ರಾಜ್ಯದ 4 ದಿಕ್ಕುಗಳಿಂದ ಬಿಜೆಪಿ ರಥಯಾತ್ರೆಗೆ ತಯಾರಿ: ಸಿಎಂ ಬೊಮ್ಮಾಯಿ

Update: 2023-01-20 14:29 GMT

ಬೆಂಗಳೂರು, ಜ. 20: ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆಯನ್ನು ಫೆಬ್ರವರಿ ಅಂತ್ಯದಲ್ಲಿ ಆರಂಭಿಸಲು ರೂಪರೇಷೆ ಸಿದ್ಧತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಪಕ್ಷದ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳು, ಅಧಿವೇಶನದ ಜೊತೆ ಜೊತೆಗೆ ಪಕ್ಷದ ಸಂಘಟನೆ, ಫೆಬ್ರವರಿ ಅಂತ್ಯದ ವರೆಗೆ ಜನ ಸಂಕಲ್ಪ ಯಾತ್ರೆ ಮುಂದುವರೆಸುವುದು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಣಾಳಿಕೆ ಸಿದ್ದಪಡಿಸುವುದು. ರಾಷ್ಟ್ರೀಯ ನಾಯಕರ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.

ನಾಳೆ (ಜ.21)ಪ್ರಾರಂಭವಾಗುವ ಬೂತ್ ಮಟ್ಟದ ‘ವಿಜಯಸಂಕಲ್ಪ’ ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ  ಭಾಗವಹಿಸಲಿದ್ದು, ವಿಜಯ ಯಾತ್ರೆ ಅರಂಭಿಸುತ್ತಿದ್ದಾರೆ. ನಾನು ತುಮಕೂರಿನಲ್ಲಿ ಯಾತ್ರೆಯನ್ನು ಆರಂಭಿಸುತ್ತಿದ್ದೇನೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಕಾರ್ಯಕ್ರಮಗಳ ಪಟ್ಟಿಯನ್ನು ಮನೆಮನೆಗೆ ತಲುಪಿಸುವುದು, ತಾಲೂಕು ಮಟ್ಟದ ಸಮ್ಮೇಳನಗಳನ್ನು, ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ವರಿಷ್ಠರ ತೀರ್ಮಾನ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರು ನಿರ್ಧಾರ ಮಾಡಲಿದ್ದು, ಚುನಾವಣೆ ತಯಾರಿ, ಪಕ್ಷದ ಸಂಘಟನೆ ಹಾಗೂ ಜನಸಂಪರ್ಕದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ನಾವು ಈಗ ಪ್ರಾಥಮಿಕ ಹಂತದ ಚರ್ಚೆ ಮಾಡಿದ್ದೇವೆ ಎಂದ ಅವರು, ಪಕ್ಷದ ಕಾರ್ಯಕ್ರಮಗಳ ಬಗ್ಗೆ ಅಂತಿಮ ರೂಪುರೇಷೆಗಳ ಬಳಿಕ ದೊಡ್ಡವರ(ಯಡಿಯೂರಪ್ಪ) ಜೊತೆ ಚರ್ಚಿಸುತ್ತೇವೆ ಎಂದು ನುಡಿದರು.

‘ಕಾಂಗ್ರೆಸ್ ಪಕ್ಷದಲ್ಲಿ ಯಾರು ಉಳಿಯಲಿದ್ದಾರೆಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಮನಿಸಲಿ. ಪಕ್ಷ ತೊರೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಹತಾಶೆಯಿಂದ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆಂಬ ಹೇಳಿಕೆ ನೀಡುತ್ತಿದ್ದಾರೆ’

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Similar News