ಮೆಟ್ರೋ ಪಿಲ್ಲರ್ ದುರಂತ ಪ್ರಕರಣ: ಮೆಟ್ರೋ ಎಂಡಿ ವಿಚಾರಣೆಗೆ ಹಾಜರು

Update: 2023-01-21 18:25 GMT

ಬೆಂಗಳೂರು, ಜ.21: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಝುಮ್ ಪರ್ವೇಝ್ ಶನಿವಾರ ಇಲ್ಲಿನ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.

ಪ್ರಕರಣ ಸಂಬಂಧ ಪೊಲೀಸರ ನೋಟಿಸಿಗೆ ಪ್ರತಿಯಾಗಿ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮುಂದೆ ಹಾಜರಾದ ಅವರು ವಿಚಾರಣೆ ಎದುರಿಸಿದರು. ಈ ವೇಳೆ ಅವರ ಹೇಳಿಕೆಗಳನ್ನು ತನಿಖಾಧಿಕಾರಿಗಳು ಲಿಖಿತ ರೂಪದಲ್ಲಿ ದಾಖಲು ಮಾಡಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಅಂಝುಮ್ ಪರ್ವೇಝ್, ನೋಟಿಸ್ ಹಿನ್ನೆಲೆ ಕಾನೂನು ಅನ್ವಯ ವಿಚಾರಣೆಗೆ ಹಾಜರಾಗಿ ತಮ್ಮ ಬಳಿಯ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ಇಂತಹ ಘಟನೆಗಳು ಎಂದೂ ನಡೆಯಬಾರದು. ಈ ಬಗ್ಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಜ.10ರಂದು ಎಚ್‍ಬಿಆರ್ ಲೇಔಟಿನ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ವಿನಿ ಹಾಗೂ ಆಕೆಯ ಮೂರು ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದರು. ಬೈಕಿನಲ್ಲಿದ್ದ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಹಾಗೂ ಮತ್ತೊಂದು ಹೆಣ್ಣು ಮಗು ಗಂಭೀರ ಗಾಯಗಳೊಂದಿಗೆ ಪಾರಾಗಿದ್ದರು.

ಬಳಿಕ ಲೋಹಿತ್ ನೀಡಿದ ದೂರಿನನ್ವಯ ಬಿಎಂಆರ್‍ಸಿಎಲ್ ಹಾಗೂ ಪಿಲ್ಲರ್ ನಿರ್ಮಾಣದ ಹೊಣೆಗಾರಿಕೆ ಹೊತ್ತಿದ್ದ ನಾಗಾರ್ಜುನ ಕನ್‍ಸ್ಟ್ರಕ್ಷನ್ ಕಂಪೆನಿಯ ಎಂಟು ಜನ ಅಧಿಕಾರಿಗಳ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

Similar News