ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ರಾಜ್ಯಪಾಲರು

Update: 2023-01-23 04:08 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ದಿಲ್ಲಿ ಮತ್ತು ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಸರಕಾರದ ನಡುವಿನ ತಿಕ್ಕಾಟ ಮುಂದುವರಿದಿದೆ. ''ಎಲ್ಲವನ್ನು ಕೇಂದ್ರ ಸರಕಾರ ನಿರ್ಧರಿಸುವುದಿದ್ದರೆ ದಿಲ್ಲಿಯಲ್ಲಿ ಸರಕಾರ ಇರುವುದು ಯಾಕೆ?'' ಎನ್ನುವ ಪ್ರಶ್ನೆಯನ್ನು ಈಗಾಗಲೇ ಸುಪ್ರೀಂಕೋರ್ಟ್ ಕೇಳಿದೆ. ಇದು ಪರೋಕ್ಷವಾಗಿ ರಾಜ್ಯಪಾಲರ ಹಸ್ತಕ್ಷೇಪಕ್ಕೆ ಪ್ರತಿಕ್ರಿಯೆಯಾಗಿದೆ. ಇದೇ ಸಂದರ್ಭದಲ್ಲಿ ತಮಿಳುನಾಡು ಸರಕಾರ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು ಕೊಂಡೊಯ್ದಿದ್ದಾರೆ. ದಿಲ್ಲಿಯಲ್ಲಿ ಸ್ಥಳೀಯ ಸರಕಾರಕ್ಕೆ ಕೆಲವು ಮಿತಿಗಳಿರುವುದರಿಂದ, ಕೇಂದ್ರ ಸರಕಾರ ಅದನ್ನು ರಾಜ್ಯಪಾಲರ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ತಮಿಳು ನಾಡಿನ ಪರಿಸ್ಥಿತಿ ತೀರಾ ಭಿನ್ನವಾದುದು. ಇಲ್ಲಿ ಪೂರ್ಣ ಪ್ರಮಾಣದ ಸರಕಾರವೊಂದು ಅಸ್ತಿತ್ವದಲ್ಲಿದೆ. ರಾಜ್ಯಪಾಲರು ಕೇಂದ್ರ ಮತ್ತು ರಾಜ್ಯವನ್ನು ಬೆಸೆಯುವ ಕೊಂಡಿಯಾಗಿ ನೇಮಕವಾಗಿದ್ದಾರೆಯೇ ಹೊರತು, ಜನರಿಂದ ಆಯ್ಕೆಯಾಗಿರುವ ಸರಕಾರದೊಳಗೆ ಮೂಗು ತೂರಿಸುವ ಯಾವುದೇ ಅಧಿಕಾರ ಅವರಿಗಿಲ್ಲ. ತಮಿಳುನಾಡಿನಲ್ಲಿ ರಾಜ್ಯಪಾಲರು ಬೆಂಕಿಯ ಜೊತೆಗೆ ಸರಸವಾಡುತ್ತಿದ್ದಾರೆ. ಅವರು ತಮಿಳುನಾಡಿನ ಜನರ ಭಾವನೆಗಳನ್ನು ಕೆರಳಿಸುವಂತಹ ಕೃತ್ಯ ನಡೆಸುತ್ತಿದ್ದಾರೆ. ಅಲ್ಲಿನ ಸಾಂಸ್ಕೃತಿಕ ಅಸ್ಮಿತೆಗಳನ್ನು ಪ್ರಶ್ನಿಸುತ್ತಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ಇದು ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಯಾವುದೇ ಅರಿವಿದ್ದಂತಿಲ್ಲ. ಅವರಿಂದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಕಂದಕ ಹೆಚ್ಚಾಗುತ್ತಿದೆ. ಇದು ತಮಿಳುನಾಡಿಗಷ್ಟೇ ಸೀಮಿತವಾಗಿದ್ದಿದ್ದರೆ, ರಾಜ್ಯಪಾಲರ ಅಪ್ರಬುದ್ಧತೆ ಎಂದು ಟೀಕಿಸಿ ಸುಮ್ಮನಿರಬಹುದಿತ್ತು. ಆದರೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಇಂತಹದೇ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ. ಆದುದರಿಂದ ಈ ಅತಿರೇಕಗಳಿಗೆ ಅನಿವಾರ್ಯವಾಗಿ ಕೇಂದ್ರ ಸರಕಾರವನ್ನು ಹೊಣೆ ಮಾಡಬೇಕಾಗುತ್ತದೆ. ಇವರ ವರ್ತನೆಯ ಹಿಂದೆ ಕೇಂದ್ರದ ಕುಮ್ಮಕ್ಕಿದೆ ಎಂದು ದಕ್ಷಿಣ ಭಾರತದ ರಾಜ್ಯಗಳು ಅನುಮಾನ, ಆತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹೆಸರಿಗೆ ಮಾತ್ರ ರಾಜ್ಯದ ಮುಖ್ಯಸ್ಥರಾಗಿರುವ ರಾಜ್ಯಪಾಲರು ರಾಜಕೀಯೇತರ ವ್ಯಕ್ತಿಯಾಗಿರಬೇಕು. ಅವರಿಗೆ ಯಾವುದೇ ಕಾರ್ಯಾಂಗ ಅಧಿಕಾರವಿಲ್ಲ. ರಾಜ್ಯಪಾಲರು ರಾಜ್ಯ ಸರಕಾರಗಳ ಸಲಹೆಯಂತೆ ಕೆಲಸ ನಿರ್ವಹಿಸಬೇಕು. ಕಾರ್ಯಾಂಗ ಅಧಿಕಾರ ಇರುವುದು ರಾಜ್ಯ ಸರಕಾರಗಳಿಗೆ ಮಾತ್ರ. ಸರಕಾರ ದಾರಿ ತಪ್ಪಿದಾಗ ಮಾರ್ಗದರ್ಶನ ಮಾಡಬೇಕು. ಮಿತಿ ಮೀರಿದಾಗ ಆ ಬಗ್ಗೆ ರಾಷ್ಟ್ರಪತಿಗೆ ವರದಿ ನೀಡಬೇಕು. ಹೀಗೆ, ಕೆಲಸಗಳ ಸ್ಪಷ್ಟ ವಿಂಗಡಣೆಯಿದ್ದರೂ, ಹಲವು ಬಿಜೆಪಿಯೇತರ ರಾಜ್ಯಗಳ ರಾಜ್ಯಪಾಲರು ರಾಜ್ಯ ಸರಕಾರಗಳೊಂದಿಗೆ ಸಂಘರ್ಷಗಳಲ್ಲಿ ತೊಡಗಿದ್ದಾರೆ. ತಮಿಳುನಾಡಿನ ರಾಜ್ಯಪಾಲರನ್ನೇ ತೆಗೆದುಕೊಳ್ಳೋಣ. ರಾಜ್ಯ ಸರಕಾರವೊಂದರ ಜೊತೆಗೆ ರವಿ ಘರ್ಷಣೆಗೆ ಇಳಿದಿರುವುದು ಇದು ಮೊದಲ ಬಾರಿಯೇನಲ್ಲ. ಅವರು 2019 ಮತ್ತು 2021ರ ನಡುವಿನ ಅವಧಿಯಲ್ಲಿ ನಾಗಾಲ್ಯಾಂಡ್ ರಾಜ್ಯಪಾಲರಾಗಿದ್ದಾಗ ಅಲ್ಲಿನ ರಾಜ್ಯ ಸರಕಾರದ ಜೊತೆಗೂ ಘರ್ಷಣೆಗೆ ಇಳಿದಿದ್ದರು. 2020ರ ಆಗಸ್ಟ್‌ನಲ್ಲಿ, ಭಾಷಣವೊಂದರಲ್ಲಿ ರಾಜ್ಯದ ಬಗ್ಗೆ 'ನಕಾರಾತ್ಮಕ' ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದಕ್ಕಾಗಿ ಅವರನ್ನು ಟೀಕಿಸುವ ನಿರ್ಣಯವೊಂದನ್ನು ಆಡಳಿತಾರೂಢ ಮಿತ್ರಕೂಟವು ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಭಾರತದೊಂದಿಗೆ ಹತ್ತುಹಲವು ಭಿನ್ನಮತಗಳನ್ನು ಹೊಂದಿರುವ ಈಶಾನ್ಯ ರಾಜ್ಯಗಳಲ್ಲಿ ರಾಜ್ಯಪಾಲರ ಇಂತಹ ನಡೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಸಣ್ಣ ಎಚ್ಚರಿಕೆಯೂ ಅವರಿಗಿರಿದ್ದಿರಲಿಲ್ಲ.

ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ಇತರ ರಾಜ್ಯಪಾಲರುಗಳೂ ಆಯಾಯ ರಾಜ್ಯ ಸರಕಾರಗಳೊಂದಿಗೆ ಇಂಥದೇ ಘರ್ಷಣೆಗಳನ್ನು ನಡೆಸಿದ್ದಾರೆ. ತೆಲಂಗಾಣದಲ್ಲಿ, ತನ್ನ ಸಾಂಪ್ರದಾಯಿಕ ಭಾಷಣವಿಲ್ಲದೆ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಆರಂಭಿಸಿದ ಅಲ್ಲಿನ ರಾಜ್ಯಪಾಲರಾದ ತಮಿಳ್ ಸೈ ಸೌಂದರರಾಜನ್ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ರ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರು ಮಸೂದೆಗಳಿಗೆ ಸಹಿ ಹಾಕುವಲ್ಲಿಯೂ ವಿಳಂಬ ನೀತಿ ಅನುಸರಿಸುತ್ತಿದ್ದರು. ಅದೂ ಅಲ್ಲದೆ, ರಾಜ್ಯ ಸರಕಾರದ ಪಾರಮ್ಯವನ್ನು ಕಡೆಗಣಿಸುವ ರೀತಿಯಲ್ಲಿ, ಜನರ ದುಮ್ಮಾನಗಳನ್ನು ಆಲಿಸುವುದಕ್ಕಾಗಿ ''ಪ್ರಜಾ ದರ್ಬಾರ್'' (ನಾಗರಿಕರ ನ್ಯಾಯಾಲಯ) ನಡೆಸಿದರು.
2021 ಡಿಸೆಂಬರ್‌ನಲ್ಲಿ, ವಿಧಾನ ಪರಿಷತ್‌ಗೆ ಮಾಡಿರುವ 12 ನಾಮನಿರ್ದೇಶನಗಳನ್ನು ರಾಜ್ಯಪಾಲ ಬಿ.ಎಸ್. ಕೋಶ್ಯಾರಿ ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ತಡೆಹಿಡಿದಿದ್ದಾರೆ ಎಂದು ಮಹಾರಾಷ್ಟ್ರದಲ್ಲಿ ಆಗ ಸರಕಾರ ನಡೆಸುತ್ತಿದ್ದ ಮಹಾ ವಿಕಾಸ ಅಘಾಡಿ ಸಮ್ಮಿಶ್ರ ಸರಕಾರವು ಆರೋಪಿಸಿತ್ತು. ಅದೂ ಅಲ್ಲದೆ, ಮಹತ್ವದ ವಿಧಾನಸಭೆಯ ಸ್ಪೀಕರ್ ಚುನಾವಣೆಗೆ ರಾಜ್ಯಪಾಲರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿತ್ತು.ಕೋಶ್ಯಾರಿಯ ಕಾರ್ಯವೈಖರಿಯನ್ನು ಆಕ್ಷೇಪಿಸಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಮಿತ್ರಕೂಟದ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಿದ್ದರು.

ಕೇರಳದಲ್ಲೂ, ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಡೆಮಾಕ್ರಟಿಕ್ ಫ್ರಂಟ್ ಸರಕಾರದೊಂದಿಗೆ ಹಲವು ವಿಷಯಗಳಲ್ಲಿ ಸಂಘರ್ಷ ನಡೆಸಿದ್ದಾರೆ. ಈ ರಾಜಕೀಯ ಸಂಘರ್ಷವು ನವೆಂಬರ್‌ನಲ್ಲಿ ಉತ್ತುಂಗವನ್ನು ತಲುಪಿತು. ವಿಧಾನಸಭೆ ಅಂಗೀಕರಿಸಿರುವ ಮಸೂದೆಗಳನ್ನು ತಡೆಹಿಡಿಯುವ ಮೂಲಕ ಹಾಗೂ ಹಣಕಾಸು ಸಚಿವರನ್ನು ವಜಾಗೊಳಿಸಬೇಕೆಂದು ಸೂಚಿಸುವ ಮೂಲಕ ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದರು. ಕೇರಳ ವಿಶ್ವವಿದ್ಯಾನಿಲಯದ 15 ಸೆನೆಟ್ ಸದಸ್ಯರನ್ನು ಉಚ್ಚಾಟಿಸುವ ಮತ್ತು ರಾಜ್ಯದ ಒಂಭತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ತಕ್ಷಣ ರಾಜೀನಾಮೆಗಳನ್ನು ಸಲ್ಲಿಸಬೇಕೆಂದು ಸೂಚಿಸುವ ರಾಜ್ಯಪಾಲರ ಕ್ರಮಗಳು ಏಕಪಕ್ಷೀಯವಾಗಿವೆ ಎಂಬುದಾಗಿಯೂ ವಿಜಯನ್ ದೂರಿದ್ದಾರೆ.

