ಹೆಣ್ಣು ಮಕ್ಕಳ ವಿರುದ್ಧ ಕೊನೆಯಿಲ್ಲದ ಕರಾಳ ತಾರತಮ್ಯ

ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

Update: 2023-01-24 05:03 GMT

ಹೆಣ್ಣನ್ನು ಗೌರವಿಸುವ ವಿಶೇಷ ದಿನವಾಗಿ ಭಾರತದಲ್ಲಿ ವರ್ಷವೂ ಜನವರಿ 24ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ಹೆಣ್ಣುಮಕ್ಕಳ ಹಕ್ಕುಗಳು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡುವ ಉದ್ದೇಶದ ಈ ದಿನದ ಆಚರಣೆಯನ್ನು 2008ರಲ್ಲಿ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯ ಆರಂಭಿಸಿತು. ಹೆಣ್ಣು ಶಿಶುಹತ್ಯೆ, ಲಿಂಗ ಅಸಮಾನತೆ ಮತ್ತು ದೈಹಿಕ ದೌರ್ಜನ್ಯದಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗುರಿ ಇದರದ್ದು.

ಈಗಿನ ಸರಕಾರವಂತೂ ಬೇಟಿ ಬಚಾವೋ ಎನ್ನುತ್ತಿದೆ. ಆದರೆ ನಿಜವಾಗಿಯೂ ಅದು ಸರಕಾರದ ಕಾಳಜಿಯೇ, ಬರೀ ಘೋಷಣೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಏಳುತ್ತದೆ. ಲಭ್ಯ ಅಂಕಿ ಅಂಶಗಳನ್ನು ನೋಡಿಕೊಂಡರೆ, ಎಲ್ಲವೂ ಘೋಷಣೆಯ ಮಟ್ಟಕ್ಕೇ ಇವೆ ಎಂಬುದು ಗೊತ್ತಾಗುತ್ತದೆ. ಹೆಣ್ಣು ಭ್ರೂಣ ಹತ್ಯೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಅಧ್ಯಯನವೊಂದರ ಅಂದಾಜಿನ ಪ್ರಕಾರ, ಭಾರತದಲ್ಲಿ 2030ರ ವೇಳೆಗೆ ಜನಿಸಲಿರುವ ಹೆಣ್ಣುಮಕ್ಕಳ ಸಂಖ್ಯೆ 68 ಲಕ್ಷದಷ್ಟು ಕಡಿಮೆಯಾಗಲಿದೆ.

ಅಂದಹಾಗೆ ದೇಶದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತರಪ್ರದೇಶದಲ್ಲಿಯೇ ಹೆಚ್ಚು ಭ್ರೂಣಹತ್ಯೆಗಳು ನಡೆಯುತ್ತವೆ ಎಂಬುದನ್ನೂ ಅಧ್ಯಯನವು ಉಲ್ಲೇಖಿಸುತ್ತದೆ. ಜನನ ಸಂದರ್ಭದಲ್ಲಿನ ಲಿಂಗಾನುಪಾತವಂತೂ 1970ರಿಂದಲೂ ತೀವ್ರ ಅಸಮತೋಲನವೇ ಕಂಡುಬಂದಿದೆ.

2020ರಲ್ಲಿ, ಭಾರತದಲ್ಲಿ ಒಟ್ಟು ಜನಸಂಖ್ಯೆಯ ಲಿಂಗ ಅನುಪಾತವು 100 ಮಹಿಳೆಯರಿಗೆ 108.18 ಪುರುಷರು. ಆಗಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 71,71,00,970 ಪುರುಷರು ಮತ್ತು 66,29,03,415 ಮಹಿಳೆಯರು ಇದ್ದಾರೆ. 51.96ರಷ್ಟು ಪುರುಷರ ಪ್ರಮಾಣಕ್ಕೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಶೇ. 48.04ರಷ್ಟಿದೆ.

