ಹಾಕಿ ವಿಶ್ವಕಪ್: ಕಿವೀಸ್ ಕ್ವಾರ್ಟರ್‌ ಫೈನಲ್‌ಗೆ; ಭಾರತ ಹೊರಗೆ

ಪೆನಾಲ್ಟಿ ಶೂಟೌಟ್‌ ನಲ್ಲಿ ನ್ಯೂಝಿಲ್ಯಾಂಡ್ ಗೆ 5-4ರ ಜಯ

Update: 2023-01-22 18:42 GMT

ಭುವನೇಶ್ವರ, ಜ. 22: ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ ಪಂದ್ಯಾವಳಿಯಿಂದ ಭಾರತ ಹೊರಬಿದ್ದಿದೆ. ರವಿವಾರ ಇಲ್ಲಿನ ಕಳಿಂಗ ಸ್ಟೇಡಿಯಮ್‌ನಲ್ಲಿ ನಡೆದ ಕ್ರಾಸೋವರ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಭಾರತವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌ಗೇರಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಅದು ಬೆಲ್ಜಿಯಮ್ ತಂಡವನ್ನು ಎದುರಿಸಲಿದೆ.

ಪೂರ್ಣಾವಧಿಯಲ್ಲಿ ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ಗೋಲುಗಳು 3-3ರಲ್ಲಿ ಸಮಬಲಗೊಂಡಾಗ ವಿಜಯಿಯನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಅನಿವಾರ್ಯವಾಯಿತು.

ಲಲಿತ್ ಉಪಾಧ್ಯಾಯ ಮೊದಲ ಗೋಲನ್ನು ಬಾರಿಸಿ ಭಾರತಕ್ಕೆ ಮುನ್ನಡೆಯೊದಗಿಸಿದರು. ಬಳಿಕ ಸುಖ್‌ಜೀತ್ ಸಿಂಗ್ ಇನ್ನೊಂದು ಗೋಲು ಬಾರಿಸಿದರು. ಇದರೊಂದಿಗೆ ಭಾರತವು ಎರಡನೇ ಕ್ವಾರ್ಟರ್‌ನಲ್ಲಿ ಎರಡು ಗೋಲುಗಳನ್ನು ಬಾರಿಸಿತು.

ಎರಡನೇ ಕ್ವಾರ್ಟರ್‌ನಲ್ಲಿ ನ್ಯೂಝಿಲ್ಯಾಂಡ್ ಕೂಡ ಒಂದು ಗೋಲು ಬಾರಿಸಿತು. ಆ ತಂಡದ ಸ್ಯಾಮ್ ಲೇನ್ ಚೆಂಡನ್ನು ಗೋಲುಪೆಟ್ಟಿಗೆಯ ಒಳಗೆ ತಳ್ಳಿ ಗೋಲುಗಳ ಅಂತರವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾದರು. ಆಗ ಬಲಾಬಲವು 2-1ಕ್ಕೆ ಇಳಿಯಿತು.

ಮೂರನೇ ಕ್ವಾರ್ಟರ್‌ನಲ್ಲಿ ಆತಿಥೇಯ ತಂಡವು ಇನ್ನೊಂದು ಗೋಲು ಬಾರಿಸಿ ತನ್ನ ಮುನ್ನಡೆಯನ್ನು 3-1ಕ್ಕೆ ಹಿಗ್ಗಿಸಿತು. ಆ ಗೋಲನ್ನು ವರುಣ್ ಕುಮಾರ್ ಬಾರಿಸಿದರು. ಈ ಹಂತದಲ್ಲಿ ಭಾರತದ ಗೆಲುವು ‘ಕಟ್ಟಿಟ್ಟ ಬುತ್ತಿ’ ಎಂಬುದಾಗಿ ಭಾರತೀಯರು ಸಂಭ್ರಮಿಸಿದರು.

ಆದರೆ, ಮೂರನೇ ಕ್ವಾರ್ಟರ್‌ನ ಕೊನೆಯ ವೇಳೆಗೆ ನ್ಯೂಝಿಲ್ಯಾಂಡ್ ತನ್ನ 2ನೇ ಗೋಲು ಬಾರಿಸಿತು. ಅಂತಿಮ ಕ್ವಾರ್ಟರ್‌ನಲ್ಲಿ ಮೂರನೇ ಗೋಲು ಬಾರಿಸುವ ಮೂಲಕ ಪಂದ್ಯವನ್ನು 3-3ರಿಂದ ಸಮಬಲಗೊಳಿಸುವಲ್ಲಿ ನ್ಯೂಝಿಲ್ಯಾಂಡ್ ಯಶಸ್ವಿಯಾಯಿತು.

ಅಲ್ಲಿಗೆ ಪಂದ್ಯದ ನಿಗದಿತ ಅವಧಿಯೂ ಮುಕ್ತಾಯಗೊಂಡಿತು. ಬಳಿಕ ಫಲಿತಾಂಶವನ್ನು ನಿರ್ಧರಿಸುವುದಕ್ಕಾಗಿ ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಲಾಯಿತು. ಆದರೆ, ಪೆನಾಲ್ಟಿ ಶೂಟೌಟ್‌ನಲ್ಲಿ ಪಂದ್ಯವನ್ನು ನ್ಯೂಝಿಲ್ಯಾಂಡ್ 5-4 ಅಂತರದಿಂದ ಗೆದ್ದಿತು.

Similar News