷರತ್ ಸೇರ್ಪಡೆಯಾಗಿದ್ದಾರೆ. ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‍ಕುಮಾರ್, ಸದಸ್ಯರಾದ ರಾಜಮ್ಮ ಪಿಳ್ಳಪ್ಪ, ಆನಂದ್, ಆಂಜಿನಪ್ಪ, ಅಂಜನಮೂರ್ತಿ(ಪಾಪಣಿ), ದಾಕ್ಷಾಯಿಣಿ ರವಿ ಕುಮಾರ್, ಪ್ರಸಾದ್, ಚೇತನ್, ಪುಷ್ಪಲತಾ ಮಾರೇಗೌಡ ಹಾಗೂ ಭಾರತಿಬಾಯಿ ನಾರಾಯಣ್ ರಾವ್ ಎಂದು ಅವರು ತಿಳಿಸಿದರು..

‘ಬಿಜೆಪಿ ನಾಯಕರು ಯೋಜನೆ ಜಾರಿಗೆ ಹಣ ಎಲ್ಲಿಂದ ತರುತ್ತಾರೆಂದು ಪ್ರಶ್ನೆ ಮಾಡುತ್ತಿದ್ದಾರೆ. ಅದನ್ನು ಹೇಗೆ ತರಬೇಕು ಎಂದು ನಮಗೆ ಗೊತ್ತಿದೆ. ಸಿದ್ದರಾಮಯ್ಯ 13 ಬಜೆಟ್ ಮಂಡನೆ ಮಾಡಿದ್ದಾರೆ. ನಾನು 35-40 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಯೋಜನೆಗಳಿಗೆ ಹೇಗೆ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು ಎಂದು ತಿಳಿದಿದೆ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Similar News