ರಾಜಕಾರಣಿಗಳ ನಾಲಗೆಯ ಮೇಲೆ ಹಿಡಿತವಿರಲಿ

Update: 2023-01-24 04:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕರ್ನಾಟಕದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ರಾಜಕಾರಣಿಗಳು ನಾಲಗೆಯ ಮೇಲೆ ನಿಯಂತ್ರಣ ಕಳೆದುಕೊಂಡು ನಗೆಪಾಟಲಿಗೆ ಈಡಾಗುತ್ತಿದ್ದಾರೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ತಾತ್ವಿಕ ವಾದ ವಿವಾದಗಳು ಘನತೆಯಿಂದ ಕೂಡಿದ್ದರೆ ಮಾತಾಡುವವರ ವ್ಯಕ್ತಿತ್ವದ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಮೂಡುತ್ತದೆ. ಆದರೆ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಇತ್ತೀಚೆಗೆ ತಮ್ಮ ನಾಲಗೆಯ ಮೇಲೆ ಹಿಡಿತವನ್ನು ಕಳೆದುಕೊಂಡು ಅತ್ಯಂತ ಅಸಭ್ಯ ವಾಗಿ ಮಾತಾಡುತ್ತಿದ್ದಾರೆ. ಬಾಯಿಯ ಬಳಿ ಟಿವಿ ಮೈಕ್ ಬಂದರೆ ಇವರಲ್ಲಿ ವೀರಾವೇಶ ಹೆಚ್ಚಾಗುತ್ತದೆ. ಇವರಲ್ಲಿ ಹೆಚ್ಚಿನವರು ಜನಪ್ರತಿನಿಧಿಗಳು. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ಹೊರಟವರು. ವಿಶೇಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಮತ್ತು ಅದೇ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಸಚಿವರಾದ ಬಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳರು ಆಡುತ್ತಿರುವ ಮಾತುಗಳನ್ನು ಗಮನಿಸಿದರೆ ಅಸಹ್ಯವಾಗುತ್ತಿದೆ.

ನಾಲಗೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುವವರಲ್ಲಿ ಹೆಚ್ಚಿನವರು ಶಿಸ್ತಿಗೆ ಹೆಸರಾದ ಪಕ್ಷಕ್ಕೆ ಸೇರಿದವರು. ವ್ಯಕ್ತಿತ್ವ ನಿರ್ಮಾಣ ಮಾಡುವುದಾಗಿ ಬಡಾಯಿ ಕೊಚ್ಚಿಕೊಳ್ಳುವ ಸಂಘಟನೆಗೆ ಸೇರಿದವರು. ಪ್ರತಿಪಕ್ಷವಾದ ಕಾಂಗ್ರೆಸ್‌ನವರನ್ನು ಟೀಕಿಸುವ ಭರದಲ್ಲಿ ಆಡಬಾರದ ಮಾತುಗಳನ್ನು ಇವರು ಆಡುತ್ತಿದ್ದಾರೆ. ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ತಾವು ಮಾರಿಕೊಂಡು ಪಕ್ಷಾಂತರ ಮಾಡಿದ ಶಾಸಕರ ಬಗ್ಗೆ ಮಾತನಾಡುತ್ತಾ ‘‘ಹೊಟ್ಟೆಪಾಡಿಗಾಗಿ ಮೈ ಮಾರಿಕೊಳ್ಳುವ ಮಹಿಳೆಯನ್ನು ವೇಶ್ಯೆ ಎಂದು ಕರೆಯುತ್ತಾರೆ, ಪಕ್ಷಾಂತರ ಮಾಡಿದ ಶಾಸಕರಿಗೆ ಏನೆಂದು ಕರೆಯಬೇಕು?’’ ಎಂದು ಪ್ರಶ್ನಿಸಿದ್ದಾರೆ. ಅವರು ಹಾಗೆ ಮಾತನಾಡಬಾರದಿತ್ತು. ಅದಕ್ಕಾಗಿ ನಂತರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಮಾತನ್ನು ಹಿಡಿದುಕೊಂಡು ಕುಂಬಳಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿ ನೋಡಿದ ಎನ್ನುವಂತೆ ಸಚಿವರಾದ ಬಿ.ಸಿ.ಪಾಟೀಲ್ ಮತ್ತು ಮುನಿರತ್ನ ಅವರು ಅತ್ಯಂತ ಅಸಭ್ಯ ಮಾತುಗಳನ್ನು ಆಡಿದ್ದಾರೆ. ಅದರಲ್ಲೂ ಬಿ.ಸಿ.ಪಾಟೀಲ್ ಅವರು ಹರಿಪ್ರಸಾದ್ ವಿಧಾನ ಪರಿಷತ್‌ನ ಸದಸ್ಯರಾಗಿರುವ ಬಗ್ಗೆ ಅತ್ಯಂತ ಕೆಳ ಮಟ್ಟದ ಟೀಕೆಯನ್ನು ಮಾಡಿದ್ದಾರೆ. ಹಿಂಬಾಗಿಲಿನಿಂದ ಮೇಲ್ಮನೆ ಪ್ರವೇಶಿಸಿದ ಹರಿಪ್ರಸಾದ್‌ರನ್ನು ‘ಪಿಂಪ್’ ಎಂದು ಕರೆದಿದ್ದಾರೆ. ಇದು ಹರಿಪ್ರಸಾದ್‌ರಿಗೆ ಮಾತ್ರವಲ್ಲ ವಿಧಾನ ಪರಿಷತ್‌ನ ಘನತೆ ಮತ್ತು ಗೌರವಕ್ಕೆ ಅಪಚಾರ ಮಾಡಿದಂತೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರೂ ಇದ್ದಾರೆ. ಅವರೆಲ್ಲರಿಗೂ ಸಚಿವರು ಅವಮಾನ ಮಾಡಿದಂತಾಗಿದೆ. ತಮ್ಮ ಮಂತ್ರಿ ಮಂಡಲದ ಮಂತ್ರಿಗಳ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ನಿಯಂತ್ರಣ ಇದ್ದಂತಿಲ್ಲ. ಹಾಗಾಗಿಯೇ ಇವರೆಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಜನಪ್ರತಿನಿಧಿಗಳ ನಡುವಿನ ವಾಗ್ವಾದ, ಕೆಸರೆರಚಾಟ ಸಹಜ ಎಂದು ಲಘುವಾಗಿ ತೆಗೆದುಕೊಳ್ಳಬಹುದು. ಆದರೆ ರಾಜ್ಯದ ಆಡಳಿತ ಪಕ್ಷದ ಮಂತ್ರಿ ಮತ್ತು ಶಾಸಕರ ನಡುವಿನ ಬಹಿರಂಗ ಕೆಸರೆರಚಾಟ ಅತ್ಯಂತ ಅಸಭ್ಯ ರೂಪ ತಾಳಿದೆ. ಮಂತ್ರಿ ಮುರುಗೇಶ್ ನಿರಾಣಿ ಮತ್ತು ಅವರದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜಗಳ, ಪರಸ್ಪರ ಬೈಗಳ ವಿನಿಮಯ ಸಭ್ಯತೆಯ ಹಂತವನ್ನು ದಾಟಿದೆ. ತಮ್ಮ ಪಕ್ಷದ ಶಾಸಕರ ನಾಲಗೆ ಕತ್ತರಿಸುವುದಾಗಿ ಸಚಿವರು ಬಹಿರಂಗವಾಗಿ ಮಾಧ್ಯಮ ಪ್ರತಿನಿಧಿಗಳ ಎದುರಿಗೇ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಬಸನಗೌಡ ಪಾಟೀಲ ಯತ್ನಾಳರು ಆಡಿದ ಮಾತುಗಳು ಕೂಡ ಅತ್ಯಂತ ಅಸಭ್ಯವಾಗಿವೆ. ಶಿಸ್ತಿನ ಪಕ್ಷದ ರಾಷ್ಟ್ರೀಯ ನಾಯಕರು ಇದನ್ನೆಲ್ಲ ಕಂಡೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ನಾಲಿಗೆ ಕತ್ತರಿಸುವ ಮಾತನ್ನಾಡುವ ಮಂತ್ರಿಗಳಿಗೆ ಈ ನೆಲದ ಕಾನೂನು ಮತ್ತು ಸಂವಿಧಾನದ ಬಗ್ಗೆ ಎಷ್ಟು ಗೌರವವಿದೆ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗಾಗ ಸಂಯಮ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಆಡಿದ ಕ್ರಿಯೆಗೆ ಪ್ರತಿಕ್ರಿಯೆಯ ಮಾತುಗಳು ಸಾಕಷ್ಟು ಟೀಕೆಗೊಳಗಾದ ನಂತರವೂ ಇತ್ತೀಚೆಗೆ ಅನವಶ್ಯಕವಾಗಿ ‘‘ಮಹಾತ್ಮಾ ಗಾಂಧಿ ಪಾದದ ಧೂಳಿಗೆ ಜವಾಹರಲಾಲ್ ನೆಹರೂ ಸಮಾನರೇ?’’ ಎಂದು ಪ್ರಶ್ನಿಸಿದರು. ಮಹಾತ್ಮಾ ಗಾಂಧಿ ಮತ್ತು ನೆಹರೂ ಸ್ವಾತಂತ್ರ್ಯ ಹೋರಾಟದ ನೇತಾರರು. ಗುರು ಶಿಷ್ಯರಂತೆ ಬದುಕಿದವರು. ತಮ್ಮ ಕೊಳಕು ರಾಜಕಾರಣಕ್ಕೆ ಅವರನ್ನು ಎಳೆದುತಂದು ಸಂಘ ಪರಿವಾರದ ನಾಯಕರನ್ನು ಓಲೈಸುವ ಮಟ್ಟಕ್ಕೆ ಬೊಮ್ಮಾಯಿಯವರು ಇಳಿಯಬಾರದಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘‘ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾದದ ಧೂಳಿಗೆ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾನರಲ್ಲ’’ ಎಂದು ಲೇವಡಿ ಮಾಡಿದರು. ತಮ್ಮ ಪಕ್ಷದ ನಾಯಕರನ್ನು ಒಲಿಸಿಕೊಳ್ಳಲು, ಓಲೈಸಲು ಯಡಿಯೂರಪ್ಪರಂಥವರು ಇಷ್ಟು ಕೀಳು ಮಟ್ಟದ ಮಾತನ್ನು ಆಡಬಾರದಿತ್ತು.

