ಸರಕಾರ ಶಿಕ್ಷಣ ವಿರೋಧಿ ನೀತಿಗಳಿಂದ ಪ್ರಹಾರ: ಎಐಡಿಎಸ್‍ಒ

Update: 2023-01-21 16:23 GMT

ಬೆಂಗಳೂರು, ಜ.21: ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಸ್ವಾಯತ್ತತೆ ಹೊಂದಬೇಕೇ ಹೊರತು, ಸರಕಾರದ ಮೇಲೆ ಅವಲಂಬಿತ ಆಗಬಾರದು ಎಂದು ಹೇಳುತ್ತಿರುವ ಸರಕಾರ, ಇಂದು ಶಿಕ್ಷಣದ ಮೇಲೆ ತನ್ನ ಶಿಕ್ಷಣ ವಿರೋಧಿ ನೀತಿಗಳನ್ನು ಜಾರಿ ಮಾಡಿ, ಪ್ರಹಾರ ನಡೆಸುತ್ತಿದೆ ಎಂದು ಎಐಡಿಎಸ್‍ಓನ ಕಾರ್ಯದರ್ಶಿ ಅಜಯ್ ಕಾಮತ್ ಕಿಡಿಕಾರಿದ್ದಾರೆ.  

ಶನಿವಾರ ನಗರದ ಯುವಿಸಿಇ ಅಲುಮ್ನಿ ಅಸೋಸಿಯೇಶನ್ ಸಭಾಂಗಣದಲ್ಲಿ ಎಐಡಿಎಸ್‍ಓ ವತಿಯಿಂದ ಆಯೋಜಿಸಿದ್ದ ‘ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೆ ಜನ್ಮ ವರ್ಷಾಚರಣೆ ಸಮಾರೋಪ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. 

ಶಿಕ್ಷಣವನ್ನು ಮತ್ತಷ್ಟು ಖಾಸಗಿಕರಣಗೊಳಿಸುವ ನಿಟ್ಟಿನಲ್ಲಿ ಎನ್‍ಇಪಿ-2020 ಅನ್ನು ಜಾರಿ ಮಾಡುತ್ತದೆ. ಮಹಾನ್ ವ್ಯಕ್ತಿಗಳ, ಕವಿಗಳ, ಬರಹಗಾರರ ಪಾಠಗಳನ್ನು ತೆಗೆಯಲಾಗುತ್ತಿದೆ. ಹೀಗೆ ವಿದ್ಯಾರ್ಥಿಗಳಲ್ಲಿ ಹೋರಾಡುವ ನೈತಿಕತೆಯನ್ನು ನಾಶ ಮಾಡುತ್ತದೆ. ಇದರೊಂದಿಗೆ, ಕ್ರಮೇಣ ತಾನು ಶಿಕ್ಷಣಕ್ಕೆ ಹಣ ಒದಗಿಸುವ ಮೂಲಭೂತ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಸರಕಾರಿ ಸಂಸ್ಥೆಗಳು ಈಗ ಹಣ ವಸೂಲಿ ಕೇಂದ್ರಗಳಾಗಿವೆ. ನೇತಾಜಿರವರ ವಿಚಾರಗಳನ್ನು ಎತ್ತಿ ಹಿಡಿಯಬೇಕೆಂದರೆ ಅನ್ಯಾಯ, ಅಸತ್ಯದ ವಿರುದ್ಧ ಹೋರಾಡುವುದು. ವಿದ್ಯಾರ್ಥಿಗಳ ಮುಂದಿರುವ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಸೇರಿದಂತೆ ಪ್ರಗತಿಪರರು ಬೀದಿಗಿಳಿದು ಹೋರಾಡಬೇಕು ಎಂದು ಅವರು ಕರೆ ನೀಡಿದರು.  

ಡಾ.ಸುಧಾ ಕಾಮತ್ ಮಾತನಾಡಿ, ನೇತಾಜಿ ಸಮಾಜದಲ್ಲಿ ಧರ್ಮನಿರಪೇಕ್ಷತೆಯನ್ನು ಎತ್ತಿ ಹಿಡಿಯಲು ಐಎನ್‍ಎನಲ್ಲಿ ಸಾಮೂಹಿಕ ಅಡುಗೆ ಮನೆ ಎಂಬ ಆಚರಣೆ ತಂದರು. ಜಾತಿ ಧರ್ಮದ ಆಧಾರದ ಮೇಲಿನ ಬೇಧ ತೊಡೆಯಲು ಹೋರಾಟ ಸಾರಿದರು. ಮಹಿಳೆಯರನ್ನು ಐಎನ್‍ಎ ಸೇರುವಂತೆ ಪ್ರೇರೆಪಿಸಿದರು ಎಂದು ಅವರು ತಿಳಿಸಿದರು.

Similar News