2011ರ ಜನಗಣತಿಯ ಪ್ರಕಾರ, ಭಾರತದ ಲಿಂಗ ಅನುಪಾತವು 1,000 ಪುರುಷರಿಗೆ 943 ಮಹಿಳೆಯರು ಎಂದಿತ್ತು. ಗ್ರಾಮೀಣ ಪ್ರದೇಶದಲ್ಲಿ 1,000 ಪುರುಷರಿಗೆ 949 ಮಹಿಳೆಯರಿದ್ದರೆ, ನಗರ ಪ್ರದೇಶದಲ್ಲಿ 1,000 ಪುರುಷರಿಗೆ 929 ಮಹಿಳೆಯರಿದ್ದರು. ಗ್ರಾಮೀಣ ಭಾರತದಲ್ಲಿ ಮಹಿಳೆಯರ ಒಟ್ಟು ಸಂಖ್ಯೆಗಿಂತ 2,18,13,264 ಹೆಚ್ಚು ಪುರುಷರು ಇದ್ದರು. ಅದೇ ವೇಳೆ ನಗರ ಪ್ರದೇಶಗಳಲ್ಲಿ ಮಹಿಳೆಯರಿಗಿಂತ 1,38,72,275 ಹೆಚ್ಚು ಪುರುಷರು ಇದ್ದರು. ಭಾರತದ ಲಿಂಗ ಅನುಪಾತವು 2001ರಲ್ಲಿ 933 ಇದ್ದದ್ದು 2011ರಲ್ಲಿ 943ಕ್ಕೆ ಸುಧಾರಿಸಿತ್ತು. 1901ರಲ್ಲಿ, ಭಾರತವು 972ರ ಅತ್ಯಧಿಕ ಲಿಂಗ ಅನುಪಾತವನ್ನು ಹೊಂದಿತ್ತು.

2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 1000 ಪುರುಷರಿಗೆ 1,020 ಮಹಿಳೆಯರಿದ್ದಾರೆ. ಆದರೆ ನಿಜವಾಗಿಯೂ ಇಂಥದೊಂದು ಬದಲಾವಣೆ ಸಾಧ್ಯವಾಗಿದೆಯೇ?

2016ರಲ್ಲಿ ಭಾರತದ ಜನಸಂಖ್ಯೆ 129 ಕೋಟಿ ಆಗಿತ್ತು. ಇದೇ ಎನ್‌ಎಫ್‌ಎಚ್‌ಎಸ್ 2015-16ರ ಅಂದಾಜಿನ ಪ್ರಕಾರ ಲಿಂಗ ಅನುಪಾತವು 991 ಆಗಿದ್ದರೆ, ಜನಸಂಖ್ಯೆಯು 64 ಕೋಟಿ 30 ಲಕ್ಷ ಮಹಿಳೆಯರು ಮತ್ತು 64 ಕೋಟಿ 90 ಲಕ್ಷ ಪುರುಷರನ್ನು ಒಳಗೊಂಡಿರುತ್ತದೆ. 2021ರಲ್ಲಿ 136 ಕೋಟಿ ಜನಸಂಖ್ಯೆಗೆ, 1,020ರ ಲಿಂಗ ಅನುಪಾತವೆಂದರೆ, 68 ಕೋಟಿ 80 ಲಕ್ಷ ಮಹಿಳೆಯರು ಮತ್ತು 67 ಕೋಟಿ 50 ಲಕ್ಷ ಪುರುಷರು ಇರಬೇಕು. ಅಂದರೆ ಕಳೆದ ಐದು ವರ್ಷಗಳಲ್ಲಿ ಪುರುಷರ ಸಂಖ್ಯೆಯಲ್ಲಿ 2.6 ಕೋಟಿ ಮಾತ್ರವೇ ಏರಿಕೆಯಾಗಿದ್ದರೆ ಮಹಿಳೆಯರ ಸಂಖ್ಯೆಯಲ್ಲಿ 4.5 ಕೋಟಿ ಏರಿಕೆ. ಪುರುಷರಿಗಿಂತ ಮಹಿಳೆಯರ ಸಂಖ್ಯೆಯಲ್ಲಿ ಎರಡು ಪಟ್ಟು ಹೆಚ್ಚಳ. ಇಂಥದೊಂದು ಅಗಾಧ ವ್ಯತ್ಯಾಸವು ನಂಬಲು ಅಸಾಧ್ಯದ್ದಾಗಿ ತೋರುತ್ತದೆ ಎಂದೇ ತಜ್ಞರು ಇದನ್ನು ಎಚ್ಚರಿಕೆಯಿಂದ ನೋಡಬೇಕೆಂದಿದ್ದರು.

