ಆಹಾರದಲ್ಲಿ ಸಿರಿಧಾನ್ಯ ಬಳಸಿ ಆರೋಗ್ಯವಂತರಾಗಿ: ಸಿಎಂ ಬೊಮ್ಮಾಯಿ

ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳಕ್ಕೆ ಚಾಲನೆ

Update: 2023-01-20 12:45 GMT

ಬೆಂಗಳೂರು, ಜ. 20: ಎಲ್ಲರೂ ಸಾವಯವ ಸಿರಿಧಾನ್ಯವನ್ನು ಆಹಾರದಲ್ಲಿ ಬಳಸುವ ಮೂಲಕ ಆರೋಗ್ಯವಂತರಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಮೂವತ್ತು ವರ್ಷದಿಂದ ಸಿರಿಧಾನ್ಯ ಬಳಕೆ ಮಾಡುವ ಮೂಲಕ ಸಿರಿಧಾನ್ಯದ ರಾಯಭಾರಿಯಾಗಿದ್ದೇನೆ. ನಮ್ಮ ಸರಕಾರವೂ ಸಿರಿಧಾನ್ಯ ಕೃಷಿಗೆ ಅಗತ್ಯ ಸಹಕಾರ ನೀಡುತ್ತಿದ್ದು, ಅದು ಹಾಗೆಯೇ ಮುಂದುವರೆಯಲಿದೆ ಎಂದು ಹೇಳಿದರು.

ಮೂರು ವರ್ಷದಿಂದ ಅಕ್ಕಿಯ ಜೊತೆ ರಾಗಿ, ಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳಿಗೆ ಹೆಚ್ಚು ಬೇಡಿಕೆ ಇದ್ದು, ನಮ್ಮಲ್ಲಿ ಅದಕ್ಕೆ ಬೇಕಾದ ಅಗತ್ಯ ಮಾರುಕಟ್ಟೆ, ಪ್ಯಾಕೇಜಿಂಗ್‍ಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಿರಿಧಾನ್ಯ ಬೆಳೆ ವಿಸ್ತರಣೆಗೆ ಕೇಂದ್ರದಿಂದ ಅನುದಾನದ ಜೊತೆಗೆ ಪ್ರೋತ್ಸಾಹವೂ ಸಿಗುತ್ತಿದೆ ಎಂದು ತಿಳಿಸಿದರು. 

ಇತರೆ ದೇಶಗಳಲ್ಲಿ ಹಿಂದಿನ ಹತ್ತುಗಳ ವರ್ಷ ಮಳೆ, ಬೆಳೆಯನ್ನು ಆಧರಿಸಿ ಮುಂದಿನ ವರ್ಷದ ಬೆಳೆಗೆ ದರ ನಿರ್ಧಾರವಾಗುತ್ತದೆ. ಅದೇ ರೀತಿ ನಮ್ಮಲ್ಲೂ ಬೆಳೆಗಳ ಔಟ್‍ಲುಕ್ ರಿಪೋರ್ಟ್ ಅನ್ನು ಕೃಷಿ ಅಧಿಕಾರಿಗಳು ಸಿದ್ಧಪಡಿಸಬೇಕು ಎಂದು ಸೂಚಿಸಿದರು. 

ಮುಂಬರುವ 10 ದಿನಗಳೊಳಗೆ ರೈತ ಶಕ್ತಿ ಯೋಜನೆಯನ್ನು ಆರಂಭಿಸಲಾಗುತ್ತದೆ. ರಾಜ್ಯದಲ್ಲಿ ಹೆಚ್ಚುವರಿ ಇಂಧನವಿದ್ದು, ಸೋಲಾರ್ ಕೃಷಿ ಪಂಪ್‍ಗೆ ಬೆಂಬಲ ನೀಡಿದ್ದೇವೆ. ಹಾಗೂ ರಾಜ್ಯದಲ್ಲಿ 11 ಲಕ್ಷ ರೈತ ಮಕ್ಕಳು ರೈತ ವಿದ್ಯಾನಿಧಿಯ ಲಾಭವನ್ನು ಪಡೆದಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವ ಡಾ. ಅಶ್ವತ್ಥನಾರಾಯಣ್, ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಟಿ.ಎ.ಶರವಣ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Similar News