ರಾಜ್ಯಪಾಲರೊಬ್ಬರು ರಾಜ್ಯ ಸರಕಾರವೊಂದರೊಂದಿಗೆ ನಿರಂತರವಾಗಿ ತೀವ್ರ ಸಂಘರ್ಷದಲ್ಲಿ ತೊಡಗಿದ ಪ್ರಕರಣ ನಡೆದದ್ದು ಪಶ್ಚಿಮಬಂಗಾಳದಲ್ಲಿ. 2019 ಮತ್ತು 2022ರ ನಡುವಿನ ಅವಧಿಯಲ್ಲಿ, ಪಶ್ಚಿಮಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೊಂದಿಗೆ ನಿರಂತರ ಸಂಘರ್ಷ ನಡೆಸಿದರು. ಕೋವಿಡ್-19 ಸಾಂಕ್ರಾಮಿಕವನ್ನು ರಾಜ್ಯ ಸರಕಾರ ನಿಭಾಯಿಸಿದ ರೀತಿ, ರಾಜಕೀಯ ಹಿಂಸಾಚಾರ ಮತ್ತು ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಯಂಥ ವಿಷಯಗಳಲ್ಲಿ ಧನ್ಕರ್ ರಾಜ್ಯ ಸರಕಾರವನ್ನು ತೀವ್ರವಾಗಿ ಕಾಡಿದರು. 2020ರಲ್ಲಿ ಅವರು ಸರ್ವಪಕ್ಷ ಸಭೆಯೊಂದನ್ನು ಕರೆದರು ಹಾಗೂ ರಾಜ್ಯದ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ಹಲವು ಬಾರಿ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಹಿರಿಯ ನಾಗರಿಕ ಅಧಿಕಾರಿಗಳನ್ನು ಕರೆಸಿದ್ದರು. ರಾಜ್ಯಗಳ ರಾಜ್ಯಪಾಲರುಗಳಿಗೆ ಹೋಲಿಸಿದರೆ, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಹೆಚ್ಚಿನ ಕಾರ್ಯಾಂಗ ಅಧಿಕಾರಗಳನ್ನು ಹೊಂದಿದ್ದಾರೆ. ಆದರೂ, ಅವರು ಸರಕಾರದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಹಾಗೂ ಅತ್ಯಂತ ವಿಶೇಷ ಸಂದರ್ಭಗಳಲ್ಲಿ ಮಾತ್ರ ತಮ್ಮ ವಿಶೇಷ ಅಧಿಕಾರಗಳನ್ನು ಚಲಾಯಿಸಬೇಕು ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ಆದರೆ, ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, 2016 ಮತ್ತು 2021ರ ನಡುವಿನ ಅವಧಿಯಲ್ಲಿ ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್ ಸರಕಾರದೊಂದಿಗೆ ನಿರಂತರವಾಗಿ ಸಂಘರ್ಷ ನಡೆಸಿದ್ದರು. ಪುದುಚೇರಿಯಲ್ಲಿ ಈಗ ಬಿಜೆಪಿಯನ್ನು ಒಳಗೊಂಡ ಮೈತ್ರಿ ಸರಕಾರವಿದೆ. ಅಲ್ಲಿನ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಕೂಡ ಲೆಫ್ಟಿನೆಂಟ್ ಗವರ್ನರ್ ಸೌಂದರರಾಜನ್‌ರಿಂದ ಪದೇ ಪದೇ ಹಸ್ತಕ್ಷೇಪವನ್ನು ಎದುರಿಸುತ್ತಿದ್ದಾರೆ. ಸೌಂದರರಾಜನ್ ತೆಲಂಗಾಣದ ರಾಜ್ಯಪಾಲರಾಗಿರುವ ಜೊತೆಗೆ, ಪುದುಚೇರಿ ಲೆಫ್ಟಿನೆಂಟ್ ಗವರ್ನರ್‌ರ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದಾರೆ. ತಮಿಳುನಾಡಿನಲ್ಲಿನ ಸಂಘರ್ಷದ ಬಗ್ಗೆ ನವೆಂಬರ್‌ನಲ್ಲಿ ಪ್ರೊಫೆಸರ್ ರಾಮು ಮಣಿವಣ್ಣನ್ ಮತ್ತು ನ್ಯಾಯಮೂರ್ತಿ (ನಿವೃತ್ತ) ಕೆ. ಚಂದ್ರು ಮುಂತಾದ ರಾಜಕೀಯ ವೀಕ್ಷಕರು ತಮ್ಮ ಆತಂಕ ವ್ಯಕ್ತಪಡಿಸಿದ್ದರು. ರಾಜ್ಯ ಸರಕಾರಗಳನ್ನು ಪ್ರಚೋದಿಸುವುದಕ್ಕಾಗಿ ರಾಜ್ಯಪಾಲರುಗಳು ಪ್ರತಿಪಕ್ಷ ನಾಯಕರಂತೆ ವರ್ತಿಸುವುದು, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ರಾಜಭವನಗಳನ್ನು ಬಿಜೆಪಿ ಕಚೇರಿಗಳ ಉಪಕಚೇರಿಗಳನ್ನಾಗಿಸಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯಪಾಲರ ನಡವಳಿಕೆ ವೈಯಕ್ತಿಕವಲ್ಲ. ರಾಜ್ಯಪಾಲರ ಮೂಲಕ ರಾಜ್ಯಗಳನ್ನು ನಿಯಂತ್ರಿಸುವ, ಅಲ್ಲಿ ನ ಸರಕಾರಗಳ ಕೈಗಳನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ನಿಜಕ್ಕೂ ಇದು, ಬೆಂಕಿಯ ಜೊತೆಗಿನ ಸರಸವಾಗಿದೆ. ರಾಜ್ಯಪಾಲರ ಈ ನಡವಳಿಕೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಬಿರುಕನ್ನು ಹೆಚ್ಚಿಸಬಹುದು. ಈಗಾಗಲೇ ಕೇಂದ್ರದ ಹತ್ತು ಹಲವು ನೀತಿಗಳಿಂದಾಗಿ ರಾಜ್ಯಗಳು ಅತೃಪ್ತಿಯಲ್ಲಿವೆ. ಒಕ್ಕೂಟ ವ್ಯವಸ್ಥೆ ದುರ್ಬಲಗೊಂಡಿದೆ ಎನ್ನುವ ಅಸಮಾಧಾನ ಕೇಳಿ ಬರುತ್ತಿವೆ. ಇವೆಲ್ಲದರ ನಡುವೆ ಉತ್ತರ ಭಾರತ-ದಕ್ಷಿಣ ಭಾರತದ ನಡುವಿನ ಅಂತರವೂ ಹೆಚ್ಚುತ್ತಿದೆ. ಉತ್ತರ ಭಾರತದ ಹೇರಿಕೆಯ ವಿರುದ್ಧ ದಕ್ಷಿಣ ಭಾರತೀಯರು ದೊಡ್ಡ ಧ್ವನಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಇದೀಗ ರಾಜ್ಯಪಾಲರು ದಕ್ಷಿಣ ಭಾರತೀಯರ ಸಾಂಸ್ಕೃತಿಕ ಅಸ್ಮಿತೆಯ ಜೊತೆಗೆ ಚೆಲ್ಲಾಟ ನಡೆಸುತ್ತಿರುವುದು ಇನ್ನಷ್ಟು ಅನಾಹುತಗಳನ್ನು ಸೃಷ್ಟಿಸಬಹುದು. ಕನಿಷ್ಠ ರಾಷ್ಟ್ರಪತಿಯವರು ತಾನು ಕೇಂದ್ರದ ಸೂತ್ರದ ಗೊಂಬೆಯಲ್ಲ ಎನ್ನುವುದನ್ನು ನಿರೂಪಿಸಲು ಇದು ಸಕಾಲ. ತಕ್ಷಣ ಮಧ್ಯ ಪ್ರವೇಶಿಸಿ ರಾಜ್ಯಪಾಲರಿಗೆ ಸೂಕ್ತ ಮಾಗದರ್ಶನ ನೀಡಿ, ಕೇಂದ್ರ ರಾಜ್ಯಗಳ ನಡುವಿನ ಈ ಸಂಘರ್ಷಕ್ಕೆ ಕೊನೆ ಹಾಡಬೇಕು. ಒಕ್ಕೂಟ ವ್ಯವಸ್ಥೆಯ ಹೊಲಿಗೆ ಹರಿದು ಹೋಗದಂತೆ ಕಾಪಾಡಬೇಕು.

Similar News