ದೇಶದಲ್ಲಿ ಕಡೆಯ ಬಾರಿಗೆ ನಡೆದ 2011ರ ಜನಗಣತಿಯ ಪ್ರಕಾರ, ಭಾರತದ ಲಿಂಗಾನುಪಾತವು 1,000 ಪುರುಷರಿಗೆ 943 ಮಹಿಳೆಯರಿದ್ದರು ಎಂಬುದನ್ನೂ, 6 ವರ್ಷಗಳವರೆಗಿನ ಮಕ್ಕಳ ಲಿಂಗಾನುಪಾತವು 1,000 ಹುಡುಗರಿಗೆ 918 ಹುಡುಗಿಯರು ಎಂದಿದ್ದುದನ್ನೂ ಹೇಳಿತ್ತು. ಹಾಗಾದರೆ ಕೇವಲ 10 ವರ್ಷಗಳಲ್ಲಿ ಇದೆಲ್ಲ ಪೂರ್ತಿ ಬದಲಾಗಿಹೋಯಿತೇ? ಎಂಬುದು ಪರಿಣಿತರ ಪ್ರಶ್ನೆ.

ಭಾರತವನ್ನು ಬಹಳ ಹಿಂದಿನಿಂದಲೂ ಕಾಣೆಯಾದ ಮಹಿಳೆಯರ ದೇಶ ಎಂದು ಕರೆಯಲಾಗುತ್ತದೆ. 1990ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಲಿಂಗಾನುಪಾತವು ಪ್ರತೀ 1,000 ಪುರುಷರಿಗೆ 927 ಮಹಿಳೆಯರು ಎಂದು ತೀರಾ ಕುಸಿದ ಪ್ರಮಾಣವನ್ನು ಉಲ್ಲೇಖಿಸುವಾಗ, 3.7 ಕೋಟಿ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ ಎಂದು ಹೇಳಿದ್ದರು. ಹೀಗೆ ಕಾಣೆಯಾದ ಹೆಣ್ಣುಮಕ್ಕಳ ದೊಡ್ಡ ಪ್ರಮಾಣದ ಹಿಂದೆ ಭ್ರೂಣಹತ್ಯೆ, ಶಿಶುಹತ್ಯೆ, ನಿಂದನೆ, ನಿರ್ಲಕ್ಷ್ಯದಂಥ ಘೋರ ಸಂಗತಿಗಳು ಇವೆ.