ಅಧಿಕಾರಕ್ಕಾಗಿ ವಲಸೆ ಬಂದವರ ಹುಲ್ಲುಗಾವಲಾದ ಬಿಜೆಪಿಯಲ್ಲಿ ಮೂಲ ನಿವಾಸಿಗಳು ಮೂಲೆ ಗುಂಪಾಗಿದ್ದಾರೆ. ಬೊಮ್ಮಾಯಿ ಸರಕಾರದ ಕೆಲವು ಮಂತ್ರಿಗಳು ಪಾಳೆಗಾರರಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸೌಜನ್ಯದಿಂದ ನಡೆಯುವ ಅರಿವಿಲ್ಲದ ಇವರು ದುರಹಂಕಾರದಿಂದ, ದರ್ಪದಿಂದ ನಡೆದುಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂಥವರನ್ನು ಕಟ್ಟಿಕೊಂಡು ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಗೆ ಮತದಾರರ ಬಳಿ ಹೋಗುತ್ತಾರೆ.

ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷದ ಶಾಸಕರಿಗೆ ಮತ್ತು ಸಚಿವರಿಗೆ ಸಹನೆ, ತಾಳ್ಮೆ ಮತ್ತು ಟೀಕೆ ಟಿಪ್ಪಣಿಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಮನೋಭಾವ ಇರಬೇಕು. ಸರಕಾರದ ಬಗ್ಗೆ ಟೀಕೆ, ವಿಮರ್ಶೆಗಳನ್ನು ಮಾಡುವುದು ಪ್ರತಿಪಕ್ಷಗಳ ಸಹಜ ಜಾಯಮಾನ. ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಾಲದಿಂದಲೂ ನಮ್ಮ ಸಂಸದೀಯ ವ್ಯವಸ್ಥೆ ಇಂತಹ ಆರೋಗ್ಯಕರ ಟೀಕೆ, ವಿಮರ್ಶೆಗಳಿಗೆ ಹೆಸರಾಗಿದೆ. ಆದರೆ ಕರ್ನಾಟಕದ ಬಿಜೆಪಿ ಶಾಸಕರು ಮತ್ತು ಮಂತ್ರಿಗಳು ಸದನದಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದನ್ನು ಗಮನಿಸಿದರೆ ಅವರ ರಾಜಕೀಯ ಮಟ್ಟದ ಬಗ್ಗೆ ಕಳವಳ ಉಂಟಾಗುತ್ತದೆ. ಪ್ರತಿಪಕ್ಷಗಳ ಶಾಸಕರು ಸರಕಾರದ ಮೇಲೆ ಯಾವುದಾದರೂ ಆರೋಪ ಮಾಡಿದರೆ ಅಧಿಕಾರದಲ್ಲಿರುವವರು ಅದಕ್ಕೆ ಸೌಜನ್ಯದಿಂದ ಸಮರ್ಪಕ ಉತ್ತರ ನೀಡಬೇಕು.ಆದರೆ ಬಿಜೆಪಿ ಶಾಸಕರು, ಸಚಿವರು ಇದಕ್ಕೆ ತದ್ವಿರುದ್ಧವಾಗಿ ನೀವು ಅಧಿಕಾರದಲ್ಲಿದ್ದಾಗ ಮಾಡಿಲ್ಲವೇ ಎಂದು ಗಲಾಟೆ ಮಾಡಿ ಬಾಯಿ ಮುಚ್ಚಿಸಲು ಮುಂದಾಗುವುದು ಸರಿಯಲ್ಲ.

