‘ಸಮಯ ಮುಗೀತು, ಜಾಗ ಖಾಲಿ ಮಾಡಿ ಎಂದ ಪೊಲೀಸರು..!’: ಧರಣಿ ನಿರತ ಅಂಗನವಾಡಿ ಕಾರ್ಯಕರ್ತೆಯರು ವಶಕ್ಕೆ

Update: 2023-01-20 14:36 GMT

ಬೆಂಗಳೂರು, ಜ. 20: ‘ನಿಗದಿ ಸಮಯದ ಮುಗೀತು’ ಎಂದು ಮೂರು ದಿನಗಳಿಂದ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ನೂರಾರು ಅಂಗನವಾಡಿ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದರು.

ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾವಣೆಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಪೊಲೀಸರು ಏಕಾಏಕಿ ವಶಕ್ಕೆ ಪಡೆದು, ಹೆಬ್ಬಾಳ ಸಮೀಪದ ಆಟದ ಮೈದಾನ ಸೇರಿದಂತೆ ವಿವಿಧೆಡೆ ಕರೆದೊಯ್ದುರು.

ಈ ಕುರಿತು ಪ್ರತಿಕ್ರಿಯಿಸಿದ ಅಂಗನವಾಡಿ ಕಾರ್ಯಕರ್ತೆ ಪ್ರೇಮಾ, ‘ಅಂಗನವಾಡಿ ಕಾರ್ಯಕರ್ತೆಯರಿಗೂ ಶಿಕ್ಷಕರ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಮೂರು ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ, ಶುಕ್ರವಾರ ಏಕಾಏಕಿ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗ್ಗೆಯಿಂದ ಸಂಜೆಯ ವರೆಗೂ ಹೆಬ್ಬಾಳ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರತಿಭಟನಾಕಾರರನ್ನು ಇರಿಸಿಕೊಂಡಿದ್ದಾರೆ. ಆದರೆ, ನಾವು ಪ್ರತಿಭಟನೆ ಮುಂದುವರೆಸುತ್ತೇವೆ. ಸರಕಾರ ನಮ್ಮ ಜೊತೆಗೆ ನೇರವಾಗಿ ಮಾತುಕತೆ ನಡೆಸಿ, ಬೇಡಿಕೆ ಈಡೇಸುವರೆಗೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಇದನ್ನು ಶಾಲಾ ಹಂತದಲ್ಲೇ ಸ್ಥಗಿತಗೊಳಿಸದೆ ಅಂಗನವಾಡಿ ಹಂತಕ್ಕೂ ವಿಸ್ತರಿಸಬೇಕು. ಅದಾದಲ್ಲಿ ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳು ನಮಗೂ ಸಿಗಲಿದೆ. ನಮ್ಮ ಜೀವನಕ್ಕೆ ಭದ್ರತೆ ಸಿಗಲಿದೆ ಎಂಬುದು ಬೇಡಿಕೆ ಎಂದು ಧರಣಿ ನಿರತ ಚೆನ್ನಪಟ್ಟಣ ಮೂಲದ ಅಂಗನವಾಡಿ ಕಾರ್ಯಕರ್ತೆ ಮೀನಾ ಹೇಳಿದರು.

ಅದೇ ರೀತಿ, ನಿವೃತ್ತಿಯ ಹಂತದಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚುಟಿ ನೀಡಬೇಕೆಂದು ಕಳೆದ ಎಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಸರಕಾರ ಇನ್ನೂ ಜಾರಿ ಮಾಡಿಲ್ಲ. ನಿವೃತ್ತಿ ಸಂದರ್ಭ ನಮಗೆ ಯಾವುದೇ ಸಹಾಯ ಸರಕಾರದಿಂದ ಸಿಗುವುದಿಲ್ಲ ಎಂದು ಅವರು ಹೇಳಿದರು.

ಅದೇ ರೀತಿ, ನೌಕರರ ರಾಜ್ಯ ವಿಮೆ(ಇಎಸ್‍ಐ) ಮೂಲಕ ನಾನಾ ಇಲಾಖೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸಿಗುತ್ತಿದೆ. ಚಿಕಿತ್ಸೆ, ರಜೆ ಸೌಲಭ್ಯವೂ ಸಿಗುತ್ತಿದೆ. ಆದರೆ ಅಂಗನವಾಡಿಗಳಿಗೆ ಇದು ಅನ್ವಯವಾಗುತ್ತಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಇಎಸ್‍ಐ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನೂ ಈಡೇರಿಸಬೇಕುಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಸಂಘದ ಆಶಾ ಒತ್ತಾಯಿಸಿದರು.

ಬೇಡಿಕೆಗಳೇನು?: 

-ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು.

-ರಾಷ್ಟ್ರೀಯ ಶಿಕ್ಷಣ ಯೋಜನೆಗೆ ರಾಜ್ಯದಲ್ಲಿ ಜಾರಿ 

-ಅಂಗನವಾಡಿ ಕಾರ್ಯಕರ್ತೆಯರಿಗೆ 31 ಸಾವಿರ ರೂ.ವೇತನ ನೀಡಿ ಶಾಲಾ ಶಿಕ್ಷಕರ ಸ್ಥಾನಮಾನ ವಿದ್ಯಾರ್ಥಿ ಮಿನಿ ಅಂಗನವಾಡಿ ಕೇಂದ್ರಗಳಿಗೆ ತಕ್ಷಣ ಮೇಲ್ದರ್ಜೆಗೆ ಏರಿಸಬೇಕು 

-ಪತ್ರದ ಆದೇಶದ ಪ್ರಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ನೀಡಿ ಅವರಿಗೆ ಪೆನ್ಷನ್ ಜಾರಿ ಮಾಡಬೇಕು

Similar News