ನಮ್ಮ ದೇಶದಲ್ಲಿ ಗಂಡುಮಕ್ಕಳಿಗೇ ಮೊದಲ ಆದ್ಯತೆ. ಇದು ಇತ್ತೀಚೆಗೆ ಕಡಿಮೆಯಾಗಿದೆ ಎನ್ನಿಸುತ್ತಿದ್ದರೂ ಇನ್ನೂ ಬೇರೂರಿರುವ ನಂಬಿಕೆಗಳು ಹೆಣ್ಣುಮಗುವನ್ನು ಹುಟ್ಟುವ ಮೊದಲೇ ಇಲ್ಲವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗಂಡು ಮಗು ಕುಟುಂಬದ ಪರಂಪರೆಯನ್ನು ಮುಂದಕ್ಕೆ ಸಾಗಿಸುತ್ತದೆ ಮತ್ತು ವೃದ್ಧಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳುತ್ತದೆ ಎಂಬುದು, ಹೆಣ್ಣುಮಕ್ಕಳು ಇದ್ದರೆ ವರದಕ್ಷಿಣೆಗಾಗಿ ಭಾರೀ ಖರ್ಚು ಮಾಡಬೇಕಾಗುತ್ತದೆ ಎನ್ನುವಲ್ಲಿಯವರೆಗೆ ಇಂಥ ಕೆಟ್ಟ ನಂಬಿಕೆಗಳ ದೊಡ್ಡ ಪಟ್ಟಿಯನ್ನೇ ಕಾಣಬಹುದು.

ಈ ಹೆಣ್ಣು ವಿರೋಧಿ ನಿಲುವಿಗೆ ಬೆಂಬಲವಾಗಿ 1970ರ ದಶಕದಿಂದ ಪ್ರಸವಪೂರ್ವ ಲಿಂಗಪತ್ತೆ ಪರೀಕ್ಷೆ ಲಭ್ಯವಾದುದರಿಂದ ಕೋಟಿಗಟ್ಟಲೆ ಹೆಣ್ಣುಗಳನ್ನು ಭ್ರೂಣಾವಸ್ಥೆಯಲ್ಲಿಯೇ ಕೊಲ್ಲಲಾಯಿತು. ಇದು ಲಿಂಗಾನುಪಾತದ ವ್ಯತ್ಯಾಸಕ್ಕೆ ತೀವ್ರ ಕಾರಣವಾಯಿತು. 1994ರಲ್ಲಿ ಲಿಂಗಪತ್ತೆ ಪರೀಕ್ಷೆಯನ್ನು ಮತ್ತು ಹೆಣ್ಣು ಭ್ರೂಣಹತ್ಯೆಯನ್ನು ನಿರ್ಬಂಧಿಸಲಾಯಿತು. ಇಷ್ಟಾಗಿಯೂ ಲಿಂಗಾಧಾರಿತ ಗರ್ಭಪಾತಗಳು ಇವತ್ತಿಗೂ ವ್ಯಾಪಕವಾಗಿ ನಡೆಯುತ್ತಲೇ ಇವೆ.

ಒಕ್ಕೂಟ ಸರಕಾರದ 2020ರ ಸಮೀಕ್ಷಾ ವರದಿಯ ಪ್ರಕಾರ, ಉತ್ತರ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿದ್ದ ಲಿಂಗಾನುಪಾತ ಕುಸಿತ ಈಗ ದಕ್ಷಿಣ ಭಾರತದಲ್ಲಿಯೂ ಪಿಡುಗಿನಂತೆ ತಲೆದೋರುತ್ತಿದೆ. ಕರ್ನಾಟಕದಲ್ಲಿ 1,000 ಗಂಡುಮಕ್ಕಳಿಗೆ 916 ಹೆಣ್ಣುಮಕ್ಕಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಾವಿರಕ್ಕೆ 912 ಹೆಣ್ಣುಮಕ್ಕಳಿದ್ದರೆ, ನಗರ ಪ್ರದೇಶದಲ್ಲಿ ಇದು ತೀವ್ರ ಕುಸಿದಿದ್ದು, ಮಹಿಳೆಯರ ಸಂಖೆ 871 ಎಂದು ದಾಖಲಾಗಿದೆ. ಹೆಣ್ಣುಮಕ್ಕಳ ವಿರುದ್ಧದ ಈ ಕರಾಳ ತಾರತಮ್ಯ ಕೊನೆಯೇ ಇಲ್ಲದ ಪಿಡುಗು ಎಂಬಂತಾಗಿದೆ.

Similar News