ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ: ಡಿ.ಕೆ.ಶಿವಕುಮಾರ್ ಭರವಸೆ

Update: 2023-01-20 13:29 GMT

ಬೆಂಗಳೂರು, ಜ.20: ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ನಮ್ಮ ಮುಂದಿಟ್ಟಿದ್ದೀರಾ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರ ಸೇರ್ಪಡೆ ಮಾಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಶುಕ್ರವಾರ ನಗರದ ಟೌನ್‍ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಬೀದಿ ಬದಿ ವ್ಯಾಪಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದಂತೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಜವಾಬ್ದಾರಿ. ಈ ದೇಶಕ್ಕೆ ನೀವೆಲ್ಲರೂ ಆಸ್ತಿ ಎಂದರು.

ಮಾಲ್ ಗಳಲ್ಲಿ, ಎಸಿ ಮಳಿಗೆಗಳಲ್ಲಿ ಖರೀದಿ ಮಾಡುವುದು ಒಂದು ಕಡೆಯಾದರೆ, ಅದೇ ಗುಣಮಟ್ಟದ ಆಹಾರ, ವಸ್ತುಗಳನ್ನು ಅವರಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡು ನೀವು ಬರುತ್ತಿದ್ದೀರಿ. ಕಾಂಗ್ರೆಸ್ ಪಕ್ಷ ಈ ವರ್ಗದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷ ಸದಾ ನೊಂದು ಬೆಂದ ಬಡವರ ಪರವಾದ ಪಕ್ಷ. ನಿಮ್ಮ ಬದುಕನ್ನು ದಿನ ಬಡ್ಡಿ ನಿಯಂತ್ರಣದಿಂದ ತಪ್ಪಿಸಬೇಕು ಎಂದು ಅವರು ಹೇಳಿದರು. 

ಪಾಲಿಕೆ ಹಾಗೂ ಪೊಲೀಸರಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಿಮಗೆ ಪ್ರತ್ಯೇಕ ಮಾರುಕಟ್ಟೆ ಸ್ಥಾಪಿಸಿದರೆ ನೀವು ಅಲ್ಲಿ ಹೋಗಲು ಸಿದ್ಧರಿಲ್ಲ. ಹೀಗಾಗಿ ನಗರದ ಸೌಂದರ್ಯ ಕಾಪಾಡಿ, ನಿಮಗೂ ರಕ್ಷಣೆ ಸಿಗಬೇಕು. ಇದನ್ನು ಯಾವ ರೀತಿ ಮಾಡಬೇಕು ಎಂದು ನಿಮ್ಮ ಜತೆಯೇ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.

ನಿಮ್ಮ ನೆಮ್ಮದಿಯ ಬದುಕಿಗಾಗಿ ನಿಮ್ಮ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣ ಸಿಗಲು ಚುನಾವಣೆ ಪ್ರಣಾಳಿಕೆಯಲ್ಲಿ ಕಾರ್ಯಕ್ರಮ ನೀಡಲಾಗುವುದು. ಕೋವಿಡ್ ಸಂದರ್ಭದಲ್ಲಿ ನಮ್ಮ ನಾಯಕರಾದ ರಾಮಲಿಂಗಾ ರೆಡ್ಡಿ, ಪದ್ಮಾವತಿ, ದೇವರಾಜ್, ಝಮೀರ್, ಕೃಷ್ಣ ಭೈರೆಗೌಡ ಸೇರಿದಂತೆ ಹಲವರು ತಮ್ಮ ಜೇಬಿನ ಹಣದಿಂದ ನಿಮಗೆ ನೆರವು ನೀಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಬಿಜೆಪಿಗೆ ಅಧಿಕಾರ ಇದ್ದಾಗ ಜನರಿಗೆ ಯಾವುದೇ ಸಹಾಯ ಮಾಡಲಿಲ್ಲ. ನಾವು ಅನ್ನಭಾಗ್ಯ, ಶಾಲೆಯಲ್ಲಿ ಬಿಸಿಯೂಟ ಕಾರ್ಯಕ್ರಮ ಹೀಗೆ ಜನಪರ ಕಾರ್ಯಕ್ರಮ ಕೊಟ್ಟಾಗ ಜಾತಿ ನೋಡಿ ಕೊಡಲಿಲ್ಲ. ಹೀಗೆ ಕಾಂಗ್ರೆಸ್ ಪಕ್ಷ ನಿಮ್ಮ ಬದುಕಲ್ಲಿ ಬದಲಾವಣೆ ತರಲು ಬದ್ಧವಾಗಿದೆ. ನೀವು ನಮಗೆ ಶಕ್ತಿ ತುಂಬಬೇಕು ಎಂದು ಅವರು ಕರೆ ನೀಡಿದರು.

Similar News