ಪ್ರಜಾಪ್ರಭುತ್ವದಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳು ಸಹಜ. ಯಾವುದೇ ವಿಚಾರದ ಬಗ್ಗೆ ಆರೋಗ್ಯಕರ ಸಂವಾದ ನಡೆದರೆ ಸ್ವಾಗತಾರ್ಹ. ಹಿಂದೆ ಸಂಸತ್ತಿನಲ್ಲಿ ನೆಹರೂ ಸರಕಾರದ ವಿರುದ್ಧ ಸಮಾಜವಾದಿ ನಾಯಕರಾದ ರಾಮ ಮನೋಹರ ಲೋಹಿಯಾ, ಮಧು ಲಿಮಯೆ, ಕಮ್ಯುನಿಸ್ಟ್ ನಾಯಕರಾದ ಎಸ್.ಎ. ಡಾಂಗೆ, ಎ.ಕೆ. ಗೋಪಾಲನ್, ಭೂಪೇಶ್ ಗುಪ್ತಾ ಹಾಗೂ ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಅವರು ಎಷ್ಟು ಘನತೆ ಮತ್ತು ಸೌಜನ್ಯ ದಿಂದ ಟೀಕಿಸುತ್ತಿದ್ದರೆಂದು ತಿಳಿದವರಿಗೆಲ್ಲ ಗೊತ್ತಿದೆ. ಕರ್ನಾಟಕದ ವಿಧಾನ ಸಭೆಯಲ್ಲಿ ಮುಖ್ಯ ಮಂತ್ರಿ ನಿಜಲಿಂಗಪ್ಪ, ಬಿ.ಡಿ.ಜತ್ತಿ ಅವರ ಕಾಲದಿಂದ ದೇವರಾಜ ಅರಸು ಕಾಲದವರೆಗೆ ಕೂಡ ಶಾಂತವೇರಿ ಗೋಪಾಲಗೌಡ, ಬಿ.ವಿ.ಕಕ್ಕಿಲ್ಲಾಯರಂಥವರು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವಾಗ ಎಂದಿಗೂ ಸಂಸದೀಯ ಪರಂಪರೆಗೆ ಚ್ಯುತಿ ತರುತ್ತಿರಲಿಲ್ಲ. ಆದರೆ ಈಗ ಅಂಥವರ ಸಂಖ್ಯೆ ತುಂಬಾ ಕಡಿಮೆ.

ಅಧಿಕಾರ ಎಂಬುದು ಶಾಶ್ವತವಲ್ಲ. ಹಣ ಮಾಡಿಕೊಳ್ಳುವ ದಂಧೆಯಲ್ಲ. ಇದರ ಅರಿವನ್ನು ಕಳೆದುಕೊಂಡು ದರ್ಪದಿಂದ ವರ್ತಿಸಿದರೆ ಸಾರ್ವಜನಿಕರು ಕ್ಷಮಿಸುವುದಿಲ್ಲ ಎಂಬುದನ್ನು ಮರೆಯಬಾರದು.

ಈಗ ಚುನಾವಣೆ ಸಮೀಪಿಸುತ್ತಿರುವ ಕಾಲ. ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಹಾಗೂ ಕಾರ್ಯಕರ್ತರು ಸಂಯಮದಿಂದ ನಡೆದುಕೊಳ್ಳುವುದು ಅಗತ್ಯ. ಅದರಲ್ಲೂ ಆಡಳಿತ ಪಕ್ಷದಲ್ಲಿ ಅಧಿಕಾರಕ್ಕಾಗಿ ವಲಸೆ ಬಂದ ಮಂತ್ರಿಗಳು ಮತ್ತು ಶಾಸಕರು ತಮ್ಮ ಮಾತಿಗೆ ಕಡಿವಾಣ ಹಾಕಿಕೊಳ್ಳಬೇಕು. ಮುಖ್ಯಮಂತ್ರಿಗಳು ಇವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗಿದೆ.

Similar News