ಐಸಿಸಿ ಏಕದಿನ ಶ್ರೇಯಾಂಕ: ಅಗ್ರಸ್ಥಾನ ಕಳೆದುಕೊಂಡ ನ್ಯೂಝಿಲ್ಯಾಂಡ್, ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟ ಭಾರತ

Update: 2023-01-22 07:49 GMT

ದುಬೈ: ರಾಯ್‌ಪುರದಲ್ಲಿ ಶನಿವಾರದಂದು ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ 2 ನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತಿರುವ ನ್ಯೂಝಿಲ್ಯಾಂಡ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ತನ್ನ  ನಂ. 1 ಸ್ಥಾನವನ್ನು ಕಳೆದುಕೊಂಡಿದೆ. ವಿಶ್ವ ಚಾಂಪಿಯನ್ ಇಂಗ್ಲೆಂಡ್ ನಂ.1 ಸ್ಥಾನಕ್ಕೇರಿದೆ.

ಏತನ್ಮಧ್ಯೆ, ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಗೆದ್ದರೆ ನಂ.1 ಸ್ಥಾನಕ್ಕೇರುವ ಅವಕಾಶವಿದೆ.

ಇಂಗ್ಲೆಂಡ್, ನ್ಯೂಝಿಲ್ಯಾಂಡ್ ಹಾಗೂ ಭಾರತ ತಲಾ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಸಮಬಲದಲ್ಲಿವೆ.

ಈ ಪಂದ್ಯಕ್ಕೂ ಮುನ್ನ ನ್ಯೂಝಿಲ್ಯಾಂಡ್ 115 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಇಂಗ್ಲೆಂಡ್ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 112 ರೇಟಿಂಗ್‌ನೊಂದಿಗೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ ಹಾಗೂ  111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಭಾರತ ನಾಲ್ಕನೇ ಸ್ಥಾನದಲ್ಲಿತ್ತು ಎಂದು ಐಸಿಸಿ ತಿಳಿಸಿದೆ.

ಎಂಟು ವಿಕೆಟ್‌ಗಳಿಂದ ಭಾರತದ ವಿರುದ್ಧ ಸೋತ ನಂತರ ನ್ಯೂಝಿಲ್ಯಾಂಡ್ 113 ರೇಟಿಂಗ್ ಪಾಯಿಂಟ್‌ಗಳು ಹಾಗೂ  ಒಟ್ಟಾರೆ 3166 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 113 ರೇಟಿಂಗ್ ಅಂಕಗಳೊಂದಿಗೆ ಇಂಗ್ಲೆಂಡ್ ಹಾಗೂ  ಭಾರತ ಕ್ರಮವಾಗಿ ಮೊದಲ ಹಾಗೂ  ಮೂರನೇ ಸ್ಥಾನದಲ್ಲಿವೆ

ಟಿ20ಯಲ್ಲಿ ನಂ.1 ಹಾಗೂ  ಟೆಸ್ಟ್‌ನಲ್ಲಿ ನಂ.2 ನೇ ತಂಡವಾಗಿರುವ ಭಾರತಕ್ಕೆ ಏಕದಿನದಲ್ಲೂ ಅಗ್ರ ಸ್ಥಾನ ತಲುಪಿ ಎಲ್ಲಾ ಮೂರು ಸ್ವರೂಪಗಳಲ್ಲಿ ನಂ.1 ಸ್ಥಾನ ಪಡೆಯುವ ಅಪೂರ್ವ ಅವಕಾಶವಿದೆ.